ನ್ಯಾಯಾಲಯಗಳಲ್ಲಿ (Court) ಹಲವು ವರ್ಷಗಳಿಂದ ಪ್ರಕರಣಗಳು ಬಾಕಿ ಉಳಿಯುವುದು ಭಾರತದ ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಸವಾಲಾಗಿದೆ. ಇದರ ಜೊತೆ ಅಪರಾಧ ಸಾಬೀತಾದ ಬಳಿಕ ಅಪರಾಧಿಗೆ ವಿಧಿಸುವ ಶಿಕ್ಷೆ ಎಷ್ಟು ನ್ಯಾಯಸಮ್ಮತವಾಗಿದೆ? ಒಂದೇ ರೀತಿಯ ಅಪರಾಧ ಎಸಗಿದ ಇಬ್ಬರಿಗೆ ಬೇರೆಬೇರೆ ನ್ಯಾಯಾಧೀಶರು ವಿಭಿನ್ನ ಪ್ರಮಾಣದ ಶಿಕ್ಷೆ ವಿಧಿಸಿದರೆ, ಅದಕ್ಕೆ ಯಾವ ಮಾನದಂಡಗಳಿವೆ? ಇಂತಹ ಪ್ರಶ್ನೆಗಳಿಗೆ ವ್ಯವಸ್ಥಿತ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷೆ ನಿರ್ಧಾರ ಮಂಡಳಿ (Sentencing Council) ಸ್ಥಾಪನೆಯ ಪ್ರಸ್ತಾಪ ಚರ್ಚೆಗೆ ಬಂದಿದೆ.
ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ನ್ಯಾಯಾಂಗದ ಪ್ರಮುಖ ಜವಾಬ್ದಾರಿಗಳಲ್ಲೊಂದು. ಅಪರಾಧದ ಗಂಭೀರತೆ, ಸಂತ್ರಸ್ತರಿಗೆ ಉಂಟಾದ ಹಾನಿ, ಅಪರಾಧಿಯ ಹಿನ್ನೆಲೆ, ಹಿಂದಿನ ಅಪರಾಧ ದಾಖಲೆ ಮತ್ತು ಸುಧಾರಣೆಯ ಸಾಧ್ಯತೆಗಳನ್ನು ಪರಿಗಣಿಸಿ ನ್ಯಾಯಾಧೀಶರು ಶಿಕ್ಷೆ ನಿರ್ಧರಿಸುತ್ತಾರೆ. ಆದರೆ ಈ ಅಂಶಗಳಿಗೆ ಎಷ್ಟು ಮಹತ್ವ ನೀಡಬೇಕು ಎಂಬುದಕ್ಕೆ ಸ್ಪಷ್ಟವಾದ ಸಾಮಾನ್ಯ ಮಾರ್ಗಸೂಚಿಗಳ ಇಲ್ಲದಿದ್ದರೆ, ಒಂದೇ ರೀತಿಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಬದಲಾಗುವ ಸಾಧ್ಯತೆಯಿದೆ. ಈ ಅಸಮಾನತೆಯನ್ನು ಕಡಿಮೆ ಮಾಡಿ ನ್ಯಾಯಾಂಗದ ನಿರ್ಧಾರಗಳಲ್ಲಿ ಸ್ಥಿರತೆ ಮತ್ತು ಪಾರದರ್ಶಕತೆ ತರಲು ಶಿಕ್ಷೆ ನಿರ್ಧಾರ ಮಂಡಳಿ ಅವಶ್ಯಕವಾಗಿದೆ.
ಶಿಕ್ಷೆ ನಿರ್ಧಾರ ಮಂಡಳಿ ಎಂದರೇನು?
ವಿವಿಧ ಅಪರಾಧಗಳಿಗೆ ಯಾವ ಸಂದರ್ಭಗಳಲ್ಲಿ ಯಾವ ರೀತಿಯ ಶಿಕ್ಷೆ ಸೂಕ್ತವಾಗಬಹುದು ಎಂಬುದರ ಕುರಿತು ಮಾರ್ಗಸೂಚಿಗಳನ್ನು ರೂಪಿಸುವ ಸಂಸ್ಥೆಯೇ ಶಿಕ್ಷೆ ನಿರ್ಧಾರ ಮಂಡಳಿ. ಕಾನೂನು ಹಲವು ಅಪರಾಧಗಳಿಗೆ ಕನಿಷ್ಠ ಮತ್ತು ಗರಿಷ್ಠ ಶಿಕ್ಷೆಯ ಮಿತಿಗಳನ್ನು ನಿಗದಿಪಡಿಸುತ್ತದೆ. ಆದರೆ ಆ ಮಿತಿಗಳೊಳಗೆ ನಿರ್ದಿಷ್ಟ ಅಪರಾಧಿಗೆ ಎಷ್ಟು ಶಿಕ್ಷೆ ವಿಧಿಸಬೇಕು ಎಂಬುದನ್ನು ನ್ಯಾಯಾಧೀಶರು ಪ್ರಕರಣದ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುತ್ತಾರೆ.
ಉದಾಹರಣೆಗೆ, ಒಂದು ಅಪರಾಧಕ್ಕೆ ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನು ಅವಕಾಶ ನೀಡಿದೆ ಎಂದುಕೊಳ್ಳೋಣ. ಆಗ ಒಂದೇ ರೀತಿಯ ಪರಿಸ್ಥಿತಿಯಿರುವ ಎರಡು ಪ್ರಕರಣಗಳಲ್ಲಿ ಒಬ್ಬ ನ್ಯಾಯಾಧೀಶರು ಎರಡು ವರ್ಷಗಳ ಶಿಕ್ಷೆ ವಿಧಿಸಿದರೆ, ಮತ್ತೊಬ್ಬರು ಐದು ವರ್ಷಗಳ ಶಿಕ್ಷೆ ವಿಧಿಸಬಹುದು. ಇಂತಹ ವ್ಯತ್ಯಾಸಕ್ಕೆ ಪ್ರಕರಣದ ವಾಸ್ತವಾಂಶಗಳು ಮತ್ತು ಕಾನೂನುಬದ್ಧ ಕಾರಣಗಳಿವೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.
ಮಂಡಳಿಯ ಉದ್ದೇಶ ಎಲ್ಲ ಅಪರಾಧಿಗಳಿಗೂ ಒಂದೇ ಪ್ರಮಾಣದ ಶಿಕ್ಷೆ ವಿಧಿಸುವುದಲ್ಲ. ಅದರ ಬದಲಾಗಿ ಸಮಾನ ಸ್ವರೂಪದ ಪ್ರಕರಣಗಳಲ್ಲಿ ಸಮಾನ ಕಾನೂನು ಮತ್ತು ನ್ಯಾಯವನ್ನು ಅನ್ವಯಿಸುವುದಕ್ಕೆ ನೆರವಾಗುವುದಾಗಿದೆ.
ಶಿಕ್ಷೆಯಲ್ಲಿ ಅಸಮಾನತೆ ಉಂಟಾಗುವುದೇಕೆ?
ಶಿಕ್ಷೆ ನಿರ್ಧಾರವು ಕೇವಲ ಅಪರಾಧದ ಹೆಸರನ್ನು ಆಧರಿಸಿ ನಡೆಯುವ ಪ್ರಕ್ರಿಯೆಯಲ್ಲ. ಅಪರಾಧ ಪೂರ್ವಯೋಜಿತವಾಗಿತ್ತೇ, ಹಿಂಸೆಯ ಪ್ರಮಾಣ ಎಷ್ಟಿತ್ತು, ಸಂತ್ರಸ್ತರಿಗೆ ಯಾವ ರೀತಿಯ ಹಾನಿಯಾಗಿದೆ, ಅಪರಾಧಿಯ ಹಿಂದಿನ ನಡವಳಿಕೆ ಹೇಗಿದೆ ಮತ್ತು ಆತ ಸುಧಾರಿಸಿಕೊಳ್ಳುವ ಸಾಧ್ಯತೆ ಹೊಂದಿದ್ದಾನೆಯೇ ಎಂಬ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಈ ಅಂಶಗಳನ್ನು ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶರ ನಿರ್ಧಾರ ಮಹತ್ವದ್ದಾಗಿದೆ. ಸ್ಪಷ್ಟವಾದ ಮಾರ್ಗಸೂಚಿಗಳಿಲ್ಲದಿದ್ದರೆ ವೈಯಕ್ತಿಕ ಮೌಲ್ಯಮಾಪನವು ಶಿಕ್ಷೆಯ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸಕ್ಕೆ ಕಾರಣವಾಗಬಹುದು. ಇದರಿಂದ ಒಂದೇ ರೀತಿಯ ಅಪರಾಧಗಳಿಗೆ ಸಮಾನ ನ್ಯಾಯ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆದರೆ ಎಲ್ಲ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಒಂದೇ ಇರಬೇಕೆಂಬ ನಿರೀಕ್ಷೆಯೂ ಸರಿಯಲ್ಲ. ಮೇಲ್ನೋಟಕ್ಕೆ ಒಂದೇ ರೀತಿಯಾಗಿ ಕಾಣುವ ಅಪರಾಧಗಳ ಹಿಂದಿನ ಸಂದರ್ಭಗಳು ವಿಭಿನ್ನವಾಗಿರಬಹುದು. ಹೀಗಾಗಿ ಶಿಕ್ಷೆಯಲ್ಲಿನ ಅನಗತ್ಯ ಅಸಮಾನತೆಯನ್ನು ಕಡಿಮೆ ಮಾಡುವುದು ಇಲ್ಲಿ ಮುಖ್ಯವಾಗುತ್ತದೆ.
ಸುಪ್ರೀಂ ಕೋರ್ಟ್ ಹೇಳಿರುವುದೇನು?
ಭಾರತದಲ್ಲಿ ಶಿಕ್ಷೆ ನಿರ್ಧಾರಕ್ಕೆ ಸಾಮಾನ್ಯ ಮಾರ್ಗಸೂಚಿಗಳನ್ನು ರೂಪಿಸುವ ಚರ್ಚೆ ಹೊಸದಲ್ಲ. ಸುಪ್ರೀಂ ಕೋರ್ಟ್ ಕೂಡ ವಿವಿಧ ತೀರ್ಪುಗಳಲ್ಲಿ ಶಿಕ್ಷೆ ವಿಧಿಸುವಾಗ ಅನುಸರಿಸಬೇಕಾದ ತತ್ವಗಳ ಮಹತ್ವವನ್ನು ಚರ್ಚಿಸಿದೆ.
ಉದಾಹರಣೆಗೆ ಕೇರಳದ Soman v. State of Kerala ಪ್ರಕರಣದಲ್ಲಿ ಶಿಕ್ಷೆ ನಿರ್ಧಾರಕ್ಕೆ ಸಂಬಂಧಿಸಿದ ಅಂಶಗಳನ್ನು ನ್ಯಾಯಾಲಯ ಪರಿಶೀಲಿಸಿತ್ತು.
(Soman v. State of Kerala (2012): ಈ ಪ್ರಕರಣದಲ್ಲಿ ಕಲಬೆರಕೆ ಮದ್ಯ ಮಾರಾಟದ ಪ್ರಕರಣಕ್ಕೆ ಸಂಬಂಧಿಸಿದ ಈ ತೀರ್ಪಿನಲ್ಲಿ, ಅಪರಾಧದ ಗಂಭೀರತೆ ಮತ್ತು ಅದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ಆಧರಿಸಿ ಶಿಕ್ಷೆ ವಿಧಿಸಬೇಕು ಎಂಬ “ಶಿಕ್ಷೆಯ ಅನುಪಾತದ ತತ್ವವನ್ನು” (Principle of Proportionality in Sentencing) ನ್ಯಾಯಾಲಯವು ಬಲವಾಗಿ ಎತ್ತಿಹಿಡಿದಿತ್ತು.)
ಸುಮಾರು ಐದು ದಶಕಗಳ ಹಿಂದೆಯೇ ಕಾನೂನು ಆಯೋಗದ 47ನೇ ವರದಿಯಲ್ಲಿಯೂ ಶಿಕ್ಷೆ ನಿರ್ಧಾರದಲ್ಲಿನ ಅನಿಶ್ಚಿತತೆಯನ್ನು ಕಡಿಮೆ ಮಾಡಲು ಮಾರ್ಗಸೂಚಿಗಳ ಅಗತ್ಯವನ್ನು ಪ್ರಸ್ತಾಪಿಸಲಾಗಿತ್ತು. ಆದರೂ ಸಮಗ್ರ ರಾಷ್ಟ್ರೀಯ ಚೌಕಟ್ಟಿನ ಸ್ಥಾಪನೆ ಕುರಿತ ಚರ್ಚೆ ಮುಂದುವರಿದಿದೆ. ಹೀಗಾಗಿ ಈ ಪ್ರಸ್ತಾವವನ್ನು ಕೇವಲ ಹೊಸ ಸಂಸ್ಥೆಯ ರಚನೆಯ ಪ್ರಶ್ನೆಯಾಗಿ ನೋಡದೆ, ನ್ಯಾಯಾಂಗದ ಶಿಕ್ಷೆ ನಿರ್ಧಾರ ಪ್ರಕ್ರಿಯೆಯನ್ನು ಸುಧಾರಿಸುವ ಪ್ರಯತ್ನವಾಗಿ ಪರಿಗಣಿಸುವ ಅಗತ್ಯವಿದೆ.
ಬ್ರಿಟನ್ನ ಮಾದರಿ ಹೇಗಿದೆ?
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ 2009ರ ಕಾನೂನಿನಡಿ ಶಿಕ್ಷೆ ನಿರ್ಧಾರ ಮಂಡಳಿ ಸ್ಥಾಪಿಸಲಾಯಿತು. ಅಲ್ಲಿ ನ್ಯಾಯಾಲಯಗಳಿಗೆ ಅಪರಾಧದ ಗಂಭೀರತೆ, ಅಪರಾಧಿಯ ಹೊಣೆಗಾರಿಕೆ ಮತ್ತು ಸಂತ್ರಸ್ತರಿಗೆ ಉಂಟಾದ ಹಾನಿಯನ್ನು ಆಧರಿಸಿ ಶಿಕ್ಷೆ ನಿರ್ಧರಿಸಲು ಮಾರ್ಗಸೂಚಿಗಳು ನೆರವಾಗುತ್ತವೆ. ಅಪರಾಧವನ್ನು ಗಂಭೀರಗೊಳಿಸುವ ಅಂಶಗಳು ಹಾಗೂ ಶಿಕ್ಷೆಯನ್ನು ತಗ್ಗಿಸಲು ಪರಿಗಣಿಸಬಹುದಾದ ಸಂದರ್ಭಗಳನ್ನೂ ಪರಿಶೀಲಿಸಲಾಗುತ್ತದೆ.
ಭಾರತದಲ್ಲಿ ಮಂಡಳಿ ಹೇಗೆ ಕಾರ್ಯನಿರ್ವಹಿಸಬಹುದು?
ರಾಷ್ಟ್ರೀಯ ಶಿಕ್ಷೆ ನಿರ್ಧಾರ ಮಂಡಳಿ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಶಿಕ್ಷೆಯ ವ್ಯಾಪ್ತಿಯನ್ನು ಸೂಚಿಸುವ ಮಾರ್ಗಸೂಚಿಗಳನ್ನು ರೂಪಿಸಲಿದೆ.
ಮಂಡಳಿಯು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಸಮಾನ ಅಪರಾಧಗಳಿಗೆ ವಿಧಿಸಲಾಗುತ್ತಿರುವ ಶಿಕ್ಷೆಗಳ ಕುರಿತು ದತ್ತಾಂಶ ಸಂಗ್ರಹಿಸಬಹುದು. ಇದರಿಂದ ಶಿಕ್ಷೆಯ ಪ್ರಮಾಣದಲ್ಲಿ ಎಲ್ಲಿ ಮತ್ತು ಏಕೆ ವ್ಯತ್ಯಾಸ ಉಂಟಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಮಾರ್ಗಸೂಚಿಗಳಿಂದ ಭಿನ್ನವಾದ ಶಿಕ್ಷೆ ವಿಧಿಸಿದಾಗ ನ್ಯಾಯಾಧೀಶರು ಅದಕ್ಕೆ ಸೂಕ್ತ ಕಾರಣಗಳನ್ನು ದಾಖಲಿಸುವ ವ್ಯವಸ್ಥೆಯನ್ನು ರೂಪಿಸಬಹುದು. ಇದರಿಂದ ನ್ಯಾಯಾಂಗದ ನಿರ್ಧಾರಗಳಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ.
ಬಾಕಿ ಪ್ರಕರಣಗಳ ಸಮಸ್ಯೆಗೆ ಇದರಿಂದ ಪರಿಹಾರ ಸಿಗುತ್ತದೆಯೇ?
ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಉಳಿಯುವುದು ಮತ್ತು ಶಿಕ್ಷೆ ನಿರ್ಧಾರದಲ್ಲಿ ಅಸಮಾನತೆ ಉಂಟಾಗುವುದು ಎರಡು ಪ್ರತ್ಯೇಕ ಸಮಸ್ಯೆಗಳು. ಹೀಗಾಗಿ ಶಿಕ್ಷೆ ನಿರ್ಧಾರ ಮಂಡಳಿ ಸ್ಥಾಪನೆಯಾದ ಮಾತ್ರಕ್ಕೆ ಬಾಕಿ ಪ್ರಕರಣಗಳ ಸಂಖ್ಯೆ ತಕ್ಷಣ ಕಡಿಮೆಯಾಗುವುದಿಲ್ಲ.
ಶಿಕ್ಷೆ ನಿರ್ಧಾರ ಮಂಡಳಿಯ ಸ್ಥಾಪನೆಯಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಕಠಿಣ ಶಿಕ್ಷೆಯೇ ಉತ್ತಮ ನ್ಯಾಯ ಎಂಬ ಕಲ್ಪನೆಯೂ ಸರಿಯಲ್ಲ. ಅಪರಾಧವನ್ನು ತಡೆಯುವುದು, ಸಮಾಜವನ್ನು ರಕ್ಷಿಸುವುದು, ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಅಪರಾಧಿಯನ್ನು ಸುಧಾರಿಸುವುದು ಶಿಕ್ಷೆಯ ಪ್ರಮುಖ ಉದ್ದೇಶಗಳಾಗಿವೆ.


