– ರಷ್ಯಾ, ಚೀನಾ, ಯುಎಇ ಸೇನಾ ವಿಮಾನಗಳು ಪಾಕ್ನಲ್ಲಿ ಲ್ಯಾಂಡಿಂಗ್
ಇಸ್ಲಾಮಾಬಾದ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ (US vs Iran) ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಇದರ ಮಧ್ಯೆ ಅಮೆರಿಕ ಪಾಕಿಸ್ತಾನದ ನೂರ್ಖಾನ್ ವಾಯುನೆಲೆಯಿಂದ (Nur Khan Air Base) ಇರಾನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಈ ನೂರ್ಖಾನ್ ವಾಯುನೆಲೆ ಮೇಲೆ ದಾಳಿ ಮಾಡಿತ್ತು.
ಈ ಬೆಳವಣಿಗೆ ಮಧ್ಯೆ ರಷ್ಯಾ, ಚೀನಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ಗೆ (UAE) ಸೇರಿದ ಸೇನಾ ವಿಮಾನಗಳು (ಸರಕು ಸಾಗಣೆ) ಪಾಕಿಸ್ತಾನದಲ್ಲಿ ಲ್ಯಾಂಡಿಂಗ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ರಷ್ಯಾದ IL-76MD, AN-124 ಹಾಗೂ ಯುಎಇ ನಿರ್ವಹಣೆಯ IL-76 ಸೇರಿದಂತೆ ಹಲವು ಸೇನಾ ವಿಮಾನಗಳು ಪಾಕಿಸ್ತಾನದಲ್ಲಿ ಲ್ಯಾಂಡಿಂಗ್ ಮಾಡಿವೆ. ಈ ವಿಮಾನಗಳ ಮೂಲಕ ಸೇನಾ ಸಾಮಗ್ರಿಗಳನ್ನ ಸಾಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ, ಇರಾನ್ ಮತ್ತು ಅಮೆರಿಕ ನಡುವಿನ ಸಂಭಾವ್ಯ ಸಂಘರ್ಷದ ಹಿನ್ನೆಲೆ ಪಾಕಿಸ್ತಾನವು ಪ್ರಾದೇಶಿಕ ಗುಪ್ತಚರ ಚಟುವಟಿಕೆಗಳ ಮೇಲ್ವಿಚಾರಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
ಕರಾಚಿಯಲ್ಲಿ ರಷ್ಯಾದ ಸೇನಾ ವಿಮಾನ ಲ್ಯಾಂಡಿಂಗ್
ಪ್ರಾದೇಶಿಕ ಭದ್ರತಾ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ರಷ್ಯಾದ ಸೇನಾ ಸರಕು ಸಾಗಣೆ ವಿಮಾನವೊಂದು ಕಿರ್ಗಿಸ್ತಾನದ ಬಿಷ್ಕೆಕ್ನಿಂದ ಪಾಕಿಸ್ತಾನದ ಕರಾಚಿಗೆ ಬಂದಿಳಿದಿದೆ. ಇದೇ ವೇಳೆ, ಮತ್ತೊಂದು ಬೃಹತ್ ಸೇನಾ ವಿಮಾನ (ಸಂಖ್ಯೆ AN-124) ಬಾಂಗ್ಲಾದೇಶದ ಚಿತ್ತಗಾಂಗ್ನಿಂದ ಕರಾಚಿಗೆ ಆಗಮಿಸಿದೆ. ರಷ್ಯಾ, ಚೀನಾ ಮತ್ತು ಯುಎಇಗೆ ಸೇರಿದ ವಿಮಾನಗಳ ಸರಣಿ ಆಗಮನವು ಅವುಗಳಲ್ಲಿ ಸಾಗಿಸಲಾಗುತ್ತಿರುವ ಸರಕುಗಳ ಸ್ವರೂಪ ಹಾಗೂ ಈ ಹಾರಾಟಗಳ ಹಿಂದಿನ ಉದ್ದೇಶದ ಬಗ್ಗೆ ಕುತೂಹಲ ಮೂಡಿಸಿದೆ.
ಈ ಬೆಳವಣಿಗೆಗಳ ಹಿನ್ನೆಲೆ, ಇರಾನ್-ಅಮೆರಿಕ ಬಿಕ್ಕಟ್ಟಿನಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆಯೂ ಅಂತಾಷ್ಟ್ರೀಯ ಮಟ್ಟದಲ್ಲಿ ಗಮನ ಹರಿಸಲಾಗಿದೆ.
ರಷ್ಯಾಕ್ಕೆ ಚೀನಾ ಎಚ್ಚರಿಕೆ ಏನು?
ಈ ಬೆಳವಣಿಗೆಗಳ ನಡುವೆ, ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆಯ ಕುರಿತು ಚೀನಾ, ರಷ್ಯಾಕ್ಕೆ ಗುಪ್ತಚರ ಮಾಹಿತಿ ನೀಡಿದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯನ್ನ ಬಳಸಿಕೊಂಡು ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಷ್ಯಾಕ್ಕೆ ಚೀನಾ ಎಚ್ಚರಿಕೆ ಸಂದೇಶ ರವಾನಿಸಿದೆ.
ಚೀನಾ ನೀಡಿದ ಗುಪ್ತಚರ ಎಚ್ಚರಿಕೆ ಬಗ್ಗೆ ಇಸ್ರೇಲ್, ಭಾರತದ ನಿಗಾ
ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆಯ ಕುರಿತು ಚೀನಾ ರಷ್ಯಾಕ್ಕೆ ನೀಡಿದೆ ಎನ್ನಲಾದ ಗುಪ್ತಚರ ಎಚ್ಚರಿಕೆಯನ್ನ ಇಸ್ರೇಲ್ ಮತ್ತು ಭಾರತವೂ ಪರಿಶೀಲಿಸುತ್ತಿವೆ. ಒಂದೆಡೆ ರಷ್ಯಾ, ಚೀನಾ ಮತ್ತು ಯುಎಇಗೆ ಸೇರಿದ ಸೇನಾ ಸರಕು ಸಾಗಣೆ ವಿಮಾನಗಳು ಕರಾಚಿಗೆ ಆಗಮಿಸಿವೆ. ಮತ್ತೊಂದೆಡೆ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಬಳಕೆಯ ಕುರಿತಾದ ಚರ್ಚೆ ತೀವ್ರಗೊಂಡಿದೆ.


