– ಪಂಜಾಬ್ ಪೊಲೀಸರ ʻಆಪರೇಷನ್ ಶಾಹಿದ್ʼ ಯಶಸ್ವಿ
ಚಂಡೀಗಢ: ಸುಮಾರು 10 ತಿಂಗಳ ಕಾಲ ನಡೆದ ಅಂತಾರಾಷ್ಟ್ರೀಯ ಶೋಧ ಕಾರ್ಯಾಚರಣೆಯ ಬಳಿಕ, ಪಂಜಾಬ್ ಪೊಲೀಸರ ಆ್ಯಂಟಿ ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್ (AGTF) ಇಥಿಯೋಪಿಯಾದಿಂದ (Ethiopia) ಕುಖ್ಯಾತ ಗ್ಯಾಂಗ್ಸ್ಟರ್ ಗುರ್ವಿಂದರ್ ಅಲಿಯಾಸ್ ಅಫ್ರಿದಿಯನ್ನ ಭಾರತಕ್ಕೆ ಗಡಿಪಾರು ಮಾಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (DGP) ಗೌರವ್ ಯಾದವ್ ತಿಳಿಸಿದ್ದಾರೆ.
ದೋನಿ ಬಾಲ್–ಪ್ರಭ್ ದಸ್ಸುವಾಲ್ ಗ್ಯಾಂಗ್ನ ಕಿಂಗ್ಪಿನ್ ಗುರ್ವಿಂದರ್ನನ್ನ (Gangster Gurwinder Aka Afridi) ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ ‘ಆಪರೇಷನ್ ಶಾಹಿದ್’ (Operation SHAHID) ಎಂದು ಹೆಸರಿಡಲಾಗಿತ್ತು.
ಪಂಜಾಬ್ ಪೊಲೀಸರ AGTF, ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ಓವರ್ಸೀಸ್ ಫ್ಯೂಜಿಟಿವ್ ಟ್ರ್ಯಾಕಿಂಗ್ ಆ್ಯಂಡ್ ಎಕ್ಸ್ಟ್ರಡಿಷನ್ ಸೆಲ್ (OFTEC) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಆರೋಪಿಯ ಸುಳಿವು ಪತ್ತೆಹಚ್ಚಲು ಏಷ್ಯಾ, ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾ ಖಂಡಗಳ ಹಲವು ದೇಶಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹ, ಕಣ್ಗಾವಲು ಮತ್ತು ಶೋಧ ಕಾರ್ಯಾಚರಣೆಗಳನ್ನ ಕೈಗೊಳ್ಳಲಾಗಿತ್ತು.
ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಅಪರಾಧ ಚಟುವಟಿಕೆ
ಪ್ರಾಥಮಿಕ ತನಿಖೆಯ ಪ್ರಕಾರ, ವಿದೇಶದಲ್ಲಿದ್ದುಕೊಂಡೇ ಗುರ್ವಿಂದರ್ ಪಂಜಾಬ್ನಲ್ಲಿ ಅಪರಾಧ ಚಟುವಟಿಕೆಗಳಿಗೆ ನಿರ್ದೇಶನ ನೀಡುತ್ತಿದ್ದ. ಪಂಜಾಬ್ನಲ್ಲಿ ನಡೆಯುತ್ತಿದ್ದ ಹತ್ಯೆಗಳು, ಸುಲಿಗೆ ಹಾಗೂ ಶೂಟೌಟ್ ಸೇರಿದಂತೆ ಹಲವು ಸಂಘಟಿತ ಅಪರಾಧ ಚಟುವಟಿಕೆಗಳನ್ನ ನಿರ್ದೇಶಿಸುತ್ತಿದ್ದ. ಆತನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಪಂಜಾಬ್ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಈ ಕಾರ್ಯಾಚರಣೆಯ ಯಶಸ್ಸಿನ ಕುರಿತು ಮಾತನಾಡಿದ ಡಿಜಿಪಿ ಗೌರವ್ ಯಾದವ್, ರಾಜ್ಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನಿರಂತರ ಸಮನ್ವಯ ಹಾಗೂ ಅಂತಾರಾಷ್ಟ್ರೀಯ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
10 ತಿಂಗಳ ಅಂತಾರಾಷ್ಟ್ರೀಯ ಶೋಧ ಕಾರ್ಯಾಚರಣೆ
ಕಳೆದ 10 ತಿಂಗಳಿನಿಂದ ಆರೋಪಿಯ ಪತ್ತೆಗಾಗಿ ಪೊಲೀಸರು ಹಲವು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಗುಪ್ತಚರ ಮಾಹಿತಿಗಳು ಮತ್ತು ನಿರಂತರ ಕಣ್ಗಾವಲಿನ ಮೂಲಕ ಆತನ ಇರುವಿಕೆಯ ಬಗ್ಗೆ ಸುಳಿವುಗಳನ್ನು ಸಂಗ್ರಹಿಸಲಾಗಿತ್ತು. ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ ಪತ್ತೆ ಕಾರ್ಯ ನಿರ್ವಹಿಸುವ OFTEC ಘಟಕವು AGTF ಜೊತೆ ಕೈಜೋಡಿಸಿತ್ತು. ಈ ಕಾರ್ಯಾಚರಣೆಗೆ ಕೇಂದ್ರ ತನಿಖಾ ಸಂಸ್ಥೆಗಳು ಕೂಡ ಅಗತ್ಯ ಸಹಕಾರ ನೀಡಿದ್ದವು.
ಕೊನೆಗೂ ವಿವಿಧ ಹಂತಗಳ ಸಮನ್ವಯದ ಫಲವಾಗಿ ಇಥಿಯೋಪಿಯಾದಿಂದ ಗುರ್ವಿಂದರ್ನನ್ನು ಭಾರತಕ್ಕೆ ಗಡಿಪಾರು ಮಾಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸದ್ಯ ಭಾರತಕ್ಕೆ ಕರೆತಂದು ಮುಂದಿನ ತನಿಖೆ ಕೈಗೊಂಡಿದ್ದಾರೆ.
