ಬೆಂಗಳೂರು: ಸಿಲಿಕಾನ್ ಸಿಟಿ ನಿವಾಸಿಗಳಿಗೆ ಸರ್ಕಾರ ಮತ್ತು ಬಿಡಿಎ ಗುಡ್ ನ್ಯೂಸ್ ನೀಡಿದೆ. ಅನಧಿಕೃತ ನಿವೇಶನ ಸಕ್ರಮ ಶುಲ್ಕದಲ್ಲಿ ಶೇಕಡಾ 50 ರಷ್ಟು ಭಾರಿ ವಿನಾಯಿತಿ ಘೋಷಿಸಲಾಗಿದೆ. ಜೊತೆಗೆ 3 ಪ್ರಮುಖ ಜನಪರ ನಿರ್ಧಾರಗಳನ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಬಿಡಿಎ ಕಾಯ್ದೆ 38(ಡಿ) ಅನ್ವಯ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ ಸುಗ್ರೀವಾಜ್ಞೆ ದಿನಾಂಕಕ್ಕಿಂತ 12 ವರ್ಷಗಳ ಹಿಂದೆ (2008 ಪೂರ್ವದಲ್ಲಿ) ನಿರ್ಮಿಸಲಾದ ಮನೆ ಕಟ್ಟಡಗಳನ್ನು ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಮಾರ್ಗಸೂಚಿ ದರದಲ್ಲಿ ವಿಧಿಸಲಾಗುತ್ತಿದ್ದ ಶುಲ್ಕವನ್ನು ಶೇಕಡಾ 50 ರಷ್ಟು ಕಡಿತಗೊಳಿಸಲಾಗಿದೆ. ಆನ್ಲೈನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಡಿಸೆಂಬರ್ 17ರ ಒಳಗಡೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಜಿ ಜೊತೆಗೆ ಮೂಲ ಕ್ರಯಪತ್ರಗಳು, ಫಾರ್ಮ್-15 ಋಣಭಾರ ಪ್ರಮಾಣಪತ್ರ, ಕಂದಾಯ ರಸೀದಿ, ಖಾತಾ ನಕಲು, ಮಂಜೂರಾದ ಕಟ್ಟಡದ ನಕ್ಷೆ, ನೀರು ಮತ್ತು ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಸಲ್ಲಿಸಬೇಕು. ಇನ್ನೂ ಬಿಡಿಎ ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿದ ಅಂಚಿನ ಜಾಗಗಳು ಉಳಿದಿದ್ದರೆ, ಅಂತಹ ಜಾಗವನ್ನು ಪಡೆಯಲು ಆಸಕ್ತಿಯಿರುವ ಹಂಚಿಕೆದಾರರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಕ್ಕೂ ಕೂಡ ಡಿಸೆಂಬರ್ 17 ರ ಒಳಗಡೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಬಿಡಿಎ ನಿವೇಶನ ಹಂಚಿಕೆಯಾಗಿ 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ನಾನಾ ಕಾರಣಗಳಿಂದ ಸುಮಾರು 20,000 ಹಂಚಿಕೆದಾರರು ಈವರೆಗೆ ಶುದ್ಧ ಕ್ರಯಪತ್ರ ಮಾಡಿಸಿಕೊಂಡಿಲ್ಲ. ಇಂತಹವರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳವನ್ನ ಬಿಡಿಎ ಆಯೋಜಿಸಲಾಗುತ್ತಿದ್ದು ನಿವೇಶನದ ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 22 ರ ಒಳಗಡೆ ಅರ್ಜಿ ಸಲ್ಲಿಸಿದರೆ, ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ನೋಂದಾಯಿತ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಡಲಾಗುತ್ತದೆ. ಈ ಮೂರು ಸೌಲಭ್ಯಕ್ಕು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸಲ್ಲ. ಉಚಿತವಾಗಿ ಸಲ್ಲಿಕೆ ಮಾಡಬಹುದಾಗಿದೆ. ನಿಗದಿತ ಸಮಯದ ಒಳಗಡೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಮತ್ತೆ ಈ ಅವಕಾಶ ಮಾಡಿಕೊಡಲ್ಲ ನಿಯಮಾನಸುರ ಕ್ರಮ ಆಗುತ್ತೆ ಅಂತಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
