ಮಡಿಕೇರಿ: ಉಡುಪಿ ಜಿಲ್ಲೆಯ ಐತಿಹಾಸಿಕ ಬಾಳೆಕುದ್ರು ಮಠದ (Balekudru Swamiji) ಪೀಠಾಧಿಪತಿ ವಾಸುದೇವ ಸದಾಶಿವ ಸ್ವಾಮೀಜಿಯವರ ವಾಸ್ತವ್ಯ ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಮಠದಿಂದ ನಿರ್ಗಮಿಸಿದ್ದ ಸ್ವಾಮೀಜಿ ಎಲ್ಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ಈ ನಡುವೆ ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಯ (Talakaveri) ಕೈಲಾಸಾಶ್ರಮದಲ್ಲಿ ಎರಡು ದಿನಗಳ ಕಾಲ ಸ್ವಾಮೀಜಿ ವಾಸ್ತವ್ಯ ಹೂಡಿ ನಿರ್ಗಮನ ಅಗಿರುವ ವಿಚಾರ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠ, ಧಾರ್ಮಿಕ ಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಮಠ ಇದೀಗ ವಿವಾದದ ಕೇಂದ್ರವಾಗಿದೆ. ಈ ಸಂಬಂಧ ಹಿತರಕ್ಷಣಾ ವೇದಿಕೆಯ ದೂರಿನ ಮೇರೆಗೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳೆಕುದ್ರು ಮಠದ ಪೀಠಾಧಿಪತಿ ವಾಸುದೇವ ಸದಾಶಿವ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಅಕೌಂಟೆಂಟ್ ಜಯಲಕ್ಷ್ಮಿ, ಪರಿಚಾರಕ ಶ್ರೇಯಸ್ ಹಾಗೂ ವಿಗ್ರಹಗಳನ್ನು ಪಡೆದಿದ್ದಾರೆ ಎನ್ನಲಾದ ನಾಗೇಂದ್ರ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ಸ್ವಾಮೀಜಿ ಮಠದಿಂದ ನಿರ್ಗಮಿಸಿದ್ದರು. ಅವರ ಮುಂದಿನ ವಾಸ್ತವ್ಯದ ಬಗ್ಗೆ ಶಿಷ್ಯವರ್ಗದಲ್ಲಿಯೂ ಕುತೂಹಲ ಮೂಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಕೊಡಗಿನ ಪವಿತ್ರ ಪುಣ್ಯಕ್ಷೇತ್ರ ತಲಕಾವೇರಿಯ ಕೈಲಾಸಾಶ್ರಮದಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಿ ವಾಪಸ್ ಅಗಿರುವುದು ಬೆಳಕಿಗೆ ಬಂದಿದೆ. ಗುರುವಾರ ತಲಕಾವೇರಿಗೆ ಆಗಮಿಸಿದ್ದ ಸ್ವಾಮೀಜಿ ಶುಕ್ರವಾರ ಸಂಜೆವರೆಗೂ ಅಲ್ಲಿಯೇ ತಂಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಉಡುಪಿ ಬಾಳೆಕುದ್ರು ಮಠಾಧೀಶರು ನಾಪತ್ತೆ – ಮಠದ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪ
ಕೈಲಾಸಾಶ್ರಮದಲ್ಲಿ ವಾಸ್ತವ್ಯ ಹೂಡಲು ಕಾರಣ ಏನು ಎಂದು ಸ್ವಾಮೀಜಿಯನ್ನು ಕೇಳಿದ್ರೆ ಅನಗತ್ಯ ಗೊಂದಲಗಳಿಂದ ನಮಗೂ ರಕ್ಷಣೆ ಬೇಕಾಗಿದೆ. ಅದಕ್ಕಾಗಿ ತಲಕಾವೇರಿಗೆ ಬರಬೇಕಾಯಿತು. ನಮ್ಮ ವಿರುದ್ಧದ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ವಿರುದ್ಧದ ವಿಗ್ರಹ ಮಾರಾಟ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಸ್ವಾಮೀಜಿ, ಇದು ಇಂದಿನ ವಿವಾದವಲ್ಲ, 2013ರಿಂದಲೇ ಮಠದೊಳಗೆ ಪಿತೂರಿ ನಡೆಯುತ್ತಿದೆ. ಹಿಂದಿನ ಗುರುಗಳ ಕಾಲದಿಂದಲೂ ಕೆಲವರು ಮಠದ ಪೀಠದಿಂದ ಗುರುಗಳನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಮಠದ ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯುವ ಉದ್ದೇಶದಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಠದ ಕೆಲವು ವಿಗ್ರಹಗಳು ಕಾಲಕ್ರಮೇಣ ಹಾನಿಗೊಳಗಾಗಿದ್ದು, ಅವುಗಳನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ದುರಸ್ತಿ ಮಾಡಿಸುವ ಉದ್ದೇಶದಿಂದ ಲೋಹದ ವ್ಯಾಪಾರಿಯೊಬ್ಬರಿಗೆ ನೀಡಲಾಗಿತ್ತು. ಯಾವುದೇ ವಿಗ್ರಹಗಳನ್ನು ಅಕ್ರಮವಾಗಿ ಮಾರಾಟ ಮಾಡಿಲ್ಲ. ಸಂಪೂರ್ಣ ಹಾಳಾಗಿದ್ದ ಕೆಲವು ಬಿಂಬಗಳನ್ನು ಧಾರ್ಮಿಕ ಸಂಪ್ರದಾಯದಂತೆ ವಿಸರ್ಜಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಗ್ರಹಗಳನ್ನು ದುರಸ್ತಿಗೊಳಿಸಿ ಮತ್ತೆ ಪೂಜಾ ಕಾರ್ಯಗಳಿಗೆ ಬಳಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಮಾಡಲಾಗಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಬಾಳೆಕುದ್ರು ಮಠದ ಪುರಾತನ ವಿಗ್ರಹಗಳ ಮಾರಾಟ ಆರೋಪ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ನರಕ ಚತುರ್ದಶಿ – ಮಂತ್ರಾಲಯದಲ್ಲಿ ವಿಶೇಷ ಪೂಜೆ, ಶ್ರೀಗಳಿಂದ ತೈಲಾಭ್ಯಂಜನ
