ಉಡುಪಿ: ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠಾಧೀಶರು (Balekudru Mutt Seer) ನಾಪತ್ತೆಯಾಗಿದ್ದಾರೆ. ಮಠದಲ್ಲಿ ಪೂಜಿಸುತ್ತಿದ್ದ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.
ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆ ಆಗಿದ್ದಾರೆ. ಮಠದ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪ ಸ್ವಾಮೀಜಿ ಮತ್ತು ಸಿಬ್ಬಂದಿ ಮೇಲೆ ಕೇಳಿಬಂದಿದೆ. ಸ್ವಾಮೀಜಿ ವಿರುದ್ಧ ಶಿಷ್ಯ ವರ್ಗ ಗಂಭೀರ ಆರೋಪ ಮಾಡಿದೆ.
ತನ್ನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಬೀಗ ಜಡಿದು ಸ್ವಾಮೀಜಿ ಪರಾರಿಯಾಗಿದ್ದಾರೆ. ಸಾವಿರಾರು ವರ್ಷಗಳ ಪರಂಪರೆ ಇದ್ದ ವಿಗ್ರಹಗಳು ನಾಪತ್ತೆಯಾಗಿವೆ. ನರಸಿಂಹದೇವರು ಮತ್ತು ಗಣಪತಿ ಮಹಿಷ ಮರ್ದಿನಿ ಸೇರಿದಂತೆ ಆರು ವಿಗ್ರಹಗಳು ನಾಪತ್ತೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ, ಹಳೆಯ ಮೂರ್ತಿ ವಿಸರ್ಜನೆ ಮಾಡಿ ಹೊಸ ಮೂರ್ತಿ ಪ್ರತಿಷ್ಠೆಯಪಿಸಿದ್ದಾಗಿ ಹೇಳಿದ್ದರು. ಆದರೆ, ಈಗ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಗಾಳಿ, ನೀರಿನಲ್ಲಿ ಬಸ್ ಓಡಿಸೋಕೆ ಆಗಲ್ಲ: ಪ್ರಿಯಾಂಕ್ ಖರ್ಗೆ
ಮಠದ ಶಿಷ್ಯ ಜಗದೀಶ್ ಐತಾಳ್ ಎಂಬವರ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಐತಾಳ್ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆಯಾಗಿದ್ದ ಫೋಟೋಗಳನ್ನು ವೆಬ್ಸೈಟ್ ಒಂದರಲ್ಲಿ ಪ್ರದರ್ಶಿಸಲಾಗಿತ್ತು. ಮಾರಾಟ ನಡೆಸುವ ಉದ್ದೇಶದಿಂದ ಪ್ರದರ್ಶಿಸಲಾಗಿತ್ತು. ಈ ಮಾಹಿತಿ ತಿಳಿದು ದೂರು ನೀಡಲಾಗಿತ್ತು.
ಸಾಮಾಜಿಕ ಜಾಲತಾಣದ ವಿಚಾರ ತನಿಖೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಸ್ವಾಮೀಜಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ವಾಮೀಜಿ ಪರಾರಿಯಾಗಿದ್ದಾರೆ.
ಭಾಗವತ ಸಂಪ್ರದಾಯಕ್ಕೆ ಸೇರಿದ ಶತಮಾನಗಳ ಇತಿಹಾಸ ಇರುವ ಮಠ ಇದಾಗಿದೆ. ಅನೇಕ ವರ್ಷಗಳಿಂದ ಶಿಷ್ಯ ಸಮುದಾಯದ ಜೊತೆ ಸಂಘರ್ಷ ನಡೆದಿದೆ ಎನ್ನಲಾಗಿದೆ. ಕಳೆದ ಒಂದೆರಡು ತಿಂಗಳಲ್ಲಿ ಶಿಷ್ಯರೊಂದಿಗೆ ಸಂಘರ್ಷ ತಾರಕಕೇರಿತ್ತು. ಶೃಂಗೇರಿ ಶ್ರೀಗಳನ್ನು ಬಾಳೆಕುದ್ರು ಸ್ವಾಮೀಜಿ ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕೆ ಸಂಘರ್ಷ ಉಂಟಾಗಿತ್ತು. ಇದೀಗ ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ
ಬೆಂಗಳೂರಿನ ಪ್ರಸಿದ್ಧಿ idols ಗೆ ವಿಗ್ರಹಗಳನ್ನು ಮಾರಾಟ ಮಾಡಿದ್ದರು. ನಾಗೇಂದ್ರ ಪ್ರಸಾದ್ ಈ ಕಂಪನಿಯ ಮಾಲೀಕರಾಗಿದ್ದಾರೆ. ನಾಗೇಂದ್ರಪ್ರಸಾದ್ನನ್ನು ವಶಕ್ಕೆ ಪಡೆದಾಗ ಮಾಹಿತಿ ಬಯಲಾಗಿದೆ. ಅನಿಲ್ ಕುಮಾರ್, ಜಯಲಕ್ಷ್ಮಿ, ಶ್ರೇಯಸ್ ಇತರ ಆರೋಪಿಗಳಾಗಿದ್ದಾರೆ.
