ಬೆಂಗಳೂರು: ಒಂದೇ ಕುಟುಂಬದ ಏಳು ಜೀವಗಳನ್ನು ಬಲಿ ಪಡೆದ ವಿಕೃತ ಮನಸ್ಸಿನ ಪಾಪಿಗಳ ಕರಾಳ ಮುಖ ಒಂದೊಂದಾಗಿ ಹೊರಬರುತ್ತಿದೆ. ನಗುನಗುತ್ತಾ ಊಟಕ್ಕೆ ಆಹ್ವಾನಿಸಿ, ನಂಬಿಸಿ ಕತ್ತು ಹಿಸುಕಿ ಕೊಂದ ನರಾಧಮರು ಶವಗಳನ್ನು ಎಲ್ಲಿ ಎಸೆದಿದ್ದಾರೆಂಬ ರಹಸ್ಯ ಈಗ ಬಹಿರಂಗವಾಗಿದೆ. ಹಾಸನ (Hassna) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪದ 100 ಅಡಿ ಆಳದ ಕಂದಕದಲ್ಲಿ ನಡೆದ ರೋಚಕ ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ.
ಹಾಸನ ಜಿಲ್ಲೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ (Sakaleshpura Police Station) ವ್ಯಾಪ್ತಿಯ ಮಾರನಹಳ್ಳಿ ಸಮೀಪದ ಕಂದಕ. ಇಲ್ಲಿ ನಡೆಯುತ್ತಿರುವುದು ಸಾಮಾನ್ಯ ಶೋಧ ಕಾರ್ಯವಲ್ಲ ಇದು ಮನುಕುಲವೇ ತಲೆತಗ್ಗಿಸುವಂತಹ ಭೀಕರ ಹತ್ಯೆಯ ಕರಾಳ ರಹಸ್ಯವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ. ಕೊಲೆಗಡುಕ ಇಂದುಶೇಖರ್ ಪೊಲೀಸರನ್ನು ಯಾಮಾರಿಸಲು ನಾನಾ ನಾಟಕವಾಡಿದ್ದ. ಶವ ಬಿಸಾಡಿದ ನಿಖರ ಜಾಗ ತೋರಿಸದೇ ಐದಾರು ಕಡೆ ಅಲೆದಾಡಿಸಿ ಪೊಲೀಸರ ತಾಳ್ಮೆ ಕೆಣಕಿದ್ದ.
ಆದರೆ ಖಾಕಿ ಪಡೆ ಬಿಡಲಿಲ್ಲ! ಕೊನೆಗೂ ಕಂದಕದ ಅಂಚಿಗೆ ಕರೆತಂದಾಗ ಆ ನರಾಧಮ ಬಾಯಿಬಿಟ್ಟ. ಮಲ್ಲೇಶ್ವರಂ ಎಎಸ್ಪಿ ಪ್ರಭಾವತಿ ನೇತೃತ್ವದಲ್ಲಿ, ಹಗ್ಗದ ಸಹಾಯದಿಂದ ನೂರು ಅಡಿ ಆಳದ ಕಂದಕಕ್ಕೆ ಇಳಿದ ಪೊಲೀಸರು, ಕೊನೆಗೂ ನಳಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕಂದಕದಿಂದ ಮೇಲೆ ತೆಗೆದ ಶವಗಳನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಹಾಸನದ ಹಿಮ್ಸ್ ಆಸ್ಪರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಹಂತಕ ಇಂದುಶೇಖರ್ನನ್ನ ಪೊಲೀಸರು ಒಂದು ಗಂಟೆ ಮುಂಚೆಯೇ ಸ್ಥಳದಿಂದ ಕರೆದೊಯ್ದಿದ್ದರೆ, ಆ ವಾಹನದ ಹಿಂದೆ ಕಣ್ಣೀರಿನಿಂದ ಕಡಲಾದ ನಳಿನಿ ಹಾಗೂ ಶಂಕರ್ ಅವರ ಕುಟುಂಬಸ್ಥರು ಮೈಮುಟ್ಟುವಂತೆ ಗೋಳಾಡಿದ ದೃಶ್ಯ ಮನಕಲಕುವಂತಿದೆ.
ಮಗಳನ್ನು ಕಳೆದುಕೊಂಡ ತಾಯಿ ತುಂಗಮ್ಮ ಅವರ ರೋಧನೆ ಮುಗಿಲು ಮುಟ್ಟಿದೆ. ಕೆಲಸಕ್ಕೆ ಹೋಗ್ತೀನಿ ಅಂತ ಫೋನ್ ಮಾಡಿದ್ದಳು ಸಾಯಂಕಾಲದವರೆಗೂ ನೋಡಿದರೂ ಬಾರದಿದ್ದಾಗ ಅವರ ಮನೆಗೆ ಹೋದೆವು. ನನ್ನ ಅಳಿಯ ಶಂಕರ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇಂದುಶೇಖರ್ ಮಗಳು ಆಡುಗೆ ಮಾಡಲು ಆಹ್ವಾನಿಸಿದ್ದ ಕಾರಣ ಸಂಜೆ ನನ್ನ ಮಗಳು ನಳಿನಿ, ಅಳಿಯ ಶಂಕರ್ ಹೋಗಿ ರಾತ್ರಿ ಊಟ ಮಾಡಿ ಮಲಗಿದ್ದಾರೆ. ರಾತ್ರಿ ನನ್ನ ಮಗಳನ್ನು ಇಂದುಶೇಖರ್ ಕೊಲೆ ಮಾಡಿದ್ದಾನೆ. ಬಳಿಕ ನನ್ನ ಅಳಿಯ ಶಂಕರ್ನನ್ನ ಮುಗಿಸಿದ್ದಾನೆ. ನನ್ನ ಇನ್ನೊಬ್ಬ ಮೊಮ್ಮಗನನ್ನ ಇಂದುಶೇಖರ್ ಮಗಳು ರೂಮ್ನಲ್ಲಿ ಹಿಡಿದು ಇಟ್ಟುಕೊಂಡಿದ್ದಾಳೆ ಎಂದು ಬಿಕ್ಕಿ ಬಿಕ್ಕಿ ಅತ್ತರು.
ಆಸ್ತಿಗಾಗಿ ಹೆತ್ತ ತಾಯಿಯನ್ನು ಕೊಲೆ ಮಾಡಲು ಸಹಾಯ ಮಾಡಿ ಮಗಳನ್ನೇ ಬಳಸಿಕೊಂಡು. ಪತ್ನಿ ಸಂಬಂಧಿಕರನ್ನು ಊಟದ ನೆಪದಲ್ಲಿ ಕರೆದು ಹತ್ಯೆ ಮಾಡಿದ ವಿಕೃತಿಗೆ ಜನರೇ ಬೆಚ್ಚಿಬಿದ್ದಿದ್ದಾರೆ.


