ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಗುಟ್ಟಾಗಿ ಎರಡು ಮಕ್ಕಳ ತಾಯಿಯನ್ನು (Cheating Case) ವಿವಾಹವಾಗಿ ಪತ್ನಿಗೆ ಮೋಸ ಮಾಡಿರುವ ಪ್ರಕರಣ ಹೆಣ್ಣೂರು ಪೊಲೀಸ್ ಠಾಣಾ (Bengaluru) ವ್ಯಾಪ್ತಿಯಲ್ಲಿ ನಡೆದಿದೆ.
ಅನಾಥೆಯಾಗಿದ್ದ ಹಿಂದೂ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ಮೊಹಮ್ಮದ್ ಸದಾಕತ್ ಅಲಿ ಎಂಬಾತ, ಈಗ ಗುಟ್ಟಾಗಿ ಮತ್ತೊಂದು ಮದುವೆಯಾಗಿ ವಂಚಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ.
ಸಂತ್ರಸ್ತೆಗೆ ತಂದೆ-ತಾಯಿ ಯಾರೂ ಇರಲಿಲ್ಲ. ಸುಮಾರು 10 ವರ್ಷಗಳ ಹಿಂದೆ ಕಾವಲಭೈರಸಂದ್ರದ ಸ್ನೇಹಿತರ ಮನೆಗೆ ಹೋಗಿದ್ದಾಗ ಆಕೆಗೆ ಮೊಹಮ್ಮದ್ ಸದಾಕತ್ ಅಲಿಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಬರೋಬ್ಬರಿ 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. ಬಳಿಕ ಕಳೆದ 5 ವರ್ಷಗಳ ಹಿಂದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು.
ಈ ಮದುವೆಗೆ ಗೆಳೆಯ ಅನಿಲ್ ಕುಮಾರ್ ಹಾಗೂ ಅವರ ಪತ್ನಿ ಸಾಕ್ಷಿಯಾಗಿ ಸಹಿ ಹಾಕಿದ್ದರು. ಮದುವೆಯ ವಿಚಾರವನ್ನು ಮೊಹಮ್ಮದ್ ತನ್ನ ಕುಟುಂಬಕ್ಕೆ ತಿಳಿಸಿರಲಿಲ್ಲ. ಆದರೆ, ಇಬ್ಬರೂ ಕಲ್ಯಾಣನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಮೊಹಮ್ಮದ್ ಮನೆಗೆ ಸರಿಯಾಗಿ ಬರುವುದನ್ನೇ ನಿಲ್ಲಿಸಿದ್ದ. ಇದರಿಂದ ಅನುಮಾನಗೊಂಡ ಪತ್ನಿ, ಯಾಕೆ ಮನೆಗೆ ಬರುತ್ತಿಲ್ಲ ಎಂದು ಗಂಡನನ್ನು ಪ್ರಶ್ನಿಸಿ ಜಗಳ ಮಾಡಿದ್ದಳು. ಆಗ ಅಸಲಿ ಸತ್ಯ ಬಾಯಿಬಿಟ್ಟ ಮೊಹಮ್ಮದ್, ತಾನು ಈಗಾಗಲೇ ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿರುವುದಾಗಿ ಹೇಳಿದ್ದ.ಇದನ್ನೂ ಓದಿ: ಅರುಣಾಚಲದಲ್ಲಿ ಭಾರೀ ಅಗ್ನಿ ಅವಘಡ – ಮೂವರು ಅಪ್ರಾಪ್ತರು ಸೇರಿ 4 ಮಂದಿ ಸಜೀವ ದಹನ
ಒಂದು ತಿಂಗಳ ಹಿಂದೆ ಈತ ಎರಡನೇ ಮದುವೆಯಾಗಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಮೊದಲು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಇದೀಗ ನ್ಯಾಯಕ್ಕಾಗಿ ನಗರ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾಳೆ.ಇದನ್ನೂ ಓದಿ: ಅರುಣಾಚಲದಲ್ಲಿ ಭಾರೀ ಅಗ್ನಿ ಅವಘಡ – ಮೂವರು ಅಪ್ರಾಪ್ತರು ಸೇರಿ 4 ಮಂದಿ ಸಜೀವ ದಹನ
