ರಾಯಚೂರು: ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆ ಮಂತ್ರಾಲಯ (Mantralaya) ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ (Guru Raghavendra Swamy Mutt) ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಮತ್ತು ಇತರ ಸಂಸ್ಥಾನ ಮೂರ್ತಿಗಳಿಗೆ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಮಹಾ ಅಭಿಷೇಕವನ್ನು ನೆರವೇರಿಸಿದರು.
ಮಹಾ ಅಭಿಷೇಕದ ನಂತರ ಮೂಲ ರಾಮದೇವರು, ದಿಗ್ವಿಜಯ ರಾಮದೇವರು ಮತ್ತು ಜಯರಾಮ ದೇವರುಗಳಿಗೆ ಪವಿತ್ರ ಗಂಧ ಲೇಪನವನ್ನು ನೆರವೇರಿಸಿದರು. ನಂತರ ಶ್ರೀಗಳು ಸಂಸ್ಥಾನ ಪೂಜೆಯನ್ನು ನಡೆಸಿದರು. ಶ್ರೀ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾ ಅಭಿಷೇಕ ಅಪರೂಪದ ಮತ್ತು ಆಳವಾದ ಮಹತ್ವದ ಆಚರಣೆಯಾಗಿದೆ. ಇದನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಆಚರಿಸಲಾಗುತ್ತದೆ. ಇದನ್ನೂ ಓದಿ: ಬಿ.ಸಿ. ರೋಡ್ ಫ್ಲೈಓವರ್ನಿಂದ ಕೆಳಗೆ ಬಿದ್ದ ಬೈಕ್ ಸವಾರ – CCTVಯಲ್ಲಿ ಭಯಾನಕ ದೃಶ್ಯ ಸೆರೆ
ಶ್ರೀ ರಾಮ ನವಮಿಯ ಸಮಯದಲ್ಲಿ ಮತ್ತು ಬಲಿಪಾಡ್ಯಮಿಯ ಮಂಗಳಕರ ದಿನದಂದು ಮಾತ್ರ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರಿಗೆ ಮಹಾ ಅಭಿಷೇಕ ಮಾಡಲಾಗುತ್ತದೆ. ಬಲಿಪಾಡ್ಯಮಿ ಹಿನ್ನೆಲೆ ಮಹಾ ಅಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸಿದ್ದರು. ಮಹಾ ಅಭಿಷೇಕ ಬಳಿಕ ಶ್ರೀಗಳಿಂದ ಆಶೀರ್ವಾದ ಪಡೆದರು.


