ಶಿವಮೊಗ್ಗ: ಎಸ್ಐಆರ್ (SIR) ಪ್ರಕ್ರಿಯೆಯನ್ನ ವಿರೋಧಿಸುವ ನೆಪದಲ್ಲಿ ಕಾಂಗ್ರೆಸ್ (Congress) ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದ್ದು, ಜನರಿಗೆ ಸತ್ಯವನ್ನ ತಿಳಿಸುವ ಉದ್ದೇಶದಿಂದ ನ.5 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ (Shivamogga) ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶವು ಅನೇಕ ಸಮಸ್ಯೆಗೆ ಪರಿಹಾರ ಸೂಚಿಸಿ, ಇತರೆ ದೇಶಗಳಿಗೆ ಬೆನ್ನೆಲುಬಾಗಿ ನಿಂತಿದೆ. ಜೊತೆಗೆ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಭಾರತವು ಇತರೆ ರಾಷ್ಟ್ರಗಳಿಗೂ ಸಹಕಾರ ನೀಡುತ್ತಿದೆ. ಆದರೆ, ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಲು ಹೊರಟಿದೆ ಮತ್ತು ದೇಶವನ್ನು ಒಡೆಯುವ ಪ್ರಯತ್ನವನ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: 500 GW ಪಳೆಯುಳಿಕೆಯೇತರ ಇಂಧನ ಗುರಿ ಸಾಧನೆ, ಸ್ವಚ್ಛ ಇಂಧನವೇ ಭವಿಷ್ಯದ ಭದ್ರತೆ: ಮೋದಿ
ಚುನಾವಣಾ ಆಯೋಗದ ವಿಚಾರದಲ್ಲಿ ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಹೊರಟಿದ್ದು, ಹೀಗಾಗಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ಅಳಿಸಿ ಎಂಬ ಶೀರ್ಷಿಕೆಯಡಿ ಪ್ರತಿಭಟನೆ ಆಯೋಜಿಸಲಾಗಿದೆ. ನ.5 ರಂದು ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಫ್ರೀಡಂ ಪಾರ್ಕ್ ವರೆಗೆ ಈ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸೇರಿದಂತೆ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನಪ್ರತಿನಿಧಿಗಳು, ಪಕ್ಷದ ಮುಖಂಡರು- ಕಾರ್ಯಕರ್ತರ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ದೇಶದ ಚುನಾವಣೆಗಳಲ್ಲಿ ನಿರಂತರವಾಗಿ ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು, ಈ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾರಣವಾಗಿದೆ. ದೇಶದ ಜನರಿಗೆ ಈ ಬಗ್ಗೆ ಸತ್ಯವನ್ನು ತಿಳಿಸಬೇಕಾದ ಅವಶ್ಯಕತೆಯಿದೆ ಎಂದರು. ಇದನ್ನೂ ಓದಿ: ಮೂರೇ ದಿನದಲ್ಲಿ 8 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ – 6.50 ಕೋಟಿ ಆದಾಯ: ಶಿವಲಿಂಗೇಗೌಡ
