– ಕಾಂಗ್ರೆಸ್ನಲ್ಲಿ ರಾಹುಲ್ vs ಪ್ರಿಯಾಂಕಾ ಬಣ ಸಂಘರ್ಷ ಶುರುವಾಗಿದೆ
ನವದೆಹಲಿ: ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಪಕ್ಷವು ಎರಡು ಬಣಗಳಾಗಿ ವಿಭಜನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಒಂದು ಬಣ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ನೇತೃತ್ವದಲ್ಲಿ ಮತ್ತೊಂದು ಬಣ ರೂಪುಗೊಂಡಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.
ಇತ್ತೀಚೆಗೆ ನಡೆದ ಇಂಡಿಯಾ ಮೈತ್ರಿಕೂಟದ ಪ್ರಮುಖ ಪ್ರತಿಭಟನೆಗಳಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದಂತೆ ರಾಹುಲ್ ಗಾಂಧಿ (Rahul Gandhi) ಉದ್ದೇಶಪೂರ್ವಕವಾಗಿ ತಡೆದಿದ್ದಾರೆ. ಪ್ರಿಯಾಂಕಾ ರಾಜಕೀಯವಾಗಿ ಮುನ್ನೆಲೆಗೆ ಬಂದರೆ ತಮ್ಮ ಪ್ರಭಾವ ಕುಗ್ಗಬಹುದು ಎಂಬ ಆತಂಕ ರಾಹುಲ್ ಅವರಲ್ಲಿದೆ. ಹೀಗಾಗಿ ಸಹೋದರಿಯ ರಾಜಕೀಯ ಬೆಳವಣಿಗೆಯನ್ನ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಹಾಗೂ ಸಂಬಿತ್ ಪಾತ್ರಾ (Sambit Patra) ಮತ್ತು ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟ ಎರಡು ಪ್ರಮುಖ ಪ್ರತಿಭಟನೆಗಳನ್ನ ನಡೆಸಿತ್ತು. ಅಕ್ಟೋಬರ್ 31ರ ಶನಿವಾರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಸಾಂಕೇತಿಕವಾಗಿ ‘ಜನತಾ ಮಹಾಭಿಯೋಗ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಸರ್ಕಾರದ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದ್ದು, ಜನರ ಮತದಾನದ ಹಕ್ಕಿಗೆ ಗಂಭೀರ ಅಪಾಯ ಎದುರಾಗಿದೆ ಎಂದು ಮೈತ್ರಿಕೂಟ ಆರೋಪಿಸಿತ್ತು. ನವೆಂಬರ್ 1ರ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.
ಪ್ರಿಯಾಂಕಾ ಮತವೂ ಚೋರಿಯಾಗಿದೆ
ಇನ್ನೂ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಸಂಬಿತ್ ಪಾತ್ರಾ, ಗಾಂಧಿ ಕುಟುಂಬದೊಳಗಿನ ರಾಜಕೀಯ ಪೈಪೋಟಿ ಮತ್ತು ಅಸುರಕ್ಷತೆಯ ಭಾವನೆ ಬಹಿರಂಗವಾಗಿದೆ. ಅಣಕು ಸಂಸತ್ ಅಧಿವೇಶನ ಹಾಗೂ ರಾಮಲೀಲಾ ಮೈದಾನದ ರ್ಯಾಲಿ ಎರಡರಲ್ಲೂ ಮಾತನಾಡಲು ಅವಕಾಶ ಸಿಗದ ಕಾರಣ ಪ್ರಿಯಾಂಕಾ ಗಾಂಧಿ ಅಸಮಾಧಾನಗೊಂಡಿದ್ದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಅಣಕು ಸಂಸತ್ ಅಧಿವೇಶನದಲ್ಲಿ ಒಂದು ವಿಚಾರ ನನ್ನ ಗಮನಕ್ಕೆ ಬಂತು. ಪ್ರಿಯಾಂಕಾ ವಾದ್ರಾ ಅವರಿಗೆ ಮಾತನಾಡಲು ರಾಹುಲ್ ಗಾಂಧಿಯಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಅಣುಕು ಸಂಸತ್ನಲ್ಲಿ ಸಂಸದರೂ ಅಲ್ಲದ ಹಲವು ನಾಯಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಆದರೆ, ಪ್ರಿಯಾಂಕಾ ಅವರಿಗೆ ಮಾತ್ರ ಮಾತನಾಡಲು ಅವಕಾಶ ನಿರಾಕರಿಸಲಾಗಿತ್ತು. ರಾಮಲೀಲಾ ಮೈದಾನದ ರ್ಯಾಲಿಯಲ್ಲೂ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು. ಆದರೆ, ಪ್ರಿಯಾಂಕಾ ವಾದ್ರಾ ಅಸಮಾಧಾನಗೊಂಡಂತೆ ಕಾಣುತ್ತಿದ್ದರು. ಮತ್ತೊಮ್ಮೆ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಪಾತ್ರಾ ದೂರಿದ್ದಾರೆ.
ಮುಂದುವರಿದು, ಗಾಂಧಿ ಕುಟುಂಬದೊಳಗೇ ಯಾವುದಾದರೂ ರಾಜಕೀಯ ಆಟ ನಡೆಯುತ್ತಿದೆಯೇ? ಪ್ರಿಯಾಂಕಾ ವಾದ್ರಾ ಅವರನ್ನು ನಾಯಕಿಯಾಗಿ ಬಿಂಬಿಸಿದರೆ ತಾವು ರಾಜಕೀಯವಾಗಿ ಮೂಲೆಗುಂಪಾಗಬಹುದು ಎಂಬ ಭಯ ರಾಹುಲ್ ಗಾಂಧಿ ಅವರಿಗಿದೆಯೇ? ಅದಕ್ಕಾಗಿಯೇ ಗಾಂಧಿ ಕುಟುಂಬದೊಳಗೇ ಪ್ರಿಯಾಂಕಾ ಅವರ ಮತವನ್ನೂ ಕದಿಯಲಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿ ರಾಹುಲ್ ಬಣ vs ಪ್ರಿಯಾಂಕಾ ಬಣ
ಬಿಜೆಪಿ ಮತ್ತೊಬ್ಬ ವಕ್ತಾರ ಪ್ರದೀಪ್ ಭಂಡಾರಿ ಕೂಡ ಈ ಆರೋಪಗಳಿಗೆ ಧ್ವನಿಗೂಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಇದೀಗ ‘ರಾಹುಲ್ ಬಣ’ ಮತ್ತು ‘ಪ್ರಿಯಾಂಕಾ ಬಣ’ ಎಂಬ ಎರಡು ಪ್ರತ್ಯೇಕ ಗುಂಪುಗಳು ಹುಟ್ಟಿಕೊಂಡಿವೆ. ಪಕ್ಷದ ಮೇಲಿನ ತಮ್ಮ ಹಿಡಿತವನ್ನ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಅವರ ರಾಜಕೀಯ ಬೆಳವಣಿಗೆಯನ್ನ ಉದ್ದೇಶಪೂರ್ವಕವಾಗಿ ನಿಯಂತ್ರಿಸುತ್ತಿದ್ದಾರೆ ಎಂದು ದೂರಿದ್ದಾರೆ.

