ಚಿತ್ರದುರ್ಗ: ಮಾಜಿ ಸಚಿವ ಕೆ.ಎನ್. ರಾಜಣ್ಣ(KN Rajanna) ಹಾಗೂ ಅವರ ಪುತ್ರ ರಾಜೇಂದ್ರ(Rajendra) ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ(HC Balakrishna) ತೀವ್ರ ವಾಗ್ದಾಳಿ ನಡೆಸಿದ್ದು, “ಪಕ್ಷದಲ್ಲೇ ಇದ್ದು ಅನ್ನ ತಿಂದು ದ್ರೋಹ ಬಗೆಯುವುದಾದರೆ ಪಕ್ಷ ಬಿಟ್ಟು ಹೋಗಲಿ” ಎಂದು ನೇರ ಸವಾಲೆಸೆದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್ನಿಂದಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಬೇಕಾಯಿತು ಎಂದು ಕೆ.ಎನ್. ರಾಜಣ್ಣ ಹೇಳಿದ ಹೇಳಿಕೆಗೆ ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಅವರ ಸ್ಟಿಂಗ್ ವಿಚಾರ ಮಾತನಾಡುವ ಮುನ್ನ, ರಾಜಣ್ಣ ಅವರ ಪುತ್ರ ರಾಜೇಂದ್ರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರಾ ಎಂದು ಮೊದಲು ಕೇಳಿ. ಇತ್ತ ಚುನಾವಣೆ ಮುಗಿಯುವುದರೊಳಗೆ ಅತ್ತ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಆದ್ರೆ ಸ್ಟಿಂಗ್ ಆಪರೇಷನ್ಗೆ ಕರ್ನಾಟಕ ಮಾಡೆಲ್ ಆಗಲಿದೆ: ಕೆ.ಎನ್.ರಾಜಣ್ಣ
ರಾಜಣ್ಣ ಕುಟುಂಬದ ಪಕ್ಷವಿರೋಧಿ ಚಟುವಟಿಕೆಗಳ ವಿರುದ್ಧ ಸಿಡಿದೆದ್ದ ಸಚಿವರು, ಪಕ್ಷದೊಳಗೆ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ತಾಕತ್ತಿದ್ದರೆ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಬಿಟ್ಟು ಹೊರಗೆ ಹೋಗಲಿ. ಪಕ್ಷದ ಅನ್ನ ತಿಂದು ಪಕ್ಷಕ್ಕೇ ದ್ರೋಹ ಬಗೆಯುವುದು ಸರಿಯಲ್ಲ. ಅವರು ಯಾವ ದೇವಸ್ಥಾನಕ್ಕೆ ಕರೆಯುತ್ತಾರೋ ಅಲ್ಲಿಗೆ ನಾನು ಬರಲು ಸಿದ್ಧ, ಪ್ರಮಾಣ ಮಾಡಿ ಸತ್ಯ ಹೇಳುತ್ತೇನೆ. ರಾಜಣ್ಣನವರೂ ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಗುಡುಗಿದರು.
ಪಕ್ಷಕ್ಕೆ ಒಳಗಿಂದಲೇ ಮುಳುವಾಗುತ್ತಿರುವ ಇಂತಹ ಪಕ್ಷವಿರೋಧಿ ಚಟುವಟಿಕೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ರಾಜಣ್ಣ ಹಾಗೂ ಅವರ ಪುತ್ರನ ಈ ನಡವಳಿಕೆ, ಪಕ್ಷದ್ರೋಹದ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ಸಮಗ್ರವಾಗಿ ಅಧಿಕೃತ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
