ಪ್ರಣಮ್ ದೇವರಾಜ್ ಮತ್ತು ಸಂಜನಾ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶ್ರೀರಸ್ತು’ ಚಿತ್ರಕ್ಕೆ ಯುವ ನಿರ್ದೇಶಕ ಶಂಕರ್ ರೆಡ್ಡಿ ಸಿದ್ದರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನ ಹರಿ ಕ್ರಿಯೇಷನ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ನಿರ್ಮಾಪಕ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ಅವರು ನಿರ್ಮಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಚಿತ್ರದ ಮೊದಲ ಹಾಡು `ಏಪರಿ ಸೌಂದರ್ಯಮಾ’ವನ್ನ ಚಿತ್ರತಂಡ ನವೆಂಬರ್ 5ರಂದು ಬಿಡುಗಡೆ ಮಾಡಿದೆ.
ಮಧುರ ಮೆಲೋಡಿ ಧಾಟಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಶೇಕರ್ ಚಂದ್ರ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಗೀತರಚನೆಕಾರ ವರದರಾಜ್ ಚಿಕ್ಕಬಳ್ಳಾಪುರ ಅವರು ರಚಿಸಿರುವ ಸಾಹಿತ್ಯ ಹಾಡಿನ ಭಾವವನ್ನ ಸುಂದರವಾಗಿ ಕಟ್ಟಿಕೊಟ್ಟಿದೆ. ಜನಪ್ರಿಯ ಗಾಯಕ ಕಪಿಲ್ ಕಪಿಲನ್ ತಮ್ಮ ವಿಶಿಷ್ಟ ಗಾಯನ ಶೈಲಿಯಲ್ಲಿ ಹಾಡಿಗೆ ಜೀವ ತುಂಬಿದ್ದಾರೆ.
ಹಾಡಿನ ದೃಶ್ಯಗಳಲ್ಲಿ ಪ್ರಣಮ್ ದೇವರಾಜ್ ಮತ್ತು ಸಂಜನಾ ಆನಂದ್ ಅವರ ಆಕರ್ಷಕ ಜೋಡಿ, ಪರಸ್ಪರ ಹೊಂದಾಣಿಕೆ ಹಾಗೂ ನೃತ್ಯದ ಹೆಜ್ಜೆಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಜೀತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನ ವೀಕ್ಷಣೆಗಳು ವೇಗವಾಗಿ ಹೆಚ್ಚುತ್ತಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ನಲ್ಲಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಶಂಕರ್ ರೆಡ್ಡಿ ಸಿದ್ದರೆಡ್ಡಿ ಮಾತನಾಡಿ, ‘ನಮ್ಮ ಚಿತ್ರದಲ್ಲಿ ಈ ಹಾಡು ಕಥೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಸಂಗೀತ ನಿರ್ದೇಶಕ ಶೇಕರ್ ಚಂದ್ರ ಅವರು ಅದ್ಭುತವಾದ ಸಂಗೀತ ಸಂಯೋಜನೆ ನೀಡಿದ್ದಾರೆ. ಹರಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರವು ತನ್ನ ದೃಶ್ಯ ವೈಭವದ ಮೂಲಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲಿದೆ. ಚಿತ್ರದ ಇತರ ಮಾಹಿತಿಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆʼ ಎಂದು ತಿಳಿಸಿದರು.
ನಿರ್ಮಾಪಕ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ಮಾತನಾಡಿ, “ಹರಿ ಕ್ರಿಯೇಷನ್ಸ್ ಬ್ಯಾನರ್ನಡಿ ಉತ್ತಮ ಕುಟುಂಬ ಮನರಂಜನಾ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿರುವುದು ಸಂತೋಷದ ಸಂಗತಿ. ಚಿತ್ರದ ಪ್ರಚಾರದ ಭಾಗವಾಗಿ ಬಿಡುಗಡೆ ಮಾಡಿದ ಮೊದಲ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ದೊರೆಯುತ್ತಿದೆ. ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ನಿರ್ಮಾಣ ಮೌಲ್ಯಗಳೊಂದಿಗೆ ಚಿತ್ರವನ್ನು ರೂಪಿಸುತ್ತಿದ್ದೇವೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ನಮ್ಮ ‘ಶ್ರೀರಸ್ತು’ ಚಿತ್ರದ ಚಿತ್ರಮಂದಿರ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ನಡೆಯುತ್ತಿವೆ” ಎಂದರು. ಪ್ರಣಮ್ ದೇವರಾಜ್, ಸಂಜನಾ ಆನಂದ್, ಸುಮನ್, ಆಮಣಿ, ಚೈತ್ರ, ಪ್ರಸಾದ್ ಬೆಹರಾ, ಶಿವ ರವಿತೇಜ ಸೇರಿದಂತೆ ಹಲವರು ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

