ಹೈದರಾಬಾದ್: ಕೃಷಿ ಭೂಮಿ ವಿವಾದದ (Land Dispute) ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯನ್ನು ಪತಿಯ ಅಣ್ಣಂದಿರು ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ (Telangana) ಮಹಬೂಬ್ನಗರ (Mahabubnagar) ಜಿಲ್ಲೆಯ ಕೊಯಿಲ್ಕೊಂಡ ಮಂಡಲದ ಚಿಂತಲ್ ತಾಂಡಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಕತ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಚಿಂತಲ್ ತಾಂಡಾದ ಕತ್ರಾವತ್ ಬಲರಾಮ್ ಎಂಬುವವರನ್ನು ಸುನೀತಾ ವಿವಾಹವಾಗಿದ್ದರು. ದಂಪತಿಗೆ ರಿಷಿಕಾ ಮತ್ತು ಶೈಲಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಲರಾಮ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ನಲ್ಲೇ ವ್ಯವಸ್ಥಿತ ಹುನ್ನಾರ: ಹೆಚ್ಡಿಕೆ
ಸುಮಾರು ಒಂದು ವರ್ಷದ ಹಿಂದೆ ಬಲರಾಮ್ ಅವರ ಅಣ್ಣಂದಿರಾದ ಮಾನ್ಯ ನಾಯಕ್ ಮತ್ತು ಪಾಂಡು ನಾಯಕ್ ಆತನನ್ನು ಹೈದರಾಬಾದ್ಗೆ ಕರೆದುಕೊಂಡು ಹೋಗಿದ್ದರು. ಈ ನಡುವೆ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನದ ಬಳಿಕ ಬಲರಾಮ್ಗೆ ಸೇರಿದ ಸುಮಾರು ಒಂದೂವರೆ ಎಕರೆ ಕೃಷಿ ಭೂಮಿಯನ್ನು ಸುನೀತಾ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಆಕೆಯ ಭವಿಷ್ಯದ ಭದ್ರತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಬೇಕಾದ್ರೆ ಪಕ್ಷ ಬಿಟ್ಟು ಹೋಗಲಿ: ರಾಜಣ್ಣ, ರಾಜೇಂದ್ರ ವಿರುದ್ಧ ಬಾಲಕೃಷ್ಣ ಕೆಂಡಾಮಂಡಲ
ಇದಾದ ಬಳಿಕ ಸುನೀತಾ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. ಇತ್ತೀಚೆಗೆ ಚಿಂತಲ್ ತಾಂಡಾಕ್ಕೆ ಮರಳಿದ್ದ ಅವರು ಕೃಷಿ ಜಮೀನಿನ ಬಳಿ ಹೋಗಿದ್ದರು. ಈ ವೇಳೆ ಮಾನ್ಯ ನಾಯಕ್ ಸುನೀತಾರನ್ನು ತಡೆದು ತನ್ನ ಮನೆಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಕಲಿ ಔಷಧಿ ದಂಧೆ ಪ್ರಕರಣ; ಆರೋಪಿ ವೀರೇಶ್ ಖಾತೆಯಲ್ಲಿದ್ದ 9 ಲಕ್ಷ ಫ್ರೀಜ್ ಮಾಡಿದ ಇಡಿ
ಅಲ್ಲಿ ಪಾಂಡು ನಾಯಕ್, ಆತನ ಪತ್ನಿ ಪಾರ್ವತಿ ಹಾಗೂ ಮತ್ತೊಬ್ಬ ಸಂಬಂಧಿ ಮಾಣಿಕ್ಯ ನಾಯಕ್ ಕೂಡ ಸೇರಿಕೊಂಡಿದ್ದಾರೆ. ಬಳಿಕ ಹರಿತವಾದ ಆಯುಧಗಳಿಂದ ಸುನೀತಾ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಆದ್ರೆ ಸ್ಟಿಂಗ್ ಆಪರೇಷನ್ಗೆ ಕರ್ನಾಟಕ ಮಾಡೆಲ್ ಆಗಲಿದೆ: ಕೆ.ಎನ್.ರಾಜಣ್ಣ
ಸುನೀತಾ ಅವರ ತಂದೆ ವಾಲ್ಯ ನಾಯಕ್ ನೀಡಿದ ದೂರಿನ ಆಧಾರದ ಮೇಲೆ ಕೊಯಿಲ್ಕೊಂಡ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನ್ಯ ನಾಯಕ್, ಪಾಂಡು ನಾಯಕ್, ಪಾರ್ವತಿ ಮತ್ತು ಮಾಣಿಕ್ಯ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 6ರ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – PUBG ಆಟದ ಪ್ರಭಾವವೇ ಕಾರಣವಾಯ್ತಾ?
ಕೊಯಿಲ್ಕೊಂಡ ವೃತ್ತ ನಿರೀಕ್ಷಕ ಗಾಂಧಿ ನಾಯಕ್ ಹಾಗೂ ಸಬ್ ಇನ್ಸ್ಪೆಕ್ಟರ್ ನಾಗರಾಜು ಪ್ರಾಥಮಿಕ ತನಿಖೆಯಲ್ಲಿ ಕೃಷಿ ಭೂಮಿ ವಿವಾದವೇ ಹತ್ಯೆಗೆ ಪ್ರಮುಖ ಕಾರಣವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಪ್ರಕರಣ – ಸಿಸಿಬಿ ವಿಚಾರಣೆಗೆ ಹಾಜರಾದ ಹೆಚ್ಡಿಕೆ ಪಿಆರ್ಒ ಪ್ರಜ್ವಲ್ ಪ್ರಸಾದ್
