ಬೆಂಗಳೂರು: ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಅದೇ ರೀತಿ ಮುಂದೆ ದೇಶಾದ್ಯಂತ ಸ್ಟಿಂಗ್ ಆಪರೇಷನ್ (Sting Operation) ವಿಚಾರದಲ್ಲಿ ಕರ್ನಾಟಕ (Karnataka) ಮಾಡೆಲ್ ಅಂತ ಅಪಕೀರ್ತಿಗೆ ಕಾರಣವಾಗುತ್ತದೆ. ಇದರಿಂದ ಕರ್ನಾಟಕದ ಗೌರವಕ್ಕೆ ಧಕ್ಕೆಯಾಗಲಿದ್ದು, ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಸ್ಟಿಂಗ್ ಆಪರೇಷನ್ನಿಂದ ಪಕ್ಷದ ಮೇಲಾಗುತ್ತಿರುವ ಪರಿಣಾಮಗಳು, ವೈಯಕ್ತಿಕ ವರ್ಚಸ್ಸಿನ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ವಿವರವಾಗಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು. ಇದನ್ನೂ ಓದಿ: 6ರ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – PUBG ಆಟದ ಪ್ರಭಾವವೇ ಕಾರಣವಾಯ್ತಾ?
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಉನ್ನತ ಮಟ್ಟದಲ್ಲಾಗಲಿ ಅಥವಾ ಕೆಳಮಟ್ಟದಲ್ಲಾಗಲಿ, ಸೂಕ್ತ ತನಿಖೆ ನಡೆದು ಸತ್ಯ ಹೊರಬರಬೇಕು. ಈ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದರೆ ಅವರಿಗೆ ನ್ಯಾಯ ಸಿಗಬೇಕು. ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಪ್ರಕರಣ – ಸಿಸಿಬಿ ವಿಚಾರಣೆಗೆ ಹಾಜರಾದ ಹೆಚ್ಡಿಕೆ ಪಿಆರ್ಒ ಪ್ರಜ್ವಲ್ ಪ್ರಸಾದ್
ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮಾಡೆಲ್ ಎಂಬ ಪದ ಬಳಕೆಯಾಗುವಂತೆ, ಮುಂದಿನ ದಿನಗಳಲ್ಲಿ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕರ್ನಾಟಕ ಮಾಡೆಲ್ ಎಂಬ ಅಪಕೀರ್ತಿ ಬರಬಹುದು. ಇದು ರಾಜ್ಯಕ್ಕೆ ದೊಡ್ಡ ಕಳಂಕ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಸೂಕ್ತ ತನಿಖೆ ನಡೆಸುವುದು ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಆಂಧ್ರದ ಶಾಲಾ ಬಾಲಕಿ ಕೊಲೆ ಯತ್ನ ಪ್ರಕರಣ; ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಗ್ಯದಲ್ಲಿ ಸುಧಾರಣೆ
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ನಿಲುವುಗಳ ಕುರಿತು ಜನರಲ್ಲಿ ಗೊಂದಲವಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಬಳಿಕ ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಹೇಳಿರುವುದು ಪಕ್ಷದ ಮೇಲೆ ದುಷ್ಪರಿಣಾಮ ಬೀರಲಿದೆ. 2028ರ ಚುನಾವಣೆಯ ನಾಯಕತ್ವದ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯವಿದೆ ಎಂದರು. ಇದನ್ನೂ ಓದಿ: ಹಾಸನಾಂಬ ಜಾತ್ರೆ | 3 ಲಕ್ಷದ ಚಿನ್ನದ ಬಳೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
ಸ್ಟಿಂಗ್ ಆಪರೇಷನ್ ವಿಚಾರದ ಪರಿಣಾಮ ಪರಿಷತ್ ಚುನಾವಣೆಯ ಮೇಲೂ ಬೀರಿದೆ. ವಿದ್ಯಾವಂತ ಮತದಾರರು ಪ್ರತಿಯೊಂದು ವಿಚಾರವನ್ನೂ ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಅವರಿಗೆ ಅವಕಾಶವಿದೆ. ತುಮಕೂರು ಕ್ಷೇತ್ರದಲ್ಲಿ 35 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ನ 26 ಶಾಸಕರಿದ್ದರೂ ಸೋಲು ಅನುಭವಿಸಿರುವುದು ಪಕ್ಷಕ್ಕೆ ಮುಖಭಂಗವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾರ್ವಜನಿಕ ಸಮಾರಂಭಗಳಲ್ಲಿ ‘ಡಿ-ಬಾಸ್’ ಘೋಷಣೆ ಕೂಗಬೇಡಿ: ಅಭಿಮಾನಿಗಳಲ್ಲಿ ‘ಡಿ ಕಂಪನಿ’ ಮನವಿ
ಹಾಗೆ ನೋಡಿದರೆ ಸೋಲಿನ ಜವಬ್ದಾರಿ ಹೊತ್ತು ನನ್ನನ್ನೂ ಸೇರಿ ಕಾಂಗ್ರೆಸ್ನವರು ನಾವೆಲ್ಲ ರಾಜೀನಾಮೆ ಕೊಡಬೇಕು. ನಾವು ಗೆಲ್ಲಲು ಆಗಿಲ್ಲ ಅಂದ್ರೆ 26 ಜನವೂ ಕೂಡ ನಾವು ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು. ಪಕ್ಷದಲ್ಲಿ ಒಂದು ನಿರ್ಣಯ ಆದಮೇಲೆ ಆ ನಿರ್ಣಯದಂತೆ ಕ್ರಮ ಜರುಗಿಸುವಂತಹ ಕೆಲಸ ಇರುತ್ತದೆ. ಅದರಂತೆ ಎಲ್ಲಾ ಶಾಸಕರು ಕೂಡ ಮಾಡತಕ್ಕಂತಹ ಜವಾಬ್ದಾರಿ ಇಲ್ಲಿದೆ. ಆ ಜವಾಬ್ದಾರಿ ನಿರ್ವಹಣೆ ಮಾಡಲಿಲ್ಲ ಎಂದು ಹೇಳಿದರೆ ನಾವೆಲ್ಲರೂ ತಪ್ಪು ಮಾಡಿದ್ದೇವೆ ಎಂದು ಅರ್ಥ. ಆ ತಪ್ಪಿಗೆ ಶಿಕ್ಷೆಯೂ ಕೂಡ ಆಗಬೇಕಾಗುತ್ತದೆ. ನಮ್ಮ ಶಾಸಕರು ಇದ್ದು ಕೂಡ ನಾವು ಸೋಲು ಅನುಭವಿಸುತ್ತೇವೆ ಎಂದು ಹೇಳಿದರೆ ನಿಜಕ್ಕೂ ಕೂಡ ಅದು ಒಂದು ರೀತಿಯ ಪಕ್ಷಕ್ಕೆ ಆದಂತ ಅನ್ಯಾಯ. ಈ 26 ಜನ ಎಂಎಲ್ಎಗಳಿಗೂ ಕೂಡ ಮುಖಭಂಗ ಎಂದು ಬೇಸರಿಸಿದರು. ಇದನ್ನೂ ಓದಿ: ಕಬ್ಬಿಗೆ 5,500 ದರ ನಿಗದಿಗೆ ಆಗ್ರಹ: ಬಾಗಲಕೋಟೆಯ ಗದ್ದನಕೇರಿ ಕ್ರಾಸ್ನಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಇನ್ನು ಸ್ಟಿಂಗ್ ಆಪರೇಷನ್ ತನಿಖೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರತ್ತ ತಿರುಗಿರುವ ವಿಚಾರವಾಗಿ ಮಾತನಾಡಿದ ರಾಜಣ್ಣ, ಸಾರ್ವಜನಿಕ ಜೀವನದಲ್ಲಿ ಪ್ರತಿದಿನ ಹಲವು ವ್ಯಕ್ತಿಗಳು ಭೇಟಿಯಾಗುತ್ತಾರೆ. ಪರಿಚಯ ಇರುವವರು, ಇಲ್ಲದವರು ಫೋಟೋ ತೆಗೆಸಿಕೊಳ್ಳುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನು ಪರಿಶೀಲಿಸಿ ಮಾತನಾಡಲು ಸಾಧ್ಯವಿಲ್ಲ. ರಾಜಕೀಯ ಜೀವನದಲ್ಲಿ ಇಂತಹ ಸಂದರ್ಭಗಳು ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸ್ಮಗ್ಲಿಂಗ್ ತಡೆಯಲು ಹೋಗಿದ್ದ ಬಿಎಸ್ಎಫ್ ಸಿಬ್ಬಂದಿ ಮೇಲೆ ಸ್ಥಳೀಯರಿಂದ ಹಲ್ಲೆ – 8 ಮಂದಿ ಅರೆಸ್ಟ್
ಇದೇ ವೇಳೆ ಅಹಿಂದ ನಾಯಕರನ್ನು ಒಗ್ಗೂಡಿಸುವ ಪ್ರಯತ್ನದ ಕುರಿತು ಮಾತನಾಡಿದ ಅವರು, ನಾನು ಈ ಕೆಲಸ ಮಾಡುತ್ತಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ನಡುವೆ ಯಾವುದೇ ಮುನಿಸಿಲ್ಲ. ಕೆಲ ಮಧ್ಯಸ್ಥರು ಒಬ್ಬರ ಬಗ್ಗೆ ಮತ್ತೊಬ್ಬರಿಗೆ ತಪ್ಪು ಮಾಹಿತಿ ನೀಡಿ ಮನಸ್ತಾಪ ಉಂಟುಮಾಡಿರಬಹುದು. ಈ ಗೊಂದಲಗಳನ್ನು ಸರಿಪಡಿಸುವ ವಿಶ್ವಾಸವಿದೆ. ಎಲ್ಲವೂ ಸರಿಯಾಗಲಿದೆ ಎಂದು ಕೆ.ಎನ್. ರಾಜಣ್ಣ ತಿಳಿಸಿದರು. ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ – ಭಾರತೀಯ ನಾವಿಕ ಸಾವು
