– ಶೇ.25ರಷ್ಟು ಅಗ್ನಿವೀರರಿಗೆ ಖಾಯಂ ಸೈನಿಕರಾಗಿ ಮುಂದುವರಿಯಲು ಅವಕಾಶ
ನವದೆಹಲಿ: ಅಗ್ನಿವೀರರಿಗೆ (Agniveers) ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ‘ಅಗ್ನಿಪಥ್'(Agnipath Scheme) ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರ ಸೇವಾ ಅವಧಿಯನ್ನು ಎರಡು ವರ್ಷಗಳಷ್ಟು ವಿಸ್ತರಿಸುವುದಾಗಿ ಕೇಂದ್ರ ಸಚಿವ ಸಂಪುಟ ಬುಧವಾರ ಘೋಷಿಸಿದೆ.
ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು, ನಾಲ್ಕು ವರ್ಷಗಳ ನಂತರ ಸೇವೆಯಿಂದ ನಿರ್ಗಮಿಸಲು ನಿರ್ಧರಿಸಲಾಗಿದ್ದ ಅಗ್ನಿವೀರರ ಮೊದಲ ತಂಡದ ಪೈಕಿ ಶೇ.75 ರಷ್ಟು ಮಂದಿಗೆ, ಸಶಸ್ತ್ರ ಪಡೆಗಳಲ್ಲಿ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುವುದು ಎಂದು ತಿಳಿಸಿದರು. ಇವರ ಸೇರ್ಪಡೆಯು ನಿರ್ದಿಷ್ಟ ಆಯ್ಕೆ ಮಾನದಂಡಗಳಿಗೆ ಒಳಪಟ್ಟಿರುತ್ತದೆ. ಇದನ್ನೂ ಓದಿ: ಗುವಾಹಟಿ ಹೋಟೆಲ್ ಫೈರಿಂಗ್ ಪ್ರಕರಣ – ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ಗೆ ಬಲಿ
ಇಂದು ಭಾರತೀಯ ರಕ್ಷಣಾ ಪಡೆಗಳು ಮತ್ತು ನಮ್ಮ ಅಗ್ನಿವೀರರಿಗೆ ಅತ್ಯಂತ ಮಹತ್ವದ ದಿನವಾಗಿದೆ. ಎಲ್ಲಾ ಅಗ್ನಿವೀರರನ್ನು ಭಾರತೀಯ ಸೇನೆಯಲ್ಲಿ ಸೇರಿಸಿಕೊಳ್ಳಲು ಕೇಂದ್ರ ಸಚಿವ ಸಂಪುಟವು ದಾರಿ ಮಾಡಿಕೊಟ್ಟಿದೆ. ನಿಮಗೆ ತಿಳಿದಿರುವಂತೆ, ‘ಅಗ್ನಿಪಥ’ ಯೋಜನೆಯನ್ನು 2022ರ ಜೂನ್ 14 ರಂದು ಜಾರಿಗೆ ತರಲಾಯಿತು. ಆ ಸಮಯದಲ್ಲಿ, ಅಗ್ನಿವೀರರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲಾಗುವುದು. ಈ ಯೋಜನೆಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿತ್ತು. ಅಗ್ನಿವೀರರ ಮೊದಲ ತಂಡವು ಈಗ ತಮ್ಮ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಹಂತದಲ್ಲಿದೆ. ಈ ನಾಲ್ಕು ವರ್ಷಗಳಲ್ಲಿ ನಡೆಸಲಾದ ಕಾರ್ಯಕ್ಷಮತೆ ಮೌಲ್ಯಮಾಪನಗಳ ಆಧಾರದ ಮೇಲೆ, ಅವರ ಕಾರ್ಯಕ್ಷಮತೆಯ ಬಗ್ಗೆ ನಮಗೆ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆಗಳು ಲಭ್ಯವಾಗಿವೆ. ನಿಮಗೆ ತಿಳಿದಿರುವಂತೆ, ಅರ್ಹತೆಯ ಆಧಾರದ ಮೇಲೆ ಅಗ್ನಿವೀರರಲ್ಲಿ ಶೇ.25 ರಷ್ಟು ಮಂದಿಯನ್ನು ನಿಯಮಿತ ಸೇನಾ ಪಡೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಸಿಡಿಎಸ್ (CDS) ತಿಳಿಸಿದ್ದಾರೆ.
ಹಿಂದಿನ ವ್ಯವಸ್ಥೆಯ ಪ್ರಕಾರ, ಶೇ.75ರಷ್ಟು ಅಗ್ನಿವೀರರು ಶಿಸ್ತುಬದ್ಧ ಮತ್ತು ಪ್ರೇರಿತ ಯುವಕರಾಗಿ ಸಮಾಜಕ್ಕೆ ಮರಳುವ ಅವಕಾಶವಿತ್ತು. ಆದರೆ, ಈ ಪರಿಷ್ಕೃತ ಯೋಜನೆ ಅಡಿಯಲ್ಲಿ, ಉಳಿದ ಶೇ.75ರಷ್ಟು ಅಗ್ನಿವೀರರಿಗೆ ಈಗ ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾ ಅವಧಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯುಪಿ ಜನತೆಗೆ ಯೋಗಿ ಸರ್ಕಾರದ ಬಂಪರ್ ಗಿಫ್ಟ್ – ಹೋಳಿ, ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ
ಈ ಎರಡು ವರ್ಷಗಳ ಅವಧಿ ಪೂರ್ಣಗೊಂಡ ನಂತರ, ವಸ್ತುನಿಷ್ಠ ಆಯ್ಕೆ ಮಾನದಂಡಗಳಿಗೆ ಒಳಪಟ್ಟು, ಆಸಕ್ತಿ ಹೊಂದಿರುವ ಎಲ್ಲರನ್ನೂ ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಈ ಯೋಜನೆಯ ನಾಲ್ಕು ಪ್ರಮುಖ ಅಂಶಗಳು ಇವು. ಎರಡು ವರ್ಷಗಳ ನಂತರ, ಅವರ ಇಚ್ಛೆ ಮತ್ತು ವಸ್ತುನಿಷ್ಠ ಆಯ್ಕೆ ಪ್ರಕ್ರಿಯೆಯನ್ನು ಆಧರಿಸಿ, ಅವರನ್ನು ಸಶಸ್ತ್ರ ಪಡೆಗಳಲ್ಲಿ ಶಾಶ್ವತವಾಗಿ ಸೇರಿಸಿಕೊಳ್ಳುವ ಆಯ್ಕೆಯನ್ನು ಅವರಿಗೆ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
