– ʻಹೊಸ ಪಯಣ ಶುರುವಾಗಿದೆʼ ಪೋಸ್ಟ್ ಹಂಚಿಕೊಂಡ ಸಿಎಂ; ಇಬ್ಬರಿಗೂ 2ನೇ ಮದ್ವೆ
ಜಮ್ಮು-ಕಾಶ್ಮೀರ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕ ಒಮರ್ ಅಬ್ದುಲ್ಲಾ (Omar Abdullah) ಅವರು ಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ ಅರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿರುವ ವಿಚಾರವನ್ನ ಇಬ್ಬರೂ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಒಮರ್ ಅಬ್ದುಲ್ಲಾ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಫೋಟೋ ಹಂಚಿಕೊಂಡು, ʻಹೊಸ ಪಯಣ ಆರಂಭವಾಗಿದೆʼ ಎಂದು ಬರೆದುಕೊಂಡಿದ್ದಾರೆ. ಇತ್ತ ನಿಧಿ ರಜ್ದಾನ್ (Nidhi Razdan) ಕೂಡ ಫೋಟೋ ಹಂಚಿಕೊಂಡು, ʻಇಟ್ಸ್ ಡನ್ ಬ್ರೋʼ (It’s done bro) ಎಂದು ಬರೆದು ಒಮರ್ ಅಬ್ದುಲ್ಲಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಆದರೆ ಮದುವೆ ಸಮಾರಂಭ ನಡೆದ ಸ್ಥಳ ಹಾಗೂ ಇತರ ವಿವರಗಳನ್ನ ಈವರೆಗೆ ಬಹಿರಂಗಪಡಿಸಿಲ್ಲ.
A new journey began yesterday 💍@Nidhi https://t.co/BXbdLq2d1H
— Omar Abdullah (@OmarAbdullah) October 31, 2026
ಇವರಿಬ್ಬರ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ರಾಜಕೀಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇಬ್ಬರ ವೈಯಕ್ತಿಕ ಜೀವನದ ಬೆಳವಣಿಗೆ ಇದೀಗ ಚರ್ಚೆಗೆ ಕಾರಣವಾಗಿದೆ.
2026ರಲ್ಲಿ ಮೊದಲ ಪತ್ನಿಗೆ ಒಮರ್ ಅಬ್ದುಲ್ಲಾ ವಿಚ್ಛೇದನ
ಒಮರ್ ಅಬ್ದುಲ್ಲಾ ಅವರ 2ನೇ ಮದುವೆಯ ಸುದ್ದಿ ಅವರ ಮೊದಲ ವೈವಾಹಿಕ ಜೀವನದ ವಿಚಾರವನ್ನೂ ಮತ್ತೆ ಮುನ್ನೆಲೆಗೆ ತಂದಿದೆ. ಒಮರ್ 1994ರ ಸೆಪ್ಟೆಂಬರ್ನಲ್ಲಿ ಪಾಯಲ್ ಅಬ್ದುಲ್ಲಾ ಅವರನ್ನ ವಿವಾಹವಾಗಿದ್ದರು. ದಂಪತಿಗೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಪುತ್ರರಿದ್ದಾರೆ. 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಹಲವು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ 2026ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಇವರ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ ನೀಡಿತ್ತು.
ಈ ಹಿಂದೆ ಒಮರ್ ಅಬ್ದುಲ್ಲಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಹಾಗೂ ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದವು. ಬಳಿಕ 2024ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನ ಮಧ್ಯಸ್ಥಿಕೆ ಪ್ರಕ್ರಿಯೆಗೆ ಕಳುಹಿಸಿತ್ತು. ಅಂತಿಮವಾಗಿ ಉಭಯ ಕಡೆಯವರು ಒಪ್ಪಂದಕ್ಕೆ ಬಂದ ಹಿನ್ನೆಲೆ ವಿಚ್ಛೇದನಕ್ಕೆ ಅನುಮತಿ ನೀಡಲಾಗಿತ್ತು.
ನಿಧಿ ರಜ್ದಾನ್ ಯಾರು?
ನಿಧಿ ರಜ್ದಾನ್ ಭಾರತದ ಖ್ಯಾತ ಪತ್ರಕರ್ತೆಯರಲ್ಲಿ ಒಬ್ಬರು. ರಾಷ್ಟ್ರೀಯ ರಾಜಕೀಯ, ಚುನಾವಣೆ, ರಾಜತಾಂತ್ರಿಕ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ವರದಿ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಪತ್ರಕರ್ತ, ಬರಹಗಾರ ಹಾಗೂ ಕಥೆಗಾರ ನೀಲೇಶ್ ಮಿಶ್ರಾ ಅವರನ್ನು 2005ರಲ್ಲಿ ವಿವಾಹವಾಗಿದ್ದರು. 2 ವರ್ಷಗಳ ಬಳಿಕ ಅಂದ್ರೆ 2007ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ನಂತರ ನೀಲೇಶ್ ಮಿಶ್ರಾ ಅವರು ಯಾಮಿನಿ ಮಿಶ್ರಾ ಅವರನ್ನು ವಿವಾಹವಾಗಿದ್ದರು. ಇದೀಗ ನಿಧಿ ಅವರೂ ಒಮರ್ ಅಬ್ದುಲ್ಲಾರನ್ನ ಮದ್ವೆಯಾಗಿದ್ದಾರೆ.
