ಹೊಸ ಬಗೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಓ ಮನಸೇ ಎಂಬ ಹೊಸ ಕಥೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗಾಗೆ ಶಿಕ್ಷಣವೆಂದರೆ ಜೀವ. ಪುಸ್ತಕ ಓದುವುದು ಅವಳ ಹವ್ಯಾಸ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ವಾತಂತ್ರ್ಯದ ಹಾದಿಯೆಂದು ನಂಬಿರೋಳು. ರಾಗಾಳ ಬದುಕಿನ ಅತಿದೊಡ್ಡ ಸ್ಫೂರ್ತಿ ಅಂದ್ರೆ ಪ್ರೊಫೆಸರ್ ಕಲ್ಯಾಣಿ. ಆದರೆ ಮುಗಿಲು ಮುಟ್ಟೋ ಕನಸನ್ನು ಹೊಂದಿರೋ ರಾಗಾಳಿಗೆ ಸ್ವಂತ ಅಪ್ಪನೇ ತಡೆಗೋಡೆ.
ಶ್ರೀಮಂತ ಕುಟುಂಬದಲ್ಲಿ ಬೆಳೆದಿರೋ ಕಥಾನಾಯಕ ರಿಷಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ತನ್ನೆಲ್ಲಾ ಭಾವನೆಗಳನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಂಡು ಬದುಕುತ್ತಿರೋ ವ್ಯಕ್ತಿ. ಪ್ರೀತಿ ಎಂಬ ಪದದ ಮೇಲೆ ರಿಷಿಗೆ ನಂಬಿಕೆಯಿಲ್ಲ. ತಾಯಿ ಕಲ್ಯಾಣಿಯ ಪ್ರೀತಿ, ಮಮತೆಯಿಂದ ದೂರವಾಗಿರುವ ರಿಷಿಗೆ ಅವಳ ಬಗ್ಗೆ ತೀವ್ರ ಅಸಹನೆ.
ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗಾ-ರಿಷಿಯ ಬದುಕಿನ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ದೂರವಾಗುತ್ತಾ? ತಂದೆಯ ಮಾತನ್ನು ಮೀರಿ ತನ್ನ ಕನಸನ್ನು ರಾಗಾ ಹೇಗೆ ನನಸು ಮಾಡುತ್ತಾಳೆ ? ವಿರುದ್ಧ ದಿಕ್ಕಿನ ವ್ಯಕ್ತಿತ್ವ ಹೊಂದಿರುವ ರಾಗಾ-ರಿಷಿ ಒಂದಾಗಲು ಸಾಧ್ಯನಾ ? ಎಂಬುದೇ ಮುಖ್ಯ ಕಥಾ ಹಂದರ.
ಅತ್ಯದ್ಭುತ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ನಾಯಕ ರಿಷಿ ಪಾತ್ರದಲ್ಲಿ ನಟ ದರ್ಶಕ್ ಗೌಡ ಹಾಗು ನಾಯಕಿ ರಾಗಾ ಪಾತ್ರದಲ್ಲಿ ನಟಿ ಮಧುಮಿತಾ ಗೌಡ ನಟಿಸುತ್ತಿದ್ದಾರೆ. ಜೊತೆಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ, ನಿಸರ್ಗ ಅಣ್ಣಪ್ಪ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಎಂಬ ಸಂಸ್ಥೆಯಡಿ ನಿರ್ಮಾಪಕ ಗಣಪತಿ ಭಟ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಬಿ. ಮಧುಸೂದನ್ ಅವರು ನಿರ್ದೇಶಿಸುತ್ತಿದ್ದಾರೆ.

