ಚಂಡೀಗಢ: ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂರನೇ ತರಗತಿಯ ವಿದ್ಯಾರ್ಥಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಾಲಕ PUBG ಸೇರಿದಂತೆ ಆಕ್ರಮಣಕಾರಿ ಆಟಗಳನ್ನು ಆಡುತ್ತಿದ್ದ ಎಂದು ಸಂತ್ರಸ್ತೆಯ ಚಿಕ್ಕಪ್ಪ ಫಾಜಿಲ್ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಫಾಜಿಲ್, ಬಾಲಕನ ತಂದೆಯೂ ತನ್ನ ಮಗ PUBG ಮತ್ತು ಇತರ ಆಕ್ರಮಣಕಾರಿ ಆಟಗಳನ್ನು ಆಡುತ್ತಿದ್ದ ಎಂದು ದೃಢಪಡಿಸಿದ್ದಾರೆ. ಈ ಆಟಗಳ ಪ್ರಭಾವದಿಂದಲೇ ಬಾಲಕ ಇಂತಹ ಕೃತ್ಯ ಎಸಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಹಲ್ಲೆಗೂ ಮುನ್ನ ನಡೆದಿದ್ದೇನು?
ಬಾಲಕ ಮೊದಲು ಬಾಲಕಿಯನ್ನು ‘ಹುಚ್ಚಿ’ ಎಂದು ಕರೆದಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಲಕಿ, ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಳು. ಆಗ ಬಾಲಕ, ಆಕೆಯ ತಂದೆ ಮೇಲಿನ ಮಹಡಿಯಲ್ಲಿದ್ದಾರೆ ಎಂದು ಹೇಳಿ ತನ್ನೊಂದಿಗೆ ಬರುವಂತೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಸಂತ್ರಸ್ತೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಫಾಜಿಲ್, ಕಳೆದ ಎರಡು-ಮೂರು ದಿನಗಳಿಂದ ಆಕೆಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಿದ್ದಾರೆ. ವೈದ್ಯರು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಕಿಗೆ ಉತ್ತಮ ಆರೈಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
ಶಾಲೆ, ಬಾಲಕನ ವಿರುದ್ಧ ಎಫ್ಐಆರ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ ಒಂದು ಎಫ್ಐಆರ್ ಮತ್ತು ಆರೋಪಿ ಬಾಲಕನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇನ್ನು, ಘಟನೆಗೆ ಸಂಬಂಧಿಸಿದಂತೆ ಹರಿಯಾಣ ಶಿಕ್ಷಣ ಇಲಾಖೆಯು ಇಬ್ಬರು ಜೆಬಿಟಿ ಶಿಕ್ಷಕರಾದ ಸಿಮ್ರನ್ಜೀತ್ ಕೌರ್ ಮತ್ತು ಪೂಜಾ ರಾಣಿ ಅವರನ್ನು ಅಮಾನತುಗೊಳಿಸಿದೆ.
ಹರಿಯಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಪಂಚಕುಲ ಜಿಲ್ಲಾ ಶಿಕ್ಷಣಾಧಿಕಾರಿಗೆ ಸೂಚಿಸಿದೆ.
ಶಾಲೆಯ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಸಂತ್ರಸ್ತೆಯ ಕುಟುಂಬ ಪ್ರಶ್ನೆ ಎತ್ತಿದೆ. ಬಾಲಕಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆರೋಪಿ ಬಾಲಕನೇ ಕುಟುಂಬದವರನ್ನು ಆಕೆಯ ಬಳಿಗೆ ಕರೆದೊಯ್ದಿದ್ದಾನೆ ಎಂದು ಕುಟುಂಬ ಹೇಳಿಕೊಂಡಿದೆ. ಪ್ರಾಂಶುಪಾಲರ ಕಚೇರಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರೂ, ಹಲ್ಲೆ ನಡೆದಿರುವುದು ಯಾರ ಗಮನಕ್ಕೂ ಏಕೆ ಬರಲಿಲ್ಲ ಎಂದು ಕುಟುಂಬ ಪ್ರಶ್ನಿಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹಲ್ಲೆಯ ಹಿಂದಿನ ನೈಜ ಕಾರಣ ಮತ್ತು ಶಾಲೆಯಲ್ಲಿನ ಭದ್ರತಾ ಲೋಪಗಳ ಬಗ್ಗೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
