ಭಾರತೀಯರ ಸಂಸ್ಕೃತಿ ಮತ್ತು ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ‘ಹಳದಿ ಲೋಹ’ದ ಮೇಲಿನ ಒಲವು ಇದೀಗ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಟ್ಟಿಗೆ ಕುಸಿತ ಕಂಡಿದೆ. ಶತಮಾನಗಳಿಂದ ಬಂಗಾರವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಕಷ್ಟಕಾಲದ ಆಸ್ತಿಯನ್ನಾಗಿ ಭಾವಿಸುತ್ತಿದ್ದ ಭಾರತೀಯರು, ಈಗ ಹೊಸ ಚಿನ್ನ(Gold) ಖರೀದಿಯಿಂದ ಹಂತಹಂತವಾಗಿ ದೂರ ಸರಿಯುತ್ತಿದ್ದಾರೆ. ಗಗನಕ್ಕೇರಿದ ದಾಖಲೆಯ ಬೆಲೆ, ಬದಲಾದ ಯುವಪೀಳಿಗೆಯ ಹೂಡಿಕೆ ಮನಸ್ಥಿತಿ ಹಾಗೂ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ನಡುವೆ, 2026ರಲ್ಲಿ ಭಾರತೀಯರ ಚಿನ್ನದ ಬೇಡಿಕೆ ಕೊರೊನಾ ಕಾಲದ ನಂತರದ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬಂಗಾರದ ಮಾರುಕಟ್ಟೆಯಲ್ಲಿ ಉಂಟಾಗಿರುವ ಈ ಐತಿಹಾಸಿಕ ಬದಲಾವಣೆ ಮತ್ತು ಭಾರತೀಯರಲ್ಲಿ ಚಿನ್ನದ ವ್ಯಾಮೋಹ ತಗ್ಗಲು ಕಾರಣವಾದ ಪ್ರಮುಖ ಅಂಶಗಳ ಸಮಗ್ರ ನೋಟ ಇಲ್ಲಿದೆ.
ಬೇಡಿಕೆ ಶೇ.29 ರಷ್ಟು ಕುಸಿತ
ಭಾರತೀಯ(India) ಸಮಾಜದಲ್ಲಿ ಶತಮಾನಗಳಿಂದಲೂ ಗಟ್ಟಿಯಾಗಿ ನೆಲೆಸಿದ್ದ ಹಳದಿ ಲೋಹದ ಆಕರ್ಷಣೆಗೆ ಇದೀಗ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. 2026ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯು ಬಹು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವಿಶ್ವ ಚಿನ್ನ ಮಂಡಳಿ (World Gold Council – WGC) ತನ್ನ ಇತ್ತೀಚಿನ ತ್ರೈಮಾಸಿಕ ವರದಿಯಲ್ಲಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆಯು ವಾರ್ಷಿಕ ಆಧಾರದಲ್ಲಿ ಶೇ.29 ರಷ್ಟು ಭಾರಿ ಕುಸಿತ ದಾಖಲಿಸಿದ್ದು, ಕೇವಲ 162.5 ಮೆಟ್ರಿಕ್ ಟನ್ಗಳಿಗೆ ಸೀಮಿತಗೊಂಡಿದೆ.
ಕೊರೊನಾ ಸಾಂಕ್ರಾಮಿಕದ ಹೊಡೆತ ಬಿದ್ದಿದ್ದ 2020ರ ನಂತರದ ಅವಧಿಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಟ್ಟ ಇದಾಗಿದ್ದು, 2026ರ ಇಡೀ ವರ್ಷದ ಒಟ್ಟಾರೆ ಬೇಡಿಕೆ ಕೇವಲ 650 ಮೆಟ್ರಿಕ್ ಟನ್ಗೆ ಕುಸಿಯುವ ಸಾಧ್ಯತೆಯಿದೆ ಎಂದು ಮಂಡಳಿ ಅಂದಾಜಿಸಿದೆ.
ಪ್ರಮಾಣ ಕುಸಿದರೂ ಮೌಲ್ಯದಲ್ಲಿ ಏರಿಕೆ
ಕಳೆದ ವರ್ಷಕ್ಕೆ (2025) ಹೋಲಿಸಿದರೆ ಚಿನ್ನದ ಭೌತಿಕ ಬಳಕೆಯ ಪ್ರಮಾಣದಲ್ಲಿ (Volume) ತೀವ್ರ ಇಳಿಕೆಯಾಗಿದ್ದರೂ, ದರ ಏರಿಕೆಯ ಕಾರಣದಿಂದಾಗಿ ಒಟ್ಟಾರೆ ವಹಿವಾಟಿನ ಮೌಲ್ಯದಲ್ಲಿ (Value) ಏರಿಕೆ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 125 ಟನ್ ಇದ್ದ ಆಭರಣಗಳ ಬೇಡಿಕೆ ಈ ಬಾರಿ ಶೇ. 20 ರಷ್ಟು ಕುಸಿದು 99.9 ಟನ್ಗೆ ಬಂದು ನಿಂತಿದೆ.
ಹೂಡಿಕೆ ಉದ್ದೇಶದ ಗೋಲ್ಡ್ ಬಾರ್ ಮತ್ತು ನಾಣ್ಯಗಳ ಖರೀದಿ ಬರೋಬ್ಬರಿ ಶೇ. 40 ರಷ್ಟು ಕುಸಿದು 55 ಟನ್ಗೆ ಇಳಿದಿದೆ. ಪ್ರಮಾಣ ಕುಸಿದರೂ ದಾಖಲೆಯ ಬೆಲೆ ಏರಿಕೆಯ ಕಾರಣದಿಂದಾಗಿ ಸೆಪ್ಟೆಂಬರ್ ತ್ರೈಮಾಸಿಕದ ವಹಿವಾಟು ಮೌಲ್ಯ 2,41,900 ಕೋಟಿ ರೂ.ಗೆ ಮುಟ್ಟಿದೆ. ಇನ್ನು ಇಡೀ ವರ್ಷದ ಲೆಕ್ಕಾಚಾರದಲ್ಲಿ ಭಾರತೀಯರು ಚಿನ್ನಕ್ಕಾಗಿ ವ್ಯಯಿಸಿದ ಹಣ ಶೇ. 38 ರಷ್ಟು ಏರಿಕೆಯಾಗಿ ಬರೋಬ್ಬರಿ 6.67 ಲಕ್ಷ ಕೋಟಿ ತಲುಪಿದೆ. ಅಂದರೆ ಗ್ರಾಹಕರು ಹೆಚ್ಚಿನ ಹಣ ತೆತ್ತು ಕಡಿಮೆ ಪ್ರಮಾಣದ ಚಿನ್ನವನ್ನು ಮನೆಗೆ ಒಯ್ಯುತ್ತಿದ್ದಾರೆ.
ಚಿನ್ನದ ಬೇಡಿಕೆ ಕುಸಿಯಲು ಕಾರಣ ಏನು?
ದಾಖಲೆಯ ಗರಿಷ್ಠ ಮಟ್ಟ ತಲುಪಿದ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆ ಗಗನಕ್ಕೇರಿದ್ದು, ಮಧ್ಯಮ ವರ್ಗದ ಕೈಗೆಟುಕದಂತಾಗಿದೆ. ಹೀಗಾಗಿ ಜನರು 18 ಕ್ಯಾರೆಟ್ ಅಥವಾ 14 ಕ್ಯಾರೆಟ್ನ ಕಡಿಮೆ ಶುದ್ಧತೆಯ ಚಿನ್ನ ಹಾಗೂ ನೋಡಲು ಭರ್ಜರಿಯಾಗಿ ಕಂಡರೂ ತೂಕದಲ್ಲಿ ಅತ್ಯಂತ ಹಗುರವಾದ ‘ಲೈಟ್ವೇಟ್’ ಆಭರಣಗಳ ಮೊರೆ ಹೋಗುತ್ತಿದ್ದಾರೆ.
ಹಳೆಯ ಚಿನ್ನದ ವಿನಿಮಯಕ್ಕೆ ಮೊರೆ:
ಹೊಸದಾಗಿ ಸಂಪೂರ್ಣ ನಗದು ನೀಡಿ ಒಡವೆ ಖರೀದಿಸುವ ಶಕ್ತಿ ಗ್ರಾಹಕರಲ್ಲಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಗ್ರಾಹಕರಲ್ಲಿ ಶೇ.76 ಕ್ಕೂ ಹೆಚ್ಚು ಮಂದಿ ತಮ್ಮ ಬಳಿಯಿದ್ದ ಹಳೆಯ ಒಡವೆಗಳನ್ನು ಕೊಟ್ಟು, ಕೇವಲ ಮಜೂರಿ-ಕರಗುವಿಕೆಯ ವೆಚ್ಚವನ್ನು ಭರಿಸಿ ಹೊಸ ವಿನ್ಯಾಸದ ಆಭರಣಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ.
ಮೋದಿಯವರ ದೇಶವ್ಯಾಪಿ ಕರೆ
ದೇಶದ ಅಮೂಲ್ಯ ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex Reserves) ರಕ್ಷಿಸಲು ಮತ್ತು ಅನಗತ್ಯ ಆಮದನ್ನು ನಿಯಂತ್ರಿಸಲು ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಸರ್ಕಾರದ ಈ ಕರೆಯು ಮಾರುಕಟ್ಟೆಯ ಭಾವನೆಗಳ ಮೇಲೆ ನೇರ ಪರಿಣಾಮ ಬೀರಿದೆ.
ಗ್ರಾಮೀಣ ಆರ್ಥಿಕತೆ
ಭಾರತದ ಒಟ್ಟಾರೆ ಚಿನ್ನದ ಖರೀದಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಪಾಲು ಗ್ರಾಮೀಣ ಭಾರತದಿಂದಲೇ ಬರುತ್ತದೆ. ಆದರೆ 2026ರ ಮುಂಗಾರು ಮಳೆಯ ಅಸಮತೋಲನದಿಂದಾಗಿ ಕೃಷಿ ಇಳುವರಿ ಕುಸಿದು, ರೈತರ ಆದಾಯಕ್ಕೆ ಹೊಡೆತ ಬಿದ್ದಿದೆ. ಕೈಯಲ್ಲಿ ಹಣದ ಹರಿವು ಕಡಿಮೆಯಾಗಿ ಗ್ರಾಮೀಣ ಭಾಗದಲ್ಲಿ ಒಡವೆ ಖರೀದಿಯ ಉತ್ಸಾಹ ತಣ್ಣಗಾಗಿದೆ.
ಸರ್ಕಾರದ ಕಠಿಣ ನಿಯಮ
ಚಿನ್ನದ ಖರೀದಿಯಲ್ಲಿ ಕಪ್ಪುಹಣ ಹೂಡಿಕೆಯನ್ನು ತಡೆಯಲು ಸರ್ಕಾರ ದೊಡ್ಡ ಮೊತ್ತದ ವಹಿವಾಟಿಗೆ ಪ್ಯಾನ್ ಕಾರ್ಡ್ (PAN Card) ಹಾಗೂ ಕೆವೈಸಿ (KYC) ನಿಯಮಗಳನ್ನು ಕಡ್ಡಾಯಗೊಳಿಸಿದೆ. ಇದರಿಂದ ನಗದು ವಹಿವಾಟುಗಳಿಗೆ ದೊಡ್ಡ ತಡೆ ಬಿದ್ದಿದೆ. ಮತ್ತೊಂದೆಡೆ, ಸರ್ಕಾರ ಅಧಿಕೃತ ಆಮದು ಸುಂಕವನ್ನು (Import Duty) ಹೆಚ್ಚಿಸಿರುವುದರಿಂದ ಅಧಿಕೃತ ಆಮದು ಕಡಿಮೆಯಾಗಿ, ಅನಧಿಕೃತ ಮಾರ್ಗಗಳ (ಸ್ಮಗ್ಲಿಂಗ್) ಮೂಲಕ ದೇಶದೊಳಗೆ ಚಿನ್ನ ಬರುವುದು ಹೆಚ್ಚಾಗಿದೆ ಎಂದು WGC ವರದಿ ತಿಳಿಸಿದೆ.
ಇಟಿಎಫ್ಗಳಲ್ಲಿ ಹೂಡಿಕೆ
ಹಳೆಯ ತಲೆಮಾರಿನಂತೆ ಚಿನ್ನವನ್ನೇ ಸರ್ವಶ್ರೇಷ್ಠ ಹೂಡಿಕೆ ಎಂದು ಇಂದಿನ ಯುವಕರು ಭಾವಿಸುತ್ತಿಲ್ಲ. ಹೆಚ್ಚಿನ ಲಾಭ (High Returns) ನೀಡುವ ಮ್ಯೂಚುವಲ್ ಫಂಡ್ ಎಸ್ಐಪಿ (SIP), ನೇರ ಷೇರು ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್ (ಫ್ಲಾಟ್ ಮತ್ತು ನಿವೇಶನ) ಆಸ್ತಿಗಳತ್ತ ಯುವ ಸಮೂಹ ಬೃಹತ್ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದೆ.
ಮನೆಯಲ್ಲಿ ಕಳ್ಳತನದ ಭಯ, ಲಾಕರ್ ಬಾಡಿಗೆ ಮತ್ತು ಶುದ್ಧತೆಯ ತಲೆನೋವು ತಪ್ಪಿಸಲು ಹೂಡಿಕೆದಾರರು ಭೌತಿಕ ಬಂಗಾರದ ಬದಲು ‘ಗೋಲ್ಡ್ ಇಟಿಎಫ್’ (Gold ETFs) ಮತ್ತು ಸಾವರಿನ್ ಗೋಲ್ಡ್ ಬಾಂಡ್ಗಳತ್ತ (SGB) ಮುಖ ಮಾಡಿದ್ದಾರೆ. ವಿಶ್ವ ಚಿನ್ನ ಮಂಡಳಿ ವರದಿಯ ಪ್ರಕಾರ, 2026ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ Gold ETF ಬೇಡಿಕೆಯು 5.3 ಟನ್ಗಳಿಗೆ ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಇದು 3.6 ಟನ್ ಇತ್ತು. ಅಕ್ಟೋಬರ್ ತಿಂಗಳೊಂದರಲ್ಲೇ ಭಾರತೀಯರು ಇಟಿಎಫ್ಗಳಲ್ಲಿ ಸುಮಾರು 3,300 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಮತ್ತು ಇಟಿಎಫ್ಗಳ ಒಟ್ಟು ಆಸ್ತಿ ಮೌಲ್ಯ 1.91 ಲಕ್ಷ ಕೋಟಿ ರೂ.ಗೆ ತಲುಪಿದೆ.
ಭೌತಿಕ ಚಿನ್ನ ಕೊಳ್ಳುವಾಗ ಶೇ. 10 ರಿಂದ ಶೇ. 25 ರವರೆಗೆ ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಮತ್ತು ಶೇ. 3 ರಷ್ಟು ಜಿಎಸ್ಟಿ ನೀಡಬೇಕಾಗುತ್ತದೆ. ಇಟಿಎಫ್ಗಳಲ್ಲಿ ಇಂತಹ ಯಾವುದೇ ಗುಪ್ತ ವೆಚ್ಚಗಳು ಇರುವುದಿಲ್ಲ. ನೀವು ಶುದ್ಧ ಚಿನ್ನದ ನಿಖರ ಮಾರುಕಟ್ಟೆ ಬೆಲೆಗೆ ನೇರವಾಗಿ ಹೂಡಿಕೆ ಮಾಡಬಹುದು. ಹಳೆಳೆಯ ಒಡವೆಗಳನ್ನು ಮಾರಲು ಹೋದಾಗ ಶೇ. 10-20 ರಷ್ಟು ಮೌಲ್ಯವನ್ನು ಕರಗಿಸುವ ನೆಪದಲ್ಲಿ ಕಡಿತಗೊಳಿಸಲಾಗುತ್ತದೆ. ಇಟಿಎಫ್ಗಳಲ್ಲಿ ಶೇ. 99.5 ಶುದ್ಧತೆಯ 24 ಕ್ಯಾರೆಟ್ ಚಿನ್ನದ ಮೌಲ್ಯವಿರುತ್ತದೆ. ನೀವು ಮಾರಾಟ ಮಾಡುವಾಗ ಆ ದಿನದ ಪೂರ್ತಿ ಮಾರುಕಟ್ಟೆ ದರ ಯಾವುದೇ ಕಡಿತವಿಲ್ಲದೆ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಇಂದಿನ ದುಬಾರಿ ಬೆಲೆಯಲ್ಲಿ 10 ಗ್ರಾಂ ಚಿನ್ನ ಕೊಳ್ಳುವುದು ಕಷ್ಟ. ಆದರೆ ಇಟಿಎಫ್ಗಳಲ್ಲಿ ನೀವು ಕೇವಲ 100 ಅಥವಾ 1 ಗ್ರಾಂನಷ್ಟು ಸಣ್ಣ ಮೊತ್ತದಿಂದಲೂ SIP (Systematic Investment Plan) ಮೂಲಕ ಹೂಡಿಕೆ ಆರಂಭಿಸಬಹುದು. ಷೇರು ಮಾರುಕಟ್ಟೆಯಲ್ಲಿ Nippon India Gold BeES, SBI Gold ETF, ಅಥವಾ HDFC Gold ETF ಗಳಂತಹ ಫಂಡ್ಗಳನ್ನು ಮೊಬೈಲ್ ಆಪ್ ಮೂಲಕ ಒಂದೇ ಕ್ಲಿಕ್ನಲ್ಲಿ ತಕ್ಷಣವೇ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.
ಹೂಡಿಕೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ
ಇಂದಿನ ತಲೆಮಾರಿನ ಆದ್ಯತೆಗಳು ಬದಲಾಗಿವೆ. ಕಪಾಟಿನಲ್ಲಿ ಚಿನ್ನ ಕೂಡಿಡುವ ಬದಲು ದೇಶ-ವಿದೇಶ ಪ್ರವಾಸ (Travel & Tourism), ಅತ್ಯಾಧುನಿಕ ಗ್ಯಾಜೆಟ್ಗಳು, ಐಷಾರಾಮಿ ವಾಹನಗಳು ಹಾಗೂ ಜೀವನಶೈಲಿಯನ್ನು ಉನ್ನತೀಕರಿಸಿಕೊಳ್ಳಲು ಹಣ ವ್ಯಯಿಸುತ್ತಿದ್ದಾರೆ. ನಿತ್ಯ ಬಳಕೆಗೆ ಭಾರೀ ಆಭರಣಗಳ ಬದಲು ಸರಳ ಕೃತಕ (Fashion/Imitation) ಆಭರಣಗಳ ಬಳಕೆಯೂ ಹೆಚ್ಚಿದೆ.
ಹಿಂದೆಲ್ಲ ಆಸ್ಪತ್ರೆ ವೆಚ್ಚ, ಕೃಷಿ ಅಥವಾ ತುರ್ತು ಹಣಕಾಸಿನ ಅಗತ್ಯಕ್ಕೆ ಬಂಗಾರವೇ ಪ್ರಮುಖ ಆಸರೆಯಾಗಿತ್ತು. ಆದರೆ ಇಂದು ಬ್ಯಾಂಕ್ಗಳು ಹಾಗೂ ಫಿನ್ಟೆಕ್ ಸಂಸ್ಥೆಗಳು ಬೆರಳ ತುದಿಯಲ್ಲೇ ಕ್ಷಣಾರ್ಧದಲ್ಲಿ ವೈಯಕ್ತಿಕ ಸಾಲ (Instant Personal Loan) ಹಾಗೂ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ, ತುರ್ತು ನಿಧಿಗಾಗಿ ಬಂಗಾರವನ್ನು ಕೂಡಿಡುವ ಅನಿವಾರ್ಯತೆ ಇಂದಿನ ಜನರಿಗೆ ಉಳಿದಿಲ್ಲ.
ಭಾರತೀಯ ಸಮಾಜದಲ್ಲಿ ಚಿನ್ನಕ್ಕೆ ಇರುವ ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಮಹತ್ವ ಎಂದಿಗೂ ಶಾಶ್ವತ. ಆದರೆ, ಆರ್ಥಿಕ ಜಗತ್ತಿನ ಕಠಿಣ ವಾಸ್ತವ, ದುಬಾರಿ ಬೆಲೆ ಮತ್ತು ಬದಲಾಗುತ್ತಿರುವ ಹೂಡಿಕೆ ಆದ್ಯತೆಗಳು ಗ್ರಾಹಕರ ಚಿಂತನೆಯನ್ನು ಸಂಪೂರ್ಣವಾಗಿ ಬದಲಿಸಿವೆ. ಬಂಗಾರವನ್ನು ಕೇವಲ ಕಪಾಟಿನಲ್ಲಿಟ್ಟು ಪೂಜಿಸುವ ಬದಲು, ಹೆಚ್ಚಿನ ಲಾಭ ತಂದುಕೊಡುವ ಆಧುನಿಕ ಹಣಕಾಸು ಸಾಧನಗಳತ್ತ ಜನರು ಮುಖ ಮಾಡುತ್ತಿರುವುದು ದೇಶದ ಆರ್ಥಿಕತೆಯ ಪಕ್ವತೆಯನ್ನು ಎತ್ತಿ ತೋರಿಸುತ್ತಿದೆ. ದೀಪಾವಳಿ ಹಬ್ಬ ಮತ್ತು ಮುಂಬರುವ ಮದುವೆಯ ಸೀಸನ್ ಕಾರಣದಿಂದಾಗಿ ಮುಂದಿನ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಚೇತರಿಕೆ ಕಂಡುಬರಬಹುದಾದರೂ, ಗಗನಮುಖಿ ಬೆಲೆ ಹಾಗೂ ಬದಲಾದ ಹೂಡಿಕೆ ಸಂಸ್ಕೃತಿಯಿಂದಾಗಿ ಭಾರತೀಯರಲ್ಲಿ ಚಿನ್ನದ ಮೇಲಿನ ‘ಸಾಂಪ್ರದಾಯಿಕ ವ್ಯಾಮೋಹ’ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದು ಸ್ಪಷ್ಟವಾಗಿದೆ.


