ಚಂಡೀಗಢ: ಹರಿಯಾಣದ (Haryana) ಪಂಚಕುಲದ ಸರ್ಕಾರಿ ಶಾಲೆಯಲ್ಲಿ (Panchkula School) 6 ವರ್ಷದ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ವರ್ಷದ ಬಾಲಕನನ್ನು ಬಾಲಾಪರಾಧಿ ಸುಧಾರಣಾ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ.
ಬಾಲಕನನ್ನು ಬಿಡುಗಡೆ ಮಾಡುವಾಗ ಬಾಲ ನ್ಯಾಯ ಮಂಡಳಿಯು (Juvenile Justice Board) ಆತನ ಗುರುತನ್ನು ಬಹಿರಂಗಪಡಿಸುವ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಇತರ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕುವಂತೆ ನಿರ್ದೇಶನ ನೀಡಿದೆ. ಈ ಆದೇಶವನ್ನು ಪಾಲಿಸಿದ ಬಗ್ಗೆ ನ.27ರೊಳಗೆ ವರದಿಯನ್ನು ಸಲ್ಲಿಸುವಂತೆ ತನಿಖಾಧಿಕಾರಿಗೆ ಮಂಡಳಿ ಸೂಚಿಸಿದೆ. ಇದನ್ನೂ ಓದಿ: ಭೀಕರ ಹಲ್ಲೆಯಿಂದ ಬದುಕುಳಿದ ಬಾಲಕಿಗೆ ಹೂಮಳೆಯ ಸ್ವಾಗತ – ಕಣ್ಕಟ್ಟಿದ ಹೃದಯಸ್ಪರ್ಶಿ ವಿಡಿಯೋ!
ಬಾಲಕನ ತಂದೆ ‘ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015’ರ ಸೆಕ್ಷನ್ 74ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಹರಿದಾಡುತ್ತಿರುವ, ಮಗುವಿನ ಗುರುತನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಹಿರಂಗಪಡಿಸುವ ಎಲ್ಲಾ ವೀಡಿಯೊಗಳು, ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಅವರು ಕೋರಿದ್ದರು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಅಥವಾ ಪ್ರಕಟಿಸದಂತೆ ತಡೆಯಲು, ಶಾಲೆಯ ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ, ಬಾಲಕನ ಪರ ವಕೀಲರು, ಆತನಿಗೆ ಈ ಹಿಂದೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ. ಸುಧಾರಣಾ ಕೇಂದ್ರದಲ್ಲಿ (observation home) ದೀರ್ಘಕಾಲ ಇರಿಸುವುದು ಆತನ ಶಿಕ್ಷಣ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವಾದಿಸಿದರು. ಬಾಲಕನ ಪೋಷಕರು, ತಾವು ಮಗುವಿಗೆ ಸೂಕ್ತ ಸಮಾಲೋಚನೆ (counseling), ನಡವಳಿಕೆಯಲ್ಲಿ ಸುಧಾರಣೆ ಮತ್ತು ಪುನರ್ವಸತಿ ಕಲ್ಪಿಸುವುದಾಗಿ ಮಂಡಳಿಗೆ ಭರವಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಅ.28ರಂದು ‘ಸಂಸ್ಕೃತಿ ಮಾಡೆಲ್ ಸ್ಕೂಲ್’ನಲ್ಲಿ 8 ವರ್ಷದ ಬಾಲಕ 6 ವರ್ಷದ ಬಾಲಕಿಯನ್ನು ತರಗತಿಯೊಳಗೆ ಎಳೆದುಕೊಂಡು ಹೋಗಿ, ಆಕೆಯ ತಲೆಯನ್ನು ಡೆಸ್ಕ್ಗೆ ಗುದ್ದಿಸಿದ್ದ. ನಂತರ ಆಕೆಯನ್ನು ನೆಲದ ಮೇಲೆ ಎಸೆದು ಒದ್ದು, ಕಲ್ಲುಗಳು ಮತ್ತು ಹೂವಿನ ಕುಂಡದಿಂದ ಪದೇ ಪದೇ ಹಲ್ಲೆ ನಡೆಸಿದ್ದ. ಇದರಿಂದ ಬಾಲಕಿ ಪ್ರಜ್ಞೆ ತಪ್ಪಿ, ರಕ್ತದ ಮಡುವಿನಲ್ಲಿ ಬಿದ್ದಿದ್ದಳು.
ಬಾಲಕಿಯ ಪೋಷಕರು ಅವಳನ್ನು ಕರೆದೊಯ್ಯಲು ಶಾಲೆಗೆ ಬಂದಾಗ, ಬಾಲಕ ಅವರನ್ನು ಬಾಲಕಿಯಿದ್ದಲ್ಲಿಗೆ ಕರೆದೊಯ್ದು, “ನಿಮ್ಮ ಮಗಳು ಇಲ್ಲಿದ್ದಾಳೆ” ಎಂದು ಹೇಳಿದ್ದ. ತಕ್ಷಣ ಬಾಲಕಿಯನ್ನು ಸೆಕ್ಟರ್ 6ರಲ್ಲಿರುವ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಾಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಚಂಡೀಗಢದ ಪಿಜಿಐ (PGI) ಗೆ ದಾಖಲಿಸಲಾಗಿತ್ತು. ಬುಧವಾರದಂದು (ನ.5) ಬಾಲಕಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಬಾಲಕಿಯ ಚಿಕ್ಕಪ್ಪ ಈ ಬಗ್ಗೆ ಮಾತನಾಡಿ, ಬಾಲಕನಿಗೆ ಪಬ್ಜಿ (PUBG) ಆಡುವ ಅಭ್ಯಾಸವಿತ್ತು. ಅಲ್ಲದೇ ಕೆಲವು ಆಕ್ರಮಣಕಾರಿ ಆಟಗಳನ್ನು ಆಡುತ್ತಿದ್ದ. ಅವನ ತಂದೆ ಕೂಡ, ಅವನು ಪಬ್ಜಿ ಮತ್ತು ಅಂತಹ ಇತರ ಆಟಗಳನ್ನು ಆಡುತ್ತಿದ್ದನೆಂದು ದೃಢಪಡಿಸಿದ್ದಾರೆ. ಇಂತಹ ಆಟಗಳೇ ಅವನ ಈ ವರ್ತನೆಗೆ ಕಾರಣವಾಗಿವೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: 6ರ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – PUBG ಆಟದ ಪ್ರಭಾವವೇ ಕಾರಣವಾಯ್ತಾ?
