ಇಂದಿನ ಯುವಜನತೆಯ ಪ್ರೀತಿ, ವೃತ್ತಿಜೀವನದ ಮಹತ್ವಾಕಾಂಕ್ಷೆ ಮತ್ತು ಆಧುನಿಕ ಸಂಬಂಧಗಳ ಜಟಿಲತೆಯನ್ನು ಒಳಗೊಂಡ ‘ಕಾರ್ಪೊರೇಟ್ ಲವ್ ಸ್ಟೋರಿ’ ಎಂಬ ಹೊಸ ವೆಬ್ ಸರಣಿಯನ್ನು ಕನ್ನಡ Zee5 ಅಧಿಕೃತವಾಗಿ ಘೋಷಿಸಿದೆ. ಬೆಂಗಳೂರಿನ ವೇಗದ ಸ್ಟಾರ್ಟಪ್ ಜಗತ್ತಿನ ಹಿನ್ನೆಲೆಯಲ್ಲಿ ಈ ಸರಣಿ ಮೂಡಿಬಂದಿದ್ದು, ಖ್ಯಾತ ನಿರ್ದೇಶಕ ಪನ್ನಗ ಭರಣ ನಿರ್ದೇಶನ ಮಾಡಿದ್ದಾರೆ. ‘ಫಿಲ್ಮಿ ಫೆಲೋ ಸ್ಟುಡಿಯೋಜ್’ ಸಂಸ್ಥೆ ನಿರ್ಮಾಣದ ಹೊಣೆ ಹೊತ್ತಿದೆ.
ಸಿತಾರಾ ದಾಸ್ ಮತ್ತು ಪ್ರಣವ್ ಶ್ರೀಧರ್ ಪ್ರಮುಖ ಜೋಡಿಯಾಗಿ ನಟಿಸಿದ್ದು, ಹಿರಿಯ ನಟಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಚೇರಿಯ ನಿಯಮಗಳು, ವೃತ್ತಿಜೀವನದ ಮಹತ್ವಾಕಾಂಕ್ಷೆ ಮತ್ತು ವೈಯಕ್ತಿಕ ನಿರೀಕ್ಷೆಗಳ ನಡುವೆ ಪರೀಕ್ಷೆಗೆ ಒಳಗಾಗುವ ಇಬ್ಬರು ಸಹೋದ್ಯೋಗಿಗಳ ಪ್ರೇಮಕಥೆ ಈ ಸರಣಿಯ ಪ್ರಮುಖ ಆಕರ್ಷಣೆ.
ಸ್ಟಾರ್ಟಪ್ ಕಂಪನಿಯಲ್ಲಿ ಅರಳುವ ಪ್ರೇಮಕಥೆ
ಬೆಂಗಳೂರಿನ ಸಂಕಷ್ಟದಲ್ಲಿರುವ ‘ಯುನಿಕ್ವಸ್ ಟೆಕ್’ ಎಂಬ ಸ್ಟಾರ್ಟಪ್ ಕಂಪನಿಯ ಸುತ್ತ ಕಥೆ ಸಾಗುತ್ತದೆ. ಡೇಟಿಂಗ್ ಆ್ಯಪ್ ಬಿಡುಗಡೆ ಮಾಡಲು ಸಿದ್ಧವಾಗಿರುವ ಈ ಕಂಪನಿಗೆ ನಿತ್ಯಾ ಎಂಬ ಮಹತ್ವಾಕಾಂಕ್ಷಿ ಯುವ ಡಿಸೈನರ್ ಸೇರ್ಪಡೆಯಾಗುತ್ತಾಳೆ. ಅಲ್ಲಿ ಆಕೆಗೆ ಶಿಸ್ತುಬದ್ಧ ಮತ್ತು ಜವಾಬ್ದಾರಿಯುತ ಪ್ರಾಡಕ್ಟ್ ಹೆಡ್ ಅರ್ಜುನ್ ಪರಿಚಯವಾಗುತ್ತಾನೆ. ತನ್ನ ಭಾವನೆಗಳನ್ನು ಹೊರಹಾಕಲು ಹಿಂಜರಿಯುವ ಅರ್ಜುನ್ಗೆ ಕಂಪನಿಯನ್ನು ಅನಿಶ್ಚಿತ ಭವಿಷ್ಯದಿಂದ ಪಾರುಮಾಡುವುದೇ ಮುಖ್ಯ ಗುರಿಯಾಗಿರುತ್ತದೆ.
ವಿಭಿನ್ನ ಸ್ವಭಾವದ ನಿತ್ಯಾ ಮತ್ತು ಅರ್ಜುನ್ ನಡುವೆ ಕೆಲಸದ ಮೂಲಕ ಸ್ನೇಹ ಬೆಳೆದು, ಅದು ಪ್ರೀತಿಯಾಗಿ ಬದಲಾಗುತ್ತದೆ. ಆದರೆ ಕಚೇರಿಯ ಒತ್ತಡ, ವೃತ್ತಿಜೀವನದ ಸವಾಲುಗಳು ಮತ್ತು ವೈಯಕ್ತಿಕ ಜವಾಬ್ದಾರಿಗಳ ನಡುವೆ ಅವರ ಸಂಬಂಧ ಹಲವು ಪರೀಕ್ಷೆಗಳನ್ನು ಎದುರಿಸುತ್ತದೆ.
ಈ ಸರಣಿ ಕೇವಲ ಸಾಂಪ್ರದಾಯಿಕ ಪ್ರೇಮಕಥೆಗೆ ಸೀಮಿತವಾಗಿಲ್ಲ. ಇಂದಿನ ಕಾರ್ಪೊರೇಟ್ ಜಗತ್ತು ಮತ್ತು ಸ್ಟಾರ್ಟಪ್ ಬದುಕಿನ ವಾಸ್ತವಗಳನ್ನೂ ಸಹಜವಾಗಿ ತೆರೆದಿಡುತ್ತದೆ. ವೃತ್ತಿಜೀವನದ ಆಕಾಂಕ್ಷೆ, ಕುಟುಂಬದ ನಿರೀಕ್ಷೆ ಮತ್ತು ವೈಯಕ್ತಿಕ ಆಯ್ಕೆಗಳು ಮುಖಾಮುಖಿಯಾದಾಗ ಎದುರಾಗುವ ಸನ್ನಿವೇಶಗಳನ್ನು ಕಥೆಯಲ್ಲಿ ಕಟ್ಟಿಕೊಡಲಾಗಿದೆ.
ನಿತ್ಯಾ ಮತ್ತು ಅರ್ಜುನ್ ಅವರ ಪಯಣದ ಮೂಲಕ ಸಂಬಂಧದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ನಂಬಿಕೆ ಮತ್ತು ಒಟ್ಟಿಗೆ ಬೆಳೆಯುವ ಮನಸ್ಥಿತಿಯ ಮಹತ್ವವನ್ನು ತೋರಿಸಲಾಗಿದೆ. ಕಚೇರಿಯ ಸ್ನೇಹ, ಹೊಸ ಆರಂಭಗಳ ಉತ್ಸಾಹ ಮತ್ತು ಕಠಿಣ ನಿರ್ಧಾರಗಳ ನಡುವೆ ಬದುಕು ಕಟ್ಟಿಕೊಳ್ಳುವ ಯುವ ವೃತ್ತಿಪರರ ಅನುಭವಗಳಿಗೆ ಈ ಸರಣಿ ಕನ್ನಡಿ ಹಿಡಿಯಲಿದೆ.
ಈ ಯೋಜನೆಯ ಕುರಿತು ಮಾತನಾಡಿದ ಝೀ ಕನ್ನಡ ಮತ್ತು ಝೀ ಪವರ್ನ ಮುಖ್ಯ ವಾಹಿನಿ ಅಧಿಕಾರಿ ಹಾಗೂ Zee5 ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, ಕನ್ನಡದ ಪ್ರೇಕ್ಷಕರ ನೈಜ ಅನುಭವಗಳು ಮತ್ತು ಆಕಾಂಕ್ಷೆಗಳಿಗೆ ಹತ್ತಿರವಾದ ಕಥೆಗಳನ್ನು ನೀಡುವುದು ತಮ್ಮ ಉದ್ದೇಶ ಎಂದಿದ್ದಾರೆ.
‘ಕಾರ್ಪೊರೇಟ್ ಲವ್ ಸ್ಟೋರಿ’ ಕನ್ನಡದ ಮೊದಲ ದೀರ್ಘ ಸ್ವರೂಪದ ಪ್ರೇಮಕಥಾ ಸರಣಿ ಎಂದು ಅವರು ಹೇಳಿದ್ದು, ಇಂದಿನ ವೇಗದ ಜಗತ್ತಿನಲ್ಲಿ ಪ್ರೀತಿ ಮತ್ತು ವೃತ್ತಿಪರ ಯಶಸ್ಸನ್ನು ಸರಿದೂಗಿಸುವ ಸವಾಲುಗಳನ್ನು ಈ ಸರಣಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ದೇವಿರಮ್ಮನ ಬೆಟ್ಟ ಹತ್ತುವಾಗ ಹೃದಯಾಘಾತ – ಭಕ್ತ ಸಾವು
ನಿರ್ದೇಶಕ ಪನ್ನಗ ಭರಣ ಮಾತನಾಡಿ, “ನಾವು ದಿನದ ಬಹುಪಾಲು ಸಮಯ ಕಳೆಯುವ ಕೆಲಸದ ಸ್ಥಳವೇ ಸ್ನೇಹ, ಪ್ರೀತಿ ಮತ್ತು ಸವಾಲುಗಳ ತಾಣವಾಗಿರುತ್ತದೆ. ವಿಭಿನ್ನ ವ್ಯಕ್ತಿತ್ವ ಹೊಂದಿರುವ ಇಬ್ಬರು ತಮ್ಮತನವನ್ನು ಕಳೆದುಕೊಳ್ಳದೆ ಪ್ರೀತಿಯ ಹಾದಿಯಲ್ಲಿ ಹೇಗೆ ಮುನ್ನಡೆಯುತ್ತಾರೆ ಎಂಬುದನ್ನು ನಿತ್ಯಾ ಮತ್ತು ಅರ್ಜುನ್ ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದೇವೆ” ಎಂದಿದ್ದಾರೆ.
ನಿತ್ಯಾ ಪಾತ್ರದಲ್ಲಿ ನಟಿಸಿರುವ ಸಿತಾರಾ ದಾಸ್, ವೃತ್ತಿಜೀವನ ಮತ್ತು ಭಾವನೆಗಳನ್ನು ನಿಭಾಯಿಸುತ್ತಾ ತನ್ನತನ ಉಳಿಸಿಕೊಳ್ಳುವ ಮಹತ್ವಾಕಾಂಕ್ಷಿ ಯುವತಿಯ ಪಾತ್ರ ಇದಾಗಿದೆ. ಇಂದಿನ ಯುವಜನತೆಗೆ ಈ ಪಾತ್ರ ಹತ್ತಿರವಾಗಲಿದೆ ಎಂದಿದ್ದಾರೆ.
ಅರ್ಜುನ್ ಪಾತ್ರಧಾರಿ ಪ್ರಣವ್ ಶ್ರೀಧರ್, ಕೆಲಸಕ್ಕೆ ಹೆಚ್ಚು ಒತ್ತು ನೀಡಿ ಭಾವನೆಗಳನ್ನು ಅದುಮಿಟ್ಟುಕೊಳ್ಳುವ ಅರ್ಜುನ್ನ ಸಂಘರ್ಷ ಮತ್ತು ಆತನ ಬದಲಾಗುವ ಒಡನಾಟವನ್ನು ತೆರೆಮೇಲೆ ತರುವುದು ಉತ್ತಮ ಅನುಭವವಾಗಿತ್ತು ಎಂದು ಹಂಚಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಕೆಲಸದ ಸ್ಥಳದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ನಿರ್ಧಾರಗಳು ಪರಸ್ಪರ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ದೈನಂದಿನ ಜೀವನದ ದೃಷ್ಟಿಕೋನದಿಂದ ತೋರಿಸಿರುವ ರೀತಿ ಇಷ್ಟವಾಯಿತು ಎಂದಿದ್ದಾರೆ.
ಕೊರಿಯನ್ ಡ್ರಾಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೂ ಈ ಕನ್ನಡ ವೆಬ್ ಸರಣಿ ಮನರಂಜನೆ ನೀಡುವ ನಿರೀಕ್ಷೆಯಿದೆ. ಸದ್ಯ ಭಾರೀ ಕುತೂಹಲ ಮೂಡಿಸಿರುವ ‘ಕಾರ್ಪೊರೇಟ್ ಲವ್ ಸ್ಟೋರಿ’ ಶೀಘ್ರದಲ್ಲೇ ಕನ್ನಡ Zee5ನಲ್ಲಿ ಪ್ರಸಾರವಾಗಲಿದೆ.ಇದನ್ನೂ ಓದಿ: ಜಪಾನ್ನಲ್ಲಿ 5.7 ತೀವ್ರತೆಯ ಭೂಕಂಪ – 22 ಮಂದಿಗೆ ಗಾಯ, ಕಟ್ಟಡಗಳ ಗಾಜು ಪುಡಿಪುಡಿ
