ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನಕೊಡುವ ಹಾಸನಾಂಬೆ (Hasanamba) ದೇವಾಲಯದ ಗರ್ಭಗುಡಿಯ ಬಾಗಿಲನ್ನು ಇಂದು (ಅ.29) ತೆರೆಯಲಾಗಿದೆ. ಇಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ, ಬಂದಿದ್ದ ಸಾವಿರಾರು ಭಕ್ತರು ಹರಸಾಹಸಪಟ್ಟು ದೇವಿಯ ದರ್ಶನ ಪಡೆದಿದ್ದಾರೆ.
ಆರಂಭದಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಭಕ್ತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ದರ್ಶನಕ್ಕೆ ಅವಕಾಶ ನೀಡುತ್ತಿದ್ದಂತೆ, ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ: ಗರ್ಭಗುಡಿ ಬಾಗಿಲು ತೆರೆದು ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12:28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆಯಲಾಯಿತು. ಈ ವೇಳೆ ಹಾಜರಿದ್ದ ನೂರಾರು ಭಕ್ತರು, ಹಾಸನಾಂಬೆಗೆ ಜಯವಾಗಲಿ ಎಂದು ವಿಶೇಷ ಘೋಷವಾಕ್ಯ ಮೊಳಗಿಸಿದರು.
ಹಾಸನಾಂಬ ಗರ್ಭಗುಡಿ ಬಾಗಿಲು ತೆರೆದ ವೇಳೆ ನಂದಾದೀಪ ಉರಿಯುತ್ತಿತ್ತು. ಹೂವುಗಳು ಬಾಡಿರಲಿಲ್ಲ. ಅಲ್ಲದೇ ನೈವೇದ್ಯ ಹಳಸದೇ ಹಾಗೆ ಇತ್ತು. ಈ ಪವಾಡಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬಳಿಕ ದೇವಾಲಯದಲ್ಲಿ 20 ಅರ್ಚಕರ ತಂಡದಿಂದ ವಿಶೇಷ ಪೂಜೆ ನೆರವೇರಿತು. ನಾಳೆಯಿಂದ (ಅ.30) ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ಹಲವು ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಪ್ರತಿ ವರ್ಷ ಗರ್ಭಗುಡಿ ಬಾಗಿಲು ಹಾಕುವಾಗ ಹಚ್ಚಿದ ಹಣತೆ, ಇಟ್ಟ ನೈವೇದ್ಯ, ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಜೊತೆಗೆ ಬೇಡಿದ ಇಷ್ಟಾರ್ಥಗಳನ್ನು ಅಧಿದೇವತೆ ಈಡೇರಿಸುತ್ತಾಳೆ ಎಂಬ ನಂಬಿಕೆ ಇರುವುದರಿಂದ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಜನ ದೇವಿ ದರ್ಶನಕ್ಕಾಗಿ ಆಗಮಿಸುತ್ತಾರೆ. ಇದನ್ನೂ ಓದಿ: ಖಜಾನೆಯಿಂದ ಭಾರೀ ಭದ್ರತೆಯಲ್ಲಿ ಹಾಸನಾಂಬಾ ದೇವಾಲಯಕ್ಕೆ ಒಡವೆಗಳ ರವಾನೆ

