ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಪತ್ರಕರ್ತರ ಕ್ರಿಕೆಟ್ ಹಬ್ಬ ಕಳೆಗಟ್ಟಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿರುವ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ 22 ಜಿಲ್ಲೆಗಳ ಪತ್ರಕರ್ತರು ಪಾಲ್ಗೊಂಡು ಕ್ರೀಡಾಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಎರಡು ದಿನಗಳ ಕಾಲ ನಡೆಯುತ್ತಿರುವ ಈ ಕ್ರಿಕೆಟ್ ಹಬ್ಬದಲ್ಲಿ ಮಳೆಯನ್ನೂ ಲೆಕ್ಕಿಸದೇ ಪತ್ರಕರ್ತರು ಮೈದಾನಕ್ಕಿಳಿದು ಬ್ಯಾಟ್ ಮತ್ತು ಬಾಲ್ ಮೂಲಕ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿರುವ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ 22 ಜಿಲ್ಲೆಗಳ ಪತ್ರಕರ್ತರು ಭಾಗವಹಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಬೆಳಗ್ಗಿನಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಪತ್ರಕರ್ತರು ಮೈದಾನಕ್ಕಿಳಿದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.
ಕ್ರೀಡಾಕೂಟಕ್ಕೆ ಭೇಟಿ ನೀಡಿದ ಕೃಷಿ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರು ಪತ್ರಕರ್ತರ ಕ್ರೀಡಾಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗಿನ ಜನರು ಕ್ರೀಡೆಯ ಬಗ್ಗೆ ಮೊದಲಿನಿಂದಲೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ತಾನೂ ಕೂಡ ಆರಂಭದಿಂದಲೇ ಕ್ರೀಡಾಪಟುವಾಗಿದ್ದು, ಕೋವಿಡ್ ನಂತರ ಕೆಲವು ಕಾರಣಗಳಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದೇನೆ. ಆದರೂ, ಇಷ್ಟೊಂದು ಒತ್ತಡಗಳ ನಡುವೆಯೂ ಕೊಡಗಿನ ಪತ್ರಕರ್ತರು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ರಾಜ್ಯದ 22 ಜಿಲ್ಲೆಗಳ ಪತ್ರಕರ್ತರು ಒಂದೇ ಕ್ರೀಡಾಂಗಣದಲ್ಲಿ ಸೇರಿ ಆಟವಾಡುತ್ತಿರುವುದು ಕ್ರೀಡೆಯ ನಿಜವಾದ ಸೌಂದರ್ಯವನ್ನು ತೋರಿಸುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಬೆರೆತು ಕ್ರೀಡಾಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದರು.
ಒಟ್ಟಿನಲ್ಲಿ, ವೃತ್ತಿಯ ಒತ್ತಡದ ನಡುವೆಯೂ ಪತ್ರಕರ್ತರ ನಡುವೆ ಸ್ನೇಹ, ಸೌಹಾರ್ದತೆ ಮತ್ತು ಕ್ರೀಡಾಸ್ಫೂರ್ತಿಯನ್ನು ಹೆಚ್ಚಿಸುವ ಉದ್ದೇಶದ ಈ ಕ್ರಿಕೆಟ್ ಹಬ್ಬ ಮಡಿಕೇರಿಯಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದೆ. ಇಂದಿಗೆ ಮಾತ್ರವಲ್ಲ, ನಾಳೆಯೂ ಮಂಜಿನ ನಗರಿ ಮಡಿಕೇರಿಯಲ್ಲಿ ಕ್ರಿಕೆಟ್ ಕಲರವ ಮುಂದುವರಿಯಲಿದ್ದು, ಪತ್ರಕರ್ತರ ಕ್ರೀಡಾಸಂಭ್ರಮ ಮತ್ತಷ್ಟು ರಂಗೇರಲಿದೆ.



