ಹಾಸನ: ಹಾಸನಾಂಬೆ (Hasanamba) ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ, ಮಾಡಲು ಬಿಡುವುದಿಲ್ಲ ಎಂದು ಸಚಿವ ಕೆ.ಎಂ ಶಿವಲಿಂಗೇಗೌಡ (Shivalingegowda) ಹೇಳಿದ್ದಾರೆ.
ಹಾಸನದಲ್ಲಿ (Hassan) ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರ (H.D Kumaraswamy) ಲಂಚದ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಈ ವೇಳೆ, ಹಾಸನಾಂಬ ದೇವಿ ಪಾದದ ಮೇಲೆ ಆಣೆ ಮಾಡಿ ಹೇಳ್ತಿನಿ, ಇದರಲ್ಲಿ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ. ಲೋಪ ಮಾಡಲು ಬಿಡುವುದಿಲ್ಲ. ಯಾರೋ ಪುಣ್ಯಾತ್ಮರು ಏನೇನೋ ಮಾತಾಡ್ತರಂತೆ. ನಾನು ಸುದ್ದಿಗೋಷ್ಠಿ ಕರೆದು ಹೇಳ್ತಿನಿ ಎಂದಿದ್ದಾರೆ. ಇದನ್ನೂ ಓದಿ: ಸುಳ್ಳು ಆರೋಪಗಳಿಗೆ ಹೆದರಲ್ಲ, ಎಲ್ಲದಕ್ಕೂ ರೆಡಿಯಾಗಿ ಬಂದಿದ್ದೇವೆ – ಕುಮಾರಸ್ವಾಮಿ ಲಂಚದ ಆರೋಪಕ್ಕೆ ಡಿಸಿ ತಿರುಗೇಟು
ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿಯನ್ನು ಅವರು ಇನ್ನೂ ಬಿಡಲಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಬಿಡಬೇಕು. ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಒಂದೇ ಒಂದು ಪೈಸೆ ಲೋಪ ಮಾಡಲು ನಾನು ಬಿಡುವುದಿಲ್ಲ. ಆ ರೀತಿಯ ಆಡಳಿತ ನಡೆಯುತ್ತಿದೆ. ಅದರ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳ ಮೂಲಕ ಹೇಳುತ್ತೇನೆ. ಇಂತಹ ಧಾರ್ಮಿಕ ಸಮಾರಂಭದಲ್ಲಿ ಕೀಳುಮಟ್ಟದ ರಾಜಕೀಯ ಮಾಡಬೇಡಿ. ಕೀಳುಮಟ್ಟದ ರಾಜಕಾರಣ ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.
20 ದಿವಸ ಆಯ್ತು ನಾನು ನನ್ನ ಮನೆಯಲ್ಲಿ ಮಲಗಿ, ಇದೇ ಹಾಸನದಲ್ಲಿ ನಿದ್ರೆ ಇಲ್ಲಿದೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನಗೆ ಒಂದು ಜವಾಬ್ದಾರಿಯನ್ನು ನಮ್ಮ ಮುಖ್ಯಮಂತ್ರಿಗಳು ವಹಿಸಿದ್ದಾರೆ. ಅವರಿಗೆ ಹೆಸರು ಬರುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಂಸದರ ಜೊತೆ ಹಗಲು-ರಾತ್ರಿ ಕೆಲಸ ಮಾಡಿದ್ದೇವೆ. ನೀವು ಬಂದು ಹಾಸನಾಂಬ ದೇವಿ ದರ್ಶನ ಪಡೆದು ಅದು ಹೇಗೆ ನುಡಿದಿರಿ ಗೊತ್ತಿಲ್ಲ. ಆ ತಾಯಿಯ ಪಾದದ ಮೇಲೆ ಆಣೆ ಮಾಡಲು ತಯಾರಿದ್ದೇನೆ. ಭ್ರಷ್ಟಾಚಾರದ ಆರೋಪ ಮಾಡೋದು ಬೇಕಾದಷ್ಟು ಇದೆ. ಇದೆಲ್ಲ ಬೇಡ, ನನಗೆ ನೋವಾಗಿ ಹೇಳುತ್ತಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಹಾಸನ ಡಿಸಿ, ಶಿವಲಿಂಗೇಗೌಡ ವಿರುದ್ಧ ಲಂಚಾರೋಪ – ಕೇಂದ್ರ ಸಚಿವ ಕುಮಾರಸ್ವಾಮಿ ಬಾಂಬ್
