ನವದೆಹಲಿ: ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್), ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರು (ಎಫ್ಪಿಐ) ಹಾಗೂ ಅವುಗಳ ಮಧ್ಯವರ್ತಿಗಳ ನೈಜ ಲಾಭದಾಯಕ ಮಾಲೀಕರ ವಿವರ ಮತ್ತು ಹೂಡಿಕೆ ಪೋರ್ಟ್ಫೋಲಿಯೊ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಭಾರತೀಯ ಷೇರುಪೇಟೆ ಮತ್ತು ವಿನಿಮಯ ಮಂಡಳಿಗೆ (ಸೆಬಿ) ನಿರ್ದೇಶನ ನೀಡಬೇಕೆಂದು ಕೋರಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಆರ್.ಮಹಾದೇವನ್ ಮತ್ತು ಡಿ.ಕೆ.ಉಪಾಧ್ಯಾಯ ಅವರನ್ನೊಳಗೊಂಡ ಪೀಠವು, ಇಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಈಗಾಗಲೇ ಜಾರಿಯಲ್ಲಿರುವ ಕಾನೂನು ಅಥವಾ ನಿಯಂತ್ರಣ ವ್ಯವಸ್ಥೆ ಇರಬೇಕು ಎಂದು ಹೇಳಿದೆ. ಅಸ್ತಿತ್ವದಲ್ಲಿರುವ ಕಾನೂನಿನ ಆಧಾರವಿಲ್ಲದೆ ಹೊಸ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವಂತೆ ನ್ಯಾಯಾಲಯವು ಸೆಬಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಶಾಕ್ – 362 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ರಕ್ಷಿಸಿದ್ದ ಕಾಯ್ದೆಯೇ ರದ್ದು
ವಿಚಾರಣೆ ಆರಂಭದಲ್ಲಿ ನ್ಯಾಯಪೀಠವು ಮಹುವಾ ಮೊಯಿತ್ರಾ ಅರ್ಜಿ ಸಲ್ಲಿಸಿರುವುದರ ಉದ್ದೇಶದ ಬಗ್ಗೆ ಪ್ರಶ್ನಿಸಿತು. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಚರ್ಚೆಗೆ ಒತ್ತಾಯಿಸಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈಗಾಗಲೇ ಜಾರಿಯಲ್ಲಿರುವ ಕಾನೂನು ಅಥವಾ ನಿಯಂತ್ರಣ ವ್ಯವಸ್ಥೆಯ ಅನುಷ್ಠಾನದಲ್ಲಿ ಲೋಪವಾಗಿದ್ದರೆ, ಅದರ ಪಾಲನೆಗೆ ನಿರ್ದೇಶನ ನೀಡಬಹುದು. ಆದರೆ, ಹೊಸ ವ್ಯವಸ್ಥೆಯನ್ನು ರೂಪಿಸುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು. ಬಳಿಕ ಅರ್ಜಿಯನ್ನು ವಿಲೇವಾರಿ ಮಾಡಿತು.
ಎಐಎಫ್ಗಳು ಮತ್ತು ಎಫ್ಪಿಐಗಳ ಮೂಲಕ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರ ನೈಜ ಗುರುತು ಹಾಗೂ ಹೂಡಿಕೆಗಳ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಮಹುವಾ ಮೊಯಿತ್ರಾ ಮನವಿ ಮಾಡಿದ್ದರು.
ಈ ನಿಧಿಗಳ ಹಿಂದೆ ನಿಜವಾಗಿ ಯಾರು ಹೂಡಿಕೆ ಮಾಡಿದ್ದಾರೆ. ಹೂಡಿಕೆಯ ಮೇಲಿನ ನಿಯಂತ್ರಣ ಯಾರ ಕೈಯಲ್ಲಿದೆ ಮತ್ತು ಯಾವ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗುವುದರಿಂದ ಸಾಮಾನ್ಯ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ನೆರವಾಗುತ್ತದೆ ಎಂಬುದು ಅರ್ಜಿಯ ಪ್ರಮುಖ ಉದ್ದೇಶವಾಗಿತ್ತು. ಇದನ್ನೂ ಓದಿ: ಅಬಕಾರಿ ಅಧಿಕಾರಿಗಳಿಂದ ಸುಲಿಗೆ ಕೇಸ್ – IPS ಅಧಿಕಾರಿಯ ನಿರೀಕ್ಷಣಾ ಜಾಮೀನು ರದ್ದು
ಮೊಯಿತ್ರಾ ಪರ ವಕೀಲ ಪ್ರಶಾಂತ್ ಭೂಷಣ್ ಅವರು, ಹಣಕಾಸು ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ನೈಜ ಮಾಲೀಕರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಅಗತ್ಯವನ್ನು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದರು. ಆದರೆ, ಅಂತಹ ಬಹಿರಂಗಪಡಿಸುವಿಕೆಗೆ ಕಡ್ಡಾಯಗೊಳಿಸುವ ಅಸ್ತಿತ್ವದಲ್ಲಿರುವ ಕಾನೂನು ವ್ಯವಸ್ಥೆ ಇಲ್ಲದಿರುವುದರಿಂದ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
