ಬೆಂಗಳೂರು: ಸರ್ಕಾರ ಹಾಲಿನ ದರವನ್ನು (Milk Rate) 4-5 ರೂ. ಇಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ.
ಧವಳಗಿರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹಳ ನೋವಿನಿಂದ ಈ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ನಾಡಿನಲ್ಲಿ ಯಾರೂ ಕೂಡಾ ಸಂತೋಷದಿಂದ ದೀಪಾವಳಿ ಆಚರಿಸುವ ಸಂದರ್ಭದಲ್ಲಿಲ್ಲ. ರಾಜ್ಯ ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಡಿಕೆಶಿ ಅವರು ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಹಾಕಿದ್ದಾರೆ. ಅವೈಜ್ಞಾನಿಕವಾಗಿ ದರ ಏರಿಕೆ ಮಾಡಲಾಗಿದೆ. ಕಳೆದ ಮೂರೂವರೆ ವರ್ಷದ ಇವರ ಸಾಧನೆ ದರ ಏರಿಕೆ ಮಾತ್ರ. ಪೆಟ್ರೋಲ್ ಮೇಲೆ, ಆಲ್ಕೋಹಾಲ್ ಮೇಲೆ, ಹಾಲಿನ ಮೇಲೆ, ನೀರಿನ ಮೇಲೆ, ಜಂಗಲ್ ಸಫಾರಿ ಮೇಲೆ, ವಿವಿಧ ಶುಲ್ಕಗಳು, ಆಸ್ಪತ್ರೆಗಳಲ್ಲಿ ಶುಲ್ಕ, ಬಸ್ ಟಿಕೆಟ್ ಮೇಲೆ ಸೇರಿ ಹಲವಾರು ವಸ್ತುಗಳ ಮೇಲೆ ದರ ಏರಿಸಿದ್ದಾರೆ. ಬಸ್ ಟಿಕೆಟ್ 45%ರಷ್ಟು, ಹಾಲಿನ ಮೇಲೆ 8 ರೂ, ಮೊಸರು 14 ರೂ, ತುಪ್ಪದ ದರ 180 ರೂ ಏರಿಸಿದ್ದಾರೆ. ಒಂದು ಲೋಟ ಹಾಲು ಕುಡಿಯಲು ಸಹ ಜನ ಯೋಚನೆ ಮಾಡುವಂತಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 94 ದಿನಗಳಿಂದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗ್ತಿದೆ, ಮಗು ಕಂಡೀಷನ್ನಲ್ಲಿ ಸುಧಾರಣೆ ಕಂಡಿದೆ: ಕ್ಲೌಡ್ನೈನ್ ಆಸ್ಪತ್ರೆ ಸ್ಪಷ್ಟನೆ
ರೈತರಿಗೆ ಸರ್ಕಾರ ಸಹಾಯ ಧನ ಕೊಡಲಿ, ಅದರ ಬದಲು ಜನರ ಮೇಲೇಕೆ ಹೊರೆ ಹಾಕುತ್ತೀರಿ? ಬಸ್ ಟಿಕೆಟ್ ದರ ಇಳಿಸಿ. ದರ ಏರಿಕೆಗೆ ಕಾರಣ ಶಕ್ತಿ ಯೋಜನೆ ಬಾಕಿ ಕೊಡುವುದು. ಸಾರಿಗೆ ನಿಗಮಗಳಿಗೆ ಹಣ ಕೊಡದೇ ಬಸ್ಗಳಿಗೆ ಡೀಸಲ್ ಸಹ ಹಾಕಿಸಲು ಆಗುತ್ತಿರಲಿಲ್ಲ. ಸಿಎಂ ಅವರೇ ಡೀಸೆಲ್ ಹಾಕಿಸಲೂ ಹಣ ಇಲ್ಲ ಅಂತ ಒಪ್ಪಿಕೊಂಡಿದ್ದಾರೆ. ರಾಜ್ಯ ಈ ದುಸ್ಥಿತಿಗೆ ಬರಲು ಕಾಂಗ್ರೆಸ್ ಸರ್ಕಾರ ಕಾರಣ. ಜನ ದೀಪಾವಳಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲಾಗುತ್ತಿಲ್ಲ. ಜನರ ಮೇಲೆ ಸರ್ಕಾರ ದರ ಏರಿಕೆಯ ಗದಾಪ್ರಹಾರ ನಡೆಸಿದೆ. ಸರ್ಕಾರಿ ಶಾಲೆಗಳನ್ನು ದತ್ತು ಕೊಡಲು ಮುಂದಾಗಿದ್ದಾರೆ. ಶಿಕ್ಷಣಕ್ಕೂ ಹಣ ಕೊಡದ ಸರ್ಕಾರ ಇದು. ಸಿಎಂ ಅವರ ಮಗಳು ಶಿಕ್ಷಣ ವ್ಯವಸ್ಥೆ ಸರಿ ಇಲ್ಲ ಅಂದಿದ್ದಾರೆ. ಸಿಎಸ್ಆರ್ ಫಂಡ್ ಎತ್ತಿ ಶಿಕ್ಷಣಕ್ಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಯಾವತ್ತೂ ಇಂಥ ಸ್ಥಿತಿ ಬಂದಿರಲಿಲ್ಲ. ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ ಎಂದರು. ಇದನ್ನೂ ಓದಿ: ಸುಳ್ಳು ಆರೋಪಗಳಿಗೆ ಹೆದರಲ್ಲ, ಎಲ್ಲದಕ್ಕೂ ರೆಡಿಯಾಗಿ ಬಂದಿದ್ದೇವೆ – ಕುಮಾರಸ್ವಾಮಿ ಲಂಚದ ಆರೋಪಕ್ಕೆ ಡಿಸಿ ತಿರುಗೇಟು
ನವೆಂಬರ್ 11 ರಂದು ಇಡೀ ದಿನ ಪ್ರತಿಭಟನೆ ನಡೆಸುತ್ತೇವೆ. ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಒಂದು ದಿನದ ಪ್ರತಿಭಟನೆ ನಡೆಯಲಿದೆ. ಫ್ರೀಡಂ ಪಾರ್ಕ್ನಲ್ಲಿ ಇಡೀ ದಿನ ಕೂತು ಧರಣಿ ನಡೆಸುತ್ತೇವೆ. ಈ ಪ್ರತಿಭಟನೆಯಲ್ಲಿ ನಮ್ಮೆಲ್ಲ ನಾಯಕರು ಭಾಗವಹಿಸುತ್ತಾರೆ. ದರ ಏರಿಕೆ ವಾಪಸ್ಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ಜಿಲ್ಲಾ ಹಂತಗಳಲ್ಲೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಮೃತದೇಹ ಪತ್ತೆ – ಕೆಂಪು ಬಣ್ಣದ ಬೆಡ್ಶೀಟ್ನಲ್ಲಿ ಸುತ್ತಿ ಬಿಸಾಡಿದ್ದ ಹಂತಕ
ಎಥೆನಾಲ್ ಬ್ಲೆಂಡಿಂಗ್ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಥೆನಾಲ್ ಬ್ಲೆಂಡಿಂಗ್ ಬಗ್ಗೆ ರಾಜ್ಯ ಸರ್ಕಾರ ಆರೋಪ ಮಾಡಿದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಗುಲ್ಲೆಬ್ಬಿಸುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಬಿಪಿಸಿಎಲ್, ಐಯೊಸಿಎಲ್ ಕಂಪೆನಿಗಳು ಸ್ಪಷ್ಟನೆ ಕೊಟ್ಟಿವೆ. ರಾಜ್ಯ ಸರ್ಕಾರ ಹೇಳಿರುವಷ್ಟು ಬ್ಲೆಂಡಿಂಗ್ ಆಗಿಲ್ಲ ಅಂದಿದ್ದಾರೆ. ಪ್ರಹ್ಲಾದ್ ಜೋಷಿ ಅವರೂ ಇದನ್ನೇ ಹೇಳಿದ್ದಾರೆ. ರಾಜ್ಯ ಸರ್ಕಾರ ಯಾವ ರೀತಿ ಪರೀಕ್ಷೆ ಮಾಡಿಸಿದೆಯೋ ಗೊತ್ತಿಲ್ಲ. ಮರು ಪರೀಕ್ಷೆಗೆ ನಾವೂ ಸಿದ್ಧ ಅಂತ ತೈಲ ಕಂಪೆನಿಗಳು ಹೇಳಿವೆ. ಮುಂದೆ ಏನಾಗುತ್ತೆ ಅಂತ ನೋಡೋಣ ಎಂದರು. ಇದನ್ನೂ ಓದಿ: ಹಾಸನಾಂಬೆ ದೇವಾಲಯದಲ್ಲಿ ತಹಶೀಲ್ದಾರ್, ಡಿವೈಎಸ್ಪಿ ನಡುವೆ ವಾಗ್ವಾದ – ಕಣ್ಣೀರಿಟ್ಟ ಮಹಿಳಾ ಅಧಿಕಾರಿ
ತಮ್ಮ ವಿರುದ್ಧ ಪೋಸ್ಟರ್ ವಾರ್ ಕುರಿತು ಮಾತನಾಡಿ, ಪೋಸ್ಟರ್ ವಾರ್ ಚೀಪ್ ತಂತ್ರ, ಮಾಡಲಿ ಬಿಡಿ. ಗೃಹ ಇಲಾಖೆಯಲ್ಲಿ ಏನು ಸಾಧನೆ ಮಾಡಿದ್ದಾರೆ ಅಂತ ಪ್ರಿಯಾಂಕ್ ಖರ್ಗೆ ಮೊದಲು ಹೇಳಲಿ. ಪೋಸ್ಟರ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Operation SHAHID | ಇಥಿಯೋಪಿಯಾದಿಂದ ಗ್ಯಾಂಗ್ಸ್ಟರ್ ಗುರ್ವಿಂದರ್ ಅಲಿಯಾಸ್ ಅಫ್ರಿದಿ ಭಾರತಕ್ಕೆ ಗಡಿಪಾರು
