ತಿರುವನಂತಪುರಂ: ಕೇರಳದ (Kerala) ಕೋಝಿಕ್ಕೋಡ್ ಸಮೀಪದ ಕರಂತೂರ್ನಲ್ಲಿರುವ ಹರಹರ ಮಹಾದೇವ ದೇವಾಲಯದಲ್ಲಿ ನಿನ್ನೆ ಉಚಿತ ಹಿಂದೂ ವಿವಾಹ ನೋಂದಣಿ ಶಿಬಿರ (Marriage Registration Camp) ಏರ್ಪಡಿಸಲಾಗಿತ್ತು. ಈ ಶಿಬಿರಕ್ಕೆ ಸುಮಾರು 7,000 ಜನರು ಆಗಮಿಸಿದ್ದಾರೆ.
ನಿರೀಕ್ಷೆಗೂ ಮೀರಿದ ಜನಸಂದಣಿಯಿಂದಾಗಿ, ಆಯೋಜಕರು ಸಾವಿರಾರು ಹೆಚ್ಚುವರಿ ಅರ್ಜಿ ನಮೂನೆಗಳನ್ನು ಮುದ್ರಿಸಬೇಕಾಯಿತು. ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದು, ದೇವಾಲಯದ ಆವರಣದಿಂದ ಹೊರಗೆ ಉದ್ದನೆಯ ಸಾಲು ರಾಷ್ಟ್ರೀಯ ಹೆದ್ದಾರಿಯಲ್ಲಿರುವ 2 ಬಸ್ ನಿಲ್ದಾಣಗಳವರೆಗೂ ವಿಸ್ತರಿಸಿತ್ತು.
ಇದರಿಂದಾಗಿ, ಜನಸಂದಣಿ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಸುಮಾರು 1,500 ರಿಂದ 2,000 ಜನರು ಬರಬಹುದು ಎಂದು ನಿರೀಕ್ಷಿಸಿದ್ದ ಆಯೋಜಕರು, 1,500 ಅರ್ಜಿ ನಮೂನೆಗಳನ್ನು ಸಿದ್ಧಪಡಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಅರ್ಜಿ ನಮೂನೆಗಳು ಖಾಲಿಯಾದವು.
ಆರಂಭದಲ್ಲಿ ಅವುಗಳ ಜೆರಾಕ್ಸ್ ಮಾಡಿಕೊಡಲಾಯಿತು. ನಂತರ 4000 ಪ್ರತಿಗಳನ್ನು ಪ್ರಿಂಟ್ ಮಾಡಲಾಯಿತು. ಈ ವಿಡಿಯೋ ಭಾರಿ ವೈರಲ್ ಆಗಿದೆ.
