– ಮಹಾರಾಷ್ಟ್ರ ಮಾದರಿಯಲ್ಲಿ ದರ ಹೆಚ್ಚಳ; ರೈತರು ಫುಲ್ ಖುಷ್
ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯು ( Venkateshwara Sugar Factory) ಪ್ರಸಕ್ತ ಹಂಗಾಮಿನ ಕಬ್ಬು ಪೂರೈಕೆದಾರರಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ 4,200 ರೂ. ದರ ನೀಡಲು ನಿರ್ಧರಿಸಿದ್ದು, ಕರ್ನಾಟಕದಲ್ಲೇ ಕಬ್ಬಿಗೆ (Sugarcane) ಅತ್ಯಂತ ಹೆಚ್ಚಿನ ದರ ಘೋಷಿಸಿದ ಕಾರ್ಖಾನೆ ಎಂಬ ಹಿರಿಮೆಗೆ ಪಾತ್ರವಾಗಿದೆ.
ಕಾರ್ಖಾನೆಯ ಆಡಳಿತ ಮಂಡಳಿಯು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನೀಡುವ ದರದ ಮಾದರಿಯಲ್ಲೇ ಬೇಡಕಿಹಾಳ ಸಕ್ಕರೆ ಕಾರ್ಖಾನೆಯ ದರವನ್ನ ನಿಗದಿಪಡಿಸಲು ತೀರ್ಮಾನಿಸಿದೆ. ಈ ಕುರಿತು ಕಾರ್ಖಾನೆಯ ಮಂಡಳಿಯು ಪತ್ರಿಕಾ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ.
ಮೊದಲ ಕಂತು: ಪ್ರತಿ ಟನ್ಗೆ 3,800 ರೂ., 2ನೇ ಕಂತು: ಪ್ರತಿ ಟನ್ಗೆ 100 ರೂ., 3ನೇ ಕಂತು: ಸಕ್ಕರೆ ದರ ಪ್ರತಿ ಕೆಜಿಗೆ 50 ರೂ.ಗಿಂತ ಹೆಚ್ಚಾದಲ್ಲಿ ಹೆಚ್ಚುವರಿಯಾಗಿ 300 ರೂ. ಪಾವತಿಸಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ದರಕ್ಕೆ ಪೈಪೋಟಿ ನೀಡುವಂತೆ ಹಾಗೂ ರೈತರ ಹಿತದೃಷ್ಟಿಯನ್ನ ಕಾಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲೇ ಅತ್ಯಧಿಕ ಬೆಲೆ ಘೋಷಿಸಿರುವುದರಿಂದ ಸುತ್ತಮುತ್ತಲಿನ ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿದೆ.

