ಬೆಂಗಳೂರು: ಪರಿಷತ್ ಚುನಾವಣೆಯ ಎರಡು ಪದವೀಧರ, ಎರಡು ಶಿಕ್ಷಕರ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್ (Congress) ಒಳಗೆ ವಿಚಿತ್ರ ಸನ್ನಿವೇಶ ಸೃಷ್ಟಿಸಿದ್ದರೆ, ಮೈತ್ರಿ ಪಕ್ಷಗಳಲ್ಲಿ ರಣೋತ್ಸಾಹ ಮೂಡಿಸಿದೆ. ನಾಡಿದ್ದು ದೆಹಲಿಗೆ ಹೋಗಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮುಂದೆ ಈ ಸೋಲಿಗೆ ಕಾರಣ ಕೊಡಲಿದ್ದಾರೆ. ಇನ್ನು ಭರ್ಜರಿ ಫಲಿತಾಂಶದಿಂದ ರಾಜ್ಯ ರಾಜಕೀಯಕ್ಕೆ ಮರಳಿ ಎನ್ಡಿಎ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಇದ್ದಾರೆ.
ನಾಲ್ಕೂ ಕ್ಷೇತ್ರಗಳಲ್ಲೂ ಸೋತ ಕಾಂಗ್ರೆಸ್ನಲ್ಲಿ ಯಾವ ವಾತಾವರಣ ಇದೆ ಅನ್ನೋದು ಅಂದಾಜಿಗೆ ನಿಲುಕುತ್ತಿಲ್ಲ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಸ್ಟಿಂಗ್ ಆಪರೇಷನ್ ಮುಜುಗರ ಎದುರಿಸುತ್ತಿದ್ದ ಕಾಂಗ್ರೆಸ್ಗೆ ಈ ಫಲಿತಾಂಶ ಬರಸಿಡಿಲಂತೆ ಬಡಿದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಇಬ್ಬರಿಗೂ ಹೈಕಮಾಂಡ್ ಮುಂದೆ ಉತ್ತರ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಧ್ಯಕ್ಷರು ಹಾಗೂ ಸಿಎಂ ಇಬ್ಬರಿಂದಲೂ ಪರಸ್ಪರ ಚಾರ್ಜ್ಶೀಟ್ ಸಿದ್ಧವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪರಿಷತ್ ಫೈಟ್ನಲ್ಲಿ ಶೂನ್ಯ ಸಂಪಾದನೆ; ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿರಬಹುದು ಊಹಿಸಿ? – ಕಾಲೆಳೆದ ಮೋದಿ
ಇದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಚಾರ್ಜ್ಶೀಟ್ ಈ ಬೆಳವಣಿಗೆ ಮೇಲೂ ಪರಿಣಾಮ ಬೀರುವ ಸಾಧ್ಯತೆ. ಈ ಸೋಲಿನ ಹೊಣೆ ಯಾರ ಹೆಗಲಿಗೆ ಬೀಳುತ್ತೆ ಎಂಬ ಕುತೂಹಲ ಮನೆ ಮಾಡಿದೆ. ಒಂದು ಕಡೆ ಸ್ಟಿಂಗ್ ಡ್ಯಾಮೇಜ್, ಮತ್ತೊಂದು ಕಡೆ ಸೋಲಿನ ಹತಾಶೆ. ಹೈಕಮಾಂಡ್ ನಡೆ ಏನು ಎನ್ನುವ ಕುತೂಹಲವೂ ಮೂಡಿಸಿದೆ.
ಇತ್ತ ನಾಲ್ಕು ಪರಿಷತ್ ಚುನಾವಣಾ ಫಲಿತಾಶ, ಎನ್ಡಿಎ ಪಕ್ಷಗಳಲ್ಲಿ ರಣೋತ್ಸಾಹ ಮೂಡಿಸಿದೆ. ಇದರಿಂದ ಎನ್ಡಿಎ ಮೈತ್ರಿ ಮತ್ತಷ್ಟು ಗಟ್ಟಿಯಾಗಿ ಎರಡೂ ಪಕ್ಷಗಳೂ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ. ಈ ಬೆನ್ನಲ್ಲೇ 2028ರ ಎಲೆಕ್ಷನ್ ಫೋಕಸ್ ಇಟ್ಟುಕೊಂಡು ಹೆಚ್ಡಿಕೆ ಸ್ಟೇಟ್ ಪಾಲಿಟಿಕ್ಸ್ನಲ್ಲಿ ಫುಲ್ ಆ್ಯಕ್ಟಿವ್ ಆಗುವ ಲೆಕ್ಕಾಚಾರ ಹೆಣೆದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಹೆಚ್ಡಿಕೆ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ. ಕೇಂದ್ರದ ಸಚಿವ ಸ್ಥಾನ ತೊರೆಯದೇ ರಾಜ್ಯ ರಾಜಕೀಯದಲ್ಲಿ ಆ್ಯಕ್ಟಿವ್ ಆಗುವ ಬಗ್ಗೆ ಚಿಂತನೆ ನಡೆದಿದೆ. ರೀ-ಎಂಟ್ರಿ ಜೊತೆಗೆ ಎನ್ಡಿಎ ನಾಯಕತ್ವದ ಹೊಣೆಯೂ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ದುರಹಂಕಾರಕ್ಕೆ ಪರಿಷತ್ ಫಲಿತಾಂಶವೇ ಉತ್ತರ: ಹೆಚ್ಡಿಕೆ
