– ಇಂದಿನಿಂದ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು
ಮಂಡ್ಯ: ಮಳೆಯ ಕೊರತೆ ಮತ್ತು ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಆತಂಕಕಾರಿ ಮಟ್ಟಕ್ಕೆ ಕುಸಿಯುತ್ತಿದೆ. ಕಳೆದ 10 ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟ ಬರೋಬ್ಬರಿ 6 ಅಡಿಗಳಷ್ಟು ಇಳಿಕೆಯಾಗಿದೆ.
104 ಅಡಿಯಿಂದ 98 ಅಡಿಗೆ ಇಳಿಕೆ
124.80 ಗರಿಷ್ಠ ಅಡಿ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಕಳೆದ 10 ದಿನಗಳ ಹಿಂದೆ 104 ಅಡಿ ನೀರಿತ್ತು. ಆದರೆ, ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಪ್ರಸ್ತುತ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಸದ್ಯ ಜಲಾಶಯದಲ್ಲಿ ಕೇವಲ 21.689 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.
ಗಾಯದ ಮೇಲೆ ಬರೆ ಎಳೆದ CWMA
ಒಂದೆಡೆ ಜಲಾಶಯ ಬರಿದಾಗುತ್ತಿದ್ದರೆ, ಮತ್ತೊಂದೆಡೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ರಾಜ್ಯದ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಇಂದಿನಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಹರಿಸುವಂತೆ ಪ್ರಾಧಿಕಾರ ಸೂಚನೆ ನೀಡಿದೆ.
ಒಳಹರಿವು ಕುಸಿತ, ಹೆಚ್ಚಿದ ಆತಂಕ
ಪ್ರಸ್ತುತ ಜಲಾಶಯಕ್ಕೆ ಕೇವಲ 608 ಕ್ಯೂಸೆಕ್ ಮಾತ್ರ ಒಳಹರಿವು ಇದ್ದು, ಬರೋಬ್ಬರಿ 3,480 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಳೆಯ ಕೊರತೆಯ ನಡುವೆ ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿರುವುದು ಕಾವೇರಿ ಕಣಿವೆಯ ರೈತರು ಹಾಗೂ ಕುಡಿಯುವ ನೀರಿನ ಪೂರೈಕೆಗೆ ತೀವ್ರ ಸಂಕಷ್ಟ ಎದುರಾಗುವ ಆತಂಕವನ್ನು ಸೃಷ್ಟಿಸಿದೆ.
ಜಲಾಶಯದ ಪ್ರಸ್ತುತ ನೀರಿನ ಮಟ್ಟದ ವಿವರ
* ಗರಿಷ್ಠ ಮಟ್ಟ: 124.80 ಅಡಿ
* ಇಂದಿನ ಮಟ್ಟ: 98 ಅಡಿ
* ಗರಿಷ್ಠ ಸಂಗ್ರಹ: 49.452 ಟಿಎಂಸಿ
* ನೀರಿನ ಸಂಗ್ರಹ: 21.689 ಟಿಎಂಸಿ
* ಒಳಹರಿವು: 608 ಕ್ಯೂಸೆಕ್
* ಹೊರಹರಿವು: 3,480 ಕ್ಯೂಸೆಕ್

