– 22 ಕೇಂದ್ರಗಳಲ್ಲಿ 400ರ ಗಡಿ ದಾಟಿದ ಎಕ್ಯೂಐ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಉಸಿರಾಡುವ ಗಾಳಿ ವಿಷವಾಗಿತ್ತಿದ್ದು, ದೀಪಾವಳಿ ಹಬ್ಬಕ್ಕೂ (Deepavali Festival) ಮುನ್ನವೇ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಎಂದು ವರದಿಯಾಗಿದೆ.
ಹೌದು. ವಾಯು ಗುಣಮಟ್ಟವು ‘ಅತ್ಯಂತ ಕಳಪೆ’ (Very Poor) ವರ್ಗದಲ್ಲೇ ಮುಂದುವರಿದಿದ್ದು, ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 366 ರಷ್ಟಿದೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ 3ನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಿದ್ದರೂ, ಮಾಲಿನ್ಯ ಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿಯಾದ್ಯಂತ ಇರುವ ಹಲವು ಮೇಲ್ವಿಚಾರಣಾ ಕೇಂದ್ರಗಳಲ್ಲಿ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. 22 ಸ್ಥಳಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 400ರ ಗಡಿ ದಾಟಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ.
ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ತುತ್ತಾದ ಪ್ರದೇಶಗಳ ಪೈಕಿ ಐಐಟಿ (IIT)ನಲ್ಲಿ 442 ಎಕ್ಯೂಐ, ಪಂಜಾಬಿ ಬಾಗ್ನಲ್ಲಿ 433 ಮತ್ತು ವಿವೇಕ್ ವಿಹಾರ್ನಲ್ಲಿ 427 ಸೂಚ್ಯಂಕ ದಾಖಲಾಗಿವೆ. ಇನ್ನೂ ಜಹಾಂಗೀರ್ಪುರಿಯಲ್ಲಿ ಎಕ್ಯೂಐ 421 ರಷ್ಟಿದ್ದರೆ, ರೋಹಿಣಿಯಲ್ಲಿ 418 ರಷ್ಟಿದೆ. ಇದರೊಂದಿಗೆ ಬವಾನಾ (411), ಡಿಟಿಯು (DTU – 408), ನರೇಲಾ (408) ಮತ್ತು ಅಲಿಪುರ (402) ಪ್ರದೇಶಗಳಲ್ಲಿಯೂ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲೇ ಮುಂದುವರಿದಿದೆ.
ದೆಹಲಿಯ ನೆರೆಯ ಎನ್ಸಿಆರ್ (NCR) ನಗರಗಳ ಪೈಕಿ, ನೋಯ್ಡಾದಲ್ಲಿ ವಾಯು ಗುಣಮಟ್ಟ 284 ಮತ್ತು ಗಾಜಿಯಾಬಾದ್ನಲ್ಲಿ 286ರಷ್ಟಿದೆ. ಗುರುಗ್ರಾಮದಲ್ಲಿ 355 ಹಾಗೂ ಫರಿದಾಬಾದ್ನಲ್ಲಿ 347 ಗುಣಮಟ್ಟ ದಾಖಲಾಗಿದೆ.
GRAP-III ಅಡಿ ನಿರ್ಬಂಧಗಳೇನು?
3ನೇ ಹಂತದ ನಿರ್ಬಂಧಗಳ ಕ್ರಮದಲ್ಲಿ ಅಗತ್ಯವಲ್ಲದ ನಿರ್ಮಾಣ ಮತ್ತು ಕಟ್ಟಡ ಕೆಡವುವ (demolition) ಚಟುವಟಿಕೆಗಳ ಮೇಲೆ ನಿಷೇಧ, ಹಳೆಯ ಬಿಎಸ್-III (BS-III) ಪೆಟ್ರೋಲ್ ಮತ್ತು ಬಿಎಸ್-IV (BS-IV) ಡೀಸೆಲ್ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹಾಗೂ ಕಲ್ಲು ಕ್ರಷರ್ಗಳ ಮುಚ್ಚುವಿಕೆ ಮತ್ತು ಗಣಿಗಾರಿಕೆ ಚಟುವಟಿಕೆಗಳ ಸ್ಥಗಿತ ಒಳಗೊಂಡಿವೆ.

