ಬೆಂಗಳೂರು: ರಾಜಕೀಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರನ್ನು ಮುಗಿಸಲು ಕಾಂಗ್ರೆಸ್ ಪಕ್ಷದ ಒಳಗಡೆಯೇ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಸ್ಟಿಂಗ್ ಕಾರ್ಯಾಚರಣೆ ಪ್ರಕರಣ, ಪೊಲೀಸ್ ತನಿಖೆಯ ವೈಫಲ್ಯ ಹಾಗೂ ಬಸ್ ಪ್ರಯಾಣ ದರ ಏರಿಕೆಯ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ತೀವ್ರ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಅವರ ತೇಜೋವಧೆ ಮಾಡುತ್ತಿರುವ ಈ ಜನವಿರೋಧಿ ಸರ್ಕಾರಕ್ಕೆ 2028ರ ಚುನಾವಣೆಯಲ್ಲಿ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಸಂಪೂರ್ಣ ದಾರಿ ತಪ್ಪಿದೆ ಎಂದು ಆಕ್ರೋಶ ಹೊರಹಾಕಿದ ಅವರು, “ನಾನು ಮೊದಲ ದಿನವೇ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಹೇಳಿದ್ದೆ.
ಆದರೆ ಈ ಸರ್ಕಾರ ಮಾಡುತ್ತಿರುವುದೇನು? ಕೊಲೆ ಮಾಡಿದವರನ್ನು ಬಿಟ್ಟು, ಕೊಲೆಯಾಯ್ತು ಎಂದು ಕೂಗಿ ಹೇಳಿದವರ ಮೇಲೆ ತನಿಖೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾನು ರಾಜಕೀಯವಾಗಿ ಸದಾ ವಿರೋಧಿಸಿಕೊಂಡು ಬಂದವನು. ಆದರೆ ಈಗ ನಾನು ಅನುಕಂಪಕ್ಕಾಗಲೀ, ನಮ್ಮ ಸಮುದಾಯದವರೊಬ್ಬರು ಸಿಎಂ ಆಗಿದ್ದಾರೆಂಬ ಹೊಟ್ಟೆಕಿಚ್ಚಿಗಾಗಲೀ ಮಾತನಾಡುತ್ತಿಲ್ಲ. ರಾಜ್ಯಕ್ಕೆ ಎಂತಹ ದಾರಿದ್ರ್ಯ ಬಂತು ನೋಡಿ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿ ಹೊಸ ರಾಜಕೀಯ ಮಾಡಲು ಕಾಂಗ್ರೆಸ್ನಲ್ಲೇ ಕೆಲವರು ಹೊರಟಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಬೇಕಾದ್ರೆ ಪಕ್ಷ ಬಿಟ್ಟು ಹೋಗಲಿ: ರಾಜಣ್ಣ, ರಾಜೇಂದ್ರ ವಿರುದ್ಧ ಬಾಲಕೃಷ್ಣ ಕೆಂಡಾಮಂಡಲ
ಸ್ಟಿಂಗ್ ಪ್ರಕರಣದ (Sting Case) ತನಿಖೆಯನ್ನು ಪ್ರಸ್ತಾಪಿಸಿದ ಹೆಚ್ಡಿಕೆ, ಆ ಸಂತ್ರಸ್ತೆ ಕಳುಹಿಸಿದ ಇಮೇಲ್ ಎಲ್ಲಿಗೆ ಹೋಯ್ತು? ಅದನ್ನೇಕೆ ತನಿಖೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು. ಇಮೇಲ್ ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಇಂಟೆಲಿಜೆನ್ಸ್ ಮತ್ತು ಗೃಹ ಇಲಾಖೆ ಇರೋದು ನನ್ನ ಕೈಯಲ್ಲಾ? ಉಳಿದೆಲ್ಲಾ ವಿಚಾರ ನಿಮ್ಮ ವ್ಯಾಪ್ತಿಗೆ ಬರುತ್ತದೆ, ಇಮೇಲ್ ಮಾತ್ರ ಬರಲ್ವಾ? ಪ್ರತಿಯೊಂದಕ್ಕೂ ನಾವೇ ದಾಖಲೆ ಕೊಡಬೇಕೆಂದರೆ ಗೃಹ ಇಲಾಖೆ ಯಾಕಿದೆ? ಆ ದಾಖಲೆ ಪತ್ತೆ ಹಚ್ಚಲು ಆಗದಿದ್ದರೆ ನೀವು ಗೃಹ ಸಚಿವ ಸ್ಥಾನದಲ್ಲಿರಲು ಅನ್ಫಿಟ್ ಎಂದು ನೇರವಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಆದ್ರೆ ಸ್ಟಿಂಗ್ ಆಪರೇಷನ್ಗೆ ಕರ್ನಾಟಕ ಮಾಡೆಲ್ ಆಗಲಿದೆ: ಕೆ.ಎನ್.ರಾಜಣ್ಣ
ಸಿದ್ದರಾಮಯ್ಯ ಅವರ ವರ್ಚಸ್ಸು ಮತ್ತು ಶಕ್ತಿಯನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಅಧಿಕಾರ ಸಿಕ್ಕ ಬಳಿಕ ಅವರಿಗೆ ಈಗ ಸಿದ್ದರಾಮಯ್ಯನವರ ಅಗತ್ಯವಿಲ್ಲದಂತಾಗಿದೆ. ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ತೇಜೋವಧೆಯ ಕುರಿತು ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕ ರಾಹುಲ್ ಗಾಂಧಿಯವರಿಗೆ ದೂರು ನೀಡಿದ್ದಾರೆ. ‘ಇದೇ ರೀತಿ ಮುಂದುವರಿದರೆ ನಾನು ಮುಂದಿನ ಯಾವುದೇ ಚುನಾವಣೆಯಲ್ಲೂ ಪಕ್ಷದ ಪರ ಪ್ರಚಾರಕ್ಕಿಳಿಯುವುದಿಲ್ಲ’ ಎಂದು ರಾಹುಲ್ ಗಾಂಧಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಕಟುವಾಗಿ ಖಂಡಿಸಿದ ಅವರು, ಈ ಸರ್ಕಾರ ಬಡವರ ಮತ್ತು ಸಾಮಾನ್ಯ ಜನರ ಪರವಾಗಿಲ್ಲ. ಕಳೆದ ವಾರವಷ್ಟೇ ಹಾಲಿನ ದರ ಏರಿಸಿ ಜನರಿಗೆ ಬರೆ ಎಳೆದಿದ್ದರು, ಈಗ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಇಡೀ ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಿ ಖಾಲಿ ಮಾಡಿದ್ದಾರೆ. ಈಗ ಮತ್ತೆ ಲೂಟಿ ಮಾಡಲು ಹಣವಿಲ್ಲದೆ ಜನರ ಜೇಬಿಗೆ ಕೈಹಾಕುತ್ತಿದ್ದಾರೆ. ಜನರ ಆಕ್ರೋಶಕ್ಕೆ ಈ ಸರ್ಕಾರ ಶೀಘ್ರವೇ ಬೆಲೆ ತೆರಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
