– ಕರ್ನಾಟಕದಲ್ಲಿ ನಡೆದ ಮಾದರಿ ಸಂಗ್ರಹ, ಪರೀಕ್ಷಾ ವಿಧಾನಕ್ಕೆ ತೈಲ ಕಂಪನಿಗಳ ಆಕ್ಷೇಪ
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ನಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಮಿಶ್ರಣ ಆರೋಪಕ್ಕೆ ತೈಲ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಎಥನಾಲ್ ಪ್ರಮಾಣದ ಅಂಕಿಅಂಶಗಳನ್ನು ಪ್ರಶ್ನಿಸಿದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಪ್ರಶ್ನಿಸಿವೆ.
ಕರ್ನಾಟಕದಲ್ಲಿ ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ನಿಗದಿತ ಮಾನದಂಡ ಉಲ್ಲಂಘನೆಯಾಗಿಲ್ಲ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಿದ 893 ಇ20 ಪೆಟ್ರೋಲ್ ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಎಲ್ಲ 893 ಮಾದರಿಗಳಲ್ಲೂ ಎಥನಾಲ್ ಪ್ರಮಾಣ ಶೇ.19ರಿಂದ 21ರ ನಡುವೆ ದಾಖಲಾಗಿದೆ. ಕರ್ನಾಟಕದ 56 ಮಾದರಿಗಳ ಪರೀಕ್ಷೆಯಲ್ಲೂ ನಿಗದಿತ ಮಾನದಂಡ ಪಾಲನೆಯಾಗಿದೆ. ಕರ್ನಾಟಕದ ಮಾದರಿಗಳಲ್ಲಿ ಎಥನಾಲ್ ಪ್ರಮಾಣ ಶೇ.19ರಿಂದ 20ರ ನಡುವೆ ಪತ್ತೆಯಾಗಿದ್ದು, ಸರಾಸರಿ ಶೇ.19.30 ದಾಖಲಾಗಿದೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.
ಅಕ್ಟೋಬರ್ನಲ್ಲಿ ಕರ್ನಾಟಕದಲ್ಲಿ ನಡೆದ ಮಾದರಿ ಸಂಗ್ರಹ ಮತ್ತು ಪರೀಕ್ಷಾ ವಿಧಾನದ ಬಗ್ಗೆ ತೈಲ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ. ತೈಲ ಕಂಪನಿ ಪ್ರತಿನಿಧಿಗಳ ಭಾಗವಹಿಸುವಿಕೆ ಇಲ್ಲದೆ ಮಾದರಿ ಸಂಗ್ರಹಿಸಲಾಗಿದೆ ಎಂದು ಆರೋಪವಿದೆ. ಪರೀಕ್ಷಾ ವರದಿಗಳಲ್ಲಿ ಅಗತ್ಯ ತಾಂತ್ರಿಕ ವಿವರಗಳಿಲ್ಲ, ಮರುಪರೀಕ್ಷೆಗೆ ಅವಕಾಶ ನೀಡಿಲ್ಲ ಎಂದು ಕಂಪನಿಗಳ ಆಕ್ಷೇಪಿಸಿವೆ.
ಎಥೆನಾಲ್ ಪ್ರಮಾಣ ಪರೀಕ್ಷೆ ಐಎಸ್ 17021 ಮಾನದಂಡದ ಪ್ರಕಾರ ನಡೆಯಬೇಕಿತ್ತು. ಇ20 ಇಂಧನದಿಂದ ವಾಹನಗಳ ಮೈಲೇಜ್ ಶೇ.10ರಷ್ಟು ಕಡಿಮೆಯಾಗುತ್ತದೆ ಎಂಬ ಅಂದಾಜಿಗೆ ವೈಜ್ಞಾನಿಕ ಆಧಾರವಿಲ್ಲ. ಇ20 ಇಂಧನದಿಂದ ವಿದೇಶಿ ವಿನಿಮಯದಲ್ಲಿ 1.97 ಲಕ್ಷ ಕೋಟಿ ರೂ. ಉಳಿತಾಯ, 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿತವಾಗಿದೆ. ಎಥೆನಾಲ್ ಮಿಶ್ರಣದಿಂದ 952 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಡಿತವಾಗಿದೆ. ರೈತರಿಗೆ 1.66 ಲಕ್ಷ ಕೋಟಿ ರೂ. ವರ್ಗಾವಣೆಯಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ತೈಲ ಕಂಪನಿಗಳಿಂದ ಸ್ಪಷ್ಟನೆ ನೀಡಿವೆ. ಆ ಮೂಲಕ ರಾಜ್ಯ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿವೆ.
