ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಹಾಗೂ ಕನ್ನಡದ ರಾಕಿಂಗ್ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಮೂರನೇ ಭಾಗದ ಬಗ್ಗೆ ಈಗ ಚರ್ಚೆ ಶುರುವಾಗಿದೆ.
ಸದ್ಯ ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಆದರೆ, ಮೊದಲ ಎರಡು ಭಾಗಗಳಿಗೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಮೂಲ ಯೋಜನೆಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ.
ಲಂಡನ್ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, ಆರಂಭದಲ್ಲಿ ‘ರಾಮಾಯಣ’ವನ್ನು ಮೂರು ಭಾಗಗಳ ಚಿತ್ರ ಸರಣಿಯಾಗಿ ನಿರ್ಮಿಸಲು ಯೋಜಿಸಲಾಗಿತ್ತು. ಬಳಿಕ ಕಥೆಯನ್ನು ಎರಡು ಭಾಗಗಳಲ್ಲಿ ಹೇಳಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಮೂರನೇ ಭಾಗ ಮಾಡೋದೆ ಇಲ್ಲ ಅಂತ ನಿರ್ಮಾಪಕರು ಹೇಳಿಲ್ಲ.
ನಮಿತ್ ಮಲ್ಹೋತ್ರಾ ಹೇಳಿದ್ದೇನು?
ಸಂದರ್ಶನದಲ್ಲಿ ಮಾತನಾಡಿದ ನಮಿತ್, ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಹೀಗಾಗಿ ಕಥೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾವು ಆರಂಭದಲ್ಲಿ ಇದನ್ನು ಮೂರು ಭಾಗಗಳಲ್ಲಿ ನಿರ್ಮಿಸಲು ಯೋಜಿಸಿದ್ದೆವು. ಬಳಿಕ ಎರಡು ಭಾಗಗಳಲ್ಲಿ ಮಾಡಲು ನಿರ್ಧರಿಸಿದೆವು. ಸದ್ಯ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಯಾವುದೇ ಸ್ಪಾಯ್ಲರ್ಗಳನ್ನು ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮೊದಲ ಎರಡು ಚಿತ್ರಗಳನ್ನು ಪ್ರೇಕ್ಷಕರು ವೀಕ್ಷಿಸಿದ ಬಳಿಕ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಂಡ ಗಮನಿಸಲಿದೆ. ಆನಂತರ ಕಥೆಗೆ ಏನನ್ನಾದರೂ ಸೇರಿಸಬೇಕೇ ಅಥವಾ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಮಿತ್ ಹೇಳಿದ್ದಾರೆ.
ರಣಬೀರ್ ಕಪೂರ್ ಹೇಳಿಕೆ ವೈರಲ್
ಇತ್ತೀಚೆಗೆ ನಟ ರಣಬೀರ್ ಕಪೂರ್ ಕೂಡ ‘ರಾಮಾಯಣ’ ಚಿತ್ರದ ಬಗ್ಗೆ ಮಾತನಾಡಿದ್ದರು. ಎರಡನೇ ಭಾಗದ ಚಿತ್ರೀಕರಣದ ಸುಮಾರು ಶೇ.50ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದರು. ಇದೇ ವೇಳೆ ಮೂರನೇ ಭಾಗದ ಸಾಧ್ಯತೆಯ ಬಗ್ಗೆ ಮಾತನಾಡುವಾಗ, ಭಾಗ 3 ಸಂಭವಿಸಿದರೆ ಎಂಬ ಮಾತನ್ನು ಬಳಸಿದ್ದರು. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
