– ತುಟ್ಟಿ ಭತ್ಯೆ ದರ ಮೂಲ ವೇತನದ 15.75 ರಿಂದ 18% ಗೆ ಏರಿಕೆ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ತುಟ್ಟಿ ಭತ್ಯೆ (Dearness Allowance) ದರವನ್ನು ಮೂಲ ವೇತನದ 15.75 ರಿಂದ 18% ಗೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 2026ರ ಜುಲೈ 1 ರಿಂದಲೇ ತುಟ್ಟಿ ಭತ್ಯೆ ಹೆಚ್ಚಳ ಅನ್ವಯವಾಗಲಿದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಜುಲೈ 1 ರಿಂದ ಜಾರಿಗೆ ಬರುವಂತೆ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ನೌಕರರು ರಾಜ್ಯ ಪಿಂಚಣಿದಾರರಾಗುವುದರಿಂದ ಅವರಿಗೂ ಸಹ ಈ ಆದೇಶ ಅನ್ವಯಿಸುತ್ತದೆ. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿವಿಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೂ ಇದು ಅನ್ವಯಿಸಲಿದೆ.
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್ಜಿಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
