– ಆತ್ಮಕಥೆಯಲ್ಲಿ ತಮ್ಮ ಮೊದಲ ಮಗುವಿನ ಬಗ್ಗೆ ಸೋನಿಯಾ ಗಾಂಧಿ ಉಲ್ಲೇಖ
– ಮಗು ಕಳೆದುಕೊಂಡು ದುಃಖದಲ್ಲಿದ್ದ ಸೊಸೆ ಅಪ್ಪಿಕೊಂಡು ಸಂತೈಸಿದ್ದ ಇಂದಿರಾ ಗಾಂಧಿ
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಕಥೆ ‘Belonging: A Journey of Love’ ಪುಸ್ತಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತಮ್ಮ ಆತ್ಮಕಥೆಯಲ್ಲಿ ಸೋನಿಯಾ ಅವರು ಹಲವಾರು ಕೌತುಕದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮೊದಲ ಮಗುವಿನ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ದಂಪತಿಗೆ ರಾಹುಲ್ ಗಾಂಧಿಗೂ ಮುನ್ನ ಮಗುವೊಂದು ಜನಿಸಿತ್ತು. ಆದರೆ, ಆ ಮಗು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿತು ಎಂಬ ವಿಚಾರವನ್ನು ಸೋನಿಯಾ ಅವರು ತಿಳಿಸಿದ್ದಾರೆ. ‘ನಾವು ಮೊದಲ ಮಗುವನ್ನು ತುಂಬಾ ಪ್ರೀತಿಸುತ್ತಿದ್ದೆವು.. ಆದರೆ, ಹುಟ್ಟಿದ ಕೆಲವೇ ಹೊತ್ತಲ್ಲಿ ನಮ್ಮ ಮೊದಲ ಮಗು ಮೃತಪಟ್ಟಿತು’ ಎಂದು ಬರೆದುಕೊಂಡಿದ್ದಾರೆ.
ಗಾಂಧಿ ಕುಟುಂಬದಲ್ಲಿ 1969ರ ಜನವರಿಯಲ್ಲಿ ಈ ದುರಂತ ಸಂಭವಿಸಿತು. ತಮ್ಮ ಮೊಮ್ಮಗು ಮೃತಪಟ್ಟ ವಿಷಯ ತಿಳಿದ ಇಂದಿರಾ ಗಾಂಧಿ ಅವರು ಸೊಸೆ ಸೋನಿಯಾರನ್ನು ಅಪ್ಪಿಕೊಂಡು ಸಂತೈಸಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಮಾರುಕಟ್ಟೆಗೆ – ರಾಜಕೀಯ ಜೀವನದ ಹತ್ತಾರು ಕೌತುಕಗಳು ಬಹಿರಂಗ
ಸೋನಿಯಾ ಅವರ ಮನೆಯಲ್ಲಿ ಮೊದಲ ಮಗುವಿನ ಆಗಮನದ ಸಂಭ್ರಮ ಮನೆ ಮಾಡಿತ್ತು. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ನಿಗದಿತ ದಿನಾಂಕಕ್ಕಿಂತ 2 ತಿಂಗಳ ಮೊದಲೇ ಸೋನಿಯಾ ಗಾಂಧಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. 1969ರ ಜ.18 ರಂದು ಸೋನಿಯಾ ಗಂಡು ಮಗುವಿಗೆ ಜನ್ಮ ನೀಡಿದರು. ಅಕಾಲಿಕವಾಗಿ ಜನಿಸಿದ್ದರೂ, ಆ ನವಜಾತ ಶಿಶು ಆರೋಗ್ಯವಾಗಿಯೇ ಇತ್ತು.
‘ಮಗುವನ್ನು ಇನ್ಕ್ಯುಬೇಟರ್ನಲ್ಲಿ ಇರಿಸಿದಾಗ ಅದರ ಮೊದಲ ಅಳು ನನಗೆ ಕೇಳಿಸಿತು. ನಂತರ ರಾಜೀವ್ ನನ್ನನ್ನು ಆ ಮಗುವನ್ನು ನೋಡಲು ಕರೆದೊಯ್ದರು. ಮುದ್ದು ಮಗನನ್ನು ನೋಡಿದ ತಕ್ಷಣವೇ ನಾವು ಪ್ರೀತಿಯಲ್ಲಿ ಬಿದ್ದೆವು. ಆದರೆ, ಮಗು ಬದುಕಿದ್ದು ಕೆಲವೇ ಗಂಟೆಗಳು ಮಾತ್ರ. ಮಗು ಬದುಕುಳಿಯುವ ಸಾಧ್ಯತೆ ಅನಿಶ್ಚಿತವಾಗಿದೆ ಎಂದು ವೈದ್ಯರು ರಾಜೀವ್ ಗಾಂಧಿ ಅವರಿಗೆ ಮೊದಲೇ ಎಚ್ಚರಿಸಿದ್ದರು. ‘ಇಲ್ಲ, ಇದು ಸಾಧ್ಯವೇ ಇರಲಿಲ್ಲ! ‘ಏಕೆ, ಏಕೆ?’ ಎಂದು ನಾನು ಪದೇಪದೇ ಕೇಳುತ್ತಿದ್ದೆ. ನಾವಿಬ್ಬರೂ ಆಘಾತಕ್ಕೊಳಗಾದೆವು. ನಮ್ಮ ಹೃದಯ ಚೂರಾಯಿತು ಎಂದು ಸೋನಿಯಾ ನೋವು ವ್ಯಕ್ತಪಡಿಸಿದ್ದಾರೆ.
ಮೊದಲ ಮಗನನ್ನು ಕಳೆದುಕೊಂಡು ರಾಜೀವ್ ಗಾಂಧಿ ಕೂಡ ಕಣ್ಣೀರು ಹಾಕಿದ್ದರು. ಆ ಸಂದರ್ಭದಲ್ಲಿ ವಿದೇಶಿ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ತಮ್ಮ ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದರು. ಇಂದಿರಾ ಗಾಂಧಿ ಕೂಡ ದುಃಖಿತರಾಗಿದ್ದರು.
ಶಿಶುವಿನ ಅಂತ್ಯಕ್ರಿಯೆಯನ್ನು ಹೇಗೆ ನೆರವೇರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಮಗುವಿನ ಮೃತದೇಹವನ್ನು ನದಿಗೆ ಬಿಡುವ ಬಗ್ಗೆ ಪ್ರಸ್ತಾಪವಾದಾಗ, ನವಜಾತ ಶಿಶುಗಳಿಗೆ ಸಂಬಂಧಿಸಿದ ಇಂತಹ ಸಾಂಪ್ರದಾಯಿಕ ಪದ್ಧತಿಗಳು ಸೋನಿಯಾ ಅವರಿಗೆ ತೀವ್ರ ಆಘಾತ ಉಂಟುಮಾಡಿದವು. ‘ಇಲ್ಲ,’ ಎಂದು ನಾನು ಪಿಸುಗುಟ್ಟಿದೆ. ‘ಏನೇ ಆದರೂ, ನಮ್ಮ ಮಗುವನ್ನು ನದಿಗೆ ಎಸೆಯಲು ನಾನು ಬಿಡುವುದಿಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: RSS ನಲ್ಲಿ ತಮ್ಮದೇ ಪ್ರಯತ್ನದಿಂದ ಅಧಿಕಾರಕ್ಕೇರಿದ್ರು – ಪ್ರಧಾನಿ ಮೋದಿ ರಾಜಕೀಯ ಬೆಳವಣಿಗೆ ಮೆಚ್ಚಿಕೊಂಡ ಸೋನಿಯಾ ಗಾಂಧಿ
ಕೊನೆಗೆ, ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಫಿರೋಜ್ ಗಾಂಧಿ ಅವರ ಫಾರ್ಮ್ನಲ್ಲಿ ಮಗುವನ್ನು ಹೂಳಲು ಕುಟುಂಬ ನಿರ್ಧರಿಸಿತು. ರಾಜೀವ್ ಗಾಂಧಿ ಮತ್ತು ಅವರ ತಮ್ಮ ಸಂಜಯ್ ಗಾಂಧಿ ಸೇರಿ, ಗುಲಾಬಿ ಬಣ್ಣದ ಬೋಗನ್ವಿಲ್ಲಾ ಪೊದೆಯ ಕೆಳಗೆ ಮಗುವನ್ನು ಸಮಾಧಿ ಮಾಡಿದರು.
ಅದೇ ವರ್ಷದಲ್ಲಿ ಸೋನಿಯಾ ಮತ್ತೆ ಗರ್ಭಿಣಿಯಾದರು. ಆದರೆ, ಈ ವಿಷಯವು ಕುಟುಂಬದಲ್ಲಿ ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕವನ್ನೇ ಉಂಟುಮಾಡಿತು. ಈ ಗರ್ಭಧಾರಣೆಯ ಫಲವಾಗಿ, 1970ರ ಜೂನ್ 19ರಂದು ರಾಹುಲ್ ಗಾಂಧಿ ಜನಿಸಿದರು.
