– ತೆರವು ಖಂಡಿಸಿ ಬಿಜೆಪಿ, ಜೆಡಿಎಸ್ನಿಂದ ಪ್ರತಿಭಟನೆ
ಶಿವಮೊಗ್ಗ: ಸೊರಬ (Soraba) ತಾಲೂಕಿನ ತ್ಯಾವರೆತೆಪ್ಪ- ವಡ್ಡಿಗೇರಿ ಗ್ರಾಮದಲ್ಲಿ 2 ಎಕರೆಯಲ್ಲಿ ಬೆಳೆದಿದ್ದ 15 ವರ್ಷದ ಅಡಿಕೆ ಮರಗಳನ್ನು (Areca Plantation) ತೆರವು ಮಾಡಿದ್ದ ಸ್ಥಳಕ್ಕೆ ಬಿಜೆಪಿ (BJP) ನಾಯಕರು ಇಂದು (ನ.3) ಭೇಟಿ ನೀಡಿದ್ದರು. ಈ ವೇಳೆ ಅಡಿಕೆ ಮರಗಳನ್ನು ಕಳೆದುಕೊಂಡ ರೈತ (Farmer) ಹಾಗೂ ಕಾಂಗ್ರೆಸ್ (Congress) ಮುಖಂಡ ದೇವರಾಜ್, ನಮ್ಮ ಪಕ್ಷದ ಮುಖಂಡರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಲಿಲ್ಲ. ನನ್ನ ನೋವನ್ನು ಕೇಳಲು ಯಾರು ಬರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಶಿವಮೊಗ್ಗ (Shivamogga) ಸಂಸದ ಬಿ.ವೈ.ರಾಘವೇಂದ್ರ (B.Y Raghavendra), ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಇನ್ನಿತರ ಮುಖಂಡರು ರೈತನ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ರೈತರಿಗೆ ಯಾವುದೇ ನೋಟಿಸ್ ನೀಡದೇ, ಅಡಿಕೆ ಮರಗಳನ್ನು ಕಟಾವು ಮಾಡಿದ್ದಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೇ ವೇಳೆ ಸಂಸದ ರಾಘವೇಂದ್ರ ಅವರು ರೈತ ಕುಟುಂಬಕ್ಕೆ ವೈಯಕ್ತಿಕ ನೆರವು ನೀಡಿದ್ದಾರೆ. ಅ.29 ರಂದು 2 ಎಕರೆಯಷ್ಟು ಅಡಿಕೆ ತೋಟವನ್ನು ತಾಲೂಕು ಆಡಳಿತ ತೆರವು ಮಾಡಿತ್ತು. ಇದನ್ನೂ ಓದಿ: ನ.7 ರಿಂದ 11ರವರೆಗೆ ಬಿಂಡಿಗ ದೇವೀರಮ್ಮ ಜಾತ್ರಾ ಮಹೋತ್ಸವ – ರಕ್ಷಣಾ ತಂಡದಿಂದ ಮಾಕ್ ಡ್ರಿಲ್
ಬಿಜೆಪಿ – ಜೆಡಿಎಸ್ನಿಂದ ಪ್ರತಿಭಟನೆ
ರೈತ ದೇವರಾಜ್ ಅವರ ಅಡಿಕೆ ತೋಟ ತೆರವುಗೊಳಿಸಿದ ಅಧಿಕಾರಿಗಳ ಕ್ರಮ ಖಂಡಿಸಿ ತಾಲೂಕು ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸಿದೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು, ಅಡಿಕೆ ತೋಟವನ್ನು ಅಧಿಕಾರಿಗಳು ತೆರವುಗೊಳಿಸಿರುವ ಕ್ರಮ ಖಂಡನೀಯ. ಸರ್ಕಾರಿ ಭೂಮಿಯ ಕುರಿತಾದ ಸಂಪೂರ್ಣ ಮಾಹಿತಿ ರೈತರಿಗೆ ಇರುವುದಿಲ್ಲ. ತಲತಲಾಂತರಗಳಿಂದ ಪೂರ್ವಜರು ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನು ತಮ್ಮದೆಂದು ಭಾವಿಸಿ ರೈತರು ಕೃಷಿ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ, ನಿಯಮಾನುಸಾರ ನೋಟಿಸ್ ಜಾರಿಗೊಳಿಸಿದರೆ ರೈತರಿಗೆ ಕಾನೂನು ಹೋರಾಟ ನಡೆಸಲು ಅವಕಾಶವಿರುತ್ತದೆ. ಆದರೆ, ತೆವರತೆಪ್ಪ ಗ್ರಾಮದ ಪ್ರಕರಣದಲ್ಲಿ ಹತ್ತಾರು ವರ್ಷಗಳಿಂದ ಬೆಳೆದು ನಿಂತಿದ್ದ ಅಡಿಕೆ ತೋಟವನ್ನು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರಿಗೆ ರೈತರ ಬದುಕಿನ ಬಗ್ಗೆ ಕಾಳಜಿ ಇಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ಆಡಳಿತದಿಂದಾಗಿ ರೈತರು ಇಂತಹ ಸಂಕಷ್ಟ ಎದುರಿಸುವಂತಾಗಿದೆ. ರೈತಪರ ಕಾಳಜಿ ಇಲ್ಲದ ಜನಪ್ರತಿನಿಧಿಗಳಿಗೆ ಜನಸೇವೆ ಮಾಡುವ ನೈತಿಕ ಅರ್ಹತೆ ಇಲ್ಲ. 2028ರ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿದ ಹರತಾಳು ಹಾಲಪ್ಪ ಅವರು, ಅಡಿಕೆ ತೋಟ ತೆರವುಗೊಳಿಸಲು ನೀಡಿರುವ ಆದೇಶದ ಪ್ರತಿಯನ್ನು ತೋರಿಸುವಂತೆ ಪಟ್ಟು ಹಿಡಿದರು. ರೈತನಿಗೆ ನೋಟಿಸ್ ನೀಡದೆ ತೋಟ ತೆರವುಗೊಳಿಸಿದ್ದು ಏಕೆ? ಸರ್ವೆ ನಡೆಸಿದ ದಿನಾಂಕದ ದಾಖಲೆ ಎಲ್ಲಿದೆ? ಸರ್ವೆಯರ್ ಯಾವ ಅಧಿಕಾರದ ಮೇರೆಗೆ ತೆರವು ಕಾರ್ಯಕ್ಕೆ ಮುಂದಾದರು? ಪೊಲೀಸರಿಗೂ ತೆರವು ಕಾರ್ಯಾಚರಣೆಯ ಬಗ್ಗೆ ಮುಂಚಿತ ಮಾಹಿತಿ ನೀಡಿಲ್ಲ. ಒಂದು ವೇಳೆ ಸ್ಥಳದಲ್ಲಿ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಹೊರುತ್ತಿದ್ದರು? ಲೋಕಾಯುಕ್ತದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ತೆರವು ಕಾರ್ಯಾಚರಣೆ ನಡೆಸಿದ್ದು ಹೇಗೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದನ್ನೂ ಓದಿ: ಕಬ್ಬಿಗೆ 5,500 ದರ ನಿಗದಿಗೆ ಆಗ್ರಹ: ಬಾಗಲಕೋಟೆಯ ಗದ್ದನಕೇರಿ ಕ್ರಾಸ್ನಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
