– ಕುಸುಮಾವತಿ ವಿರುದ್ಧ ಜನ್ಮ ರಹಸ್ಯ, ದಾಖಲೆ ತಿರುಚಿದ ಆರೋಪ
– ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ಜಾಗ ವಶ
ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ(Soujanya Rape and Murder Case) ಮತ್ತೊಂದು ಸ್ಪೋಟಕ ಬೆಳವಣಿಗೆ ನಡೆದಿದೆ. ಈವರೆಗೂ ಸೌಜನ್ಯಳ ತಾಯಿ ಎಂದು ಬಿಂಬಿಸಿಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿದ್ದ ಕುಸುಮಾವತಿ(Kusumavati) ಅವರು ಸೌಜನ್ಯಳ ಹೆತ್ತ ತಾಯಿಯೇ(Mother) ಅಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಸೌಜನ್ಯಳ ಮನೆ ಬಳಿ ನೆಲೆಸಿರುವ ಕಿಶೋರ್ ಎಂಬುವವರು ಮಂಗಳೂರಿನಲ್ಲಿರುವ(Mangaluru) ವಿಶೇಷ ತನಿಖಾ ತಂಡದ (SIT) ಕಚೇರಿಗೆ ಆಗಮಿಸಿ ಅಧಿಕೃತವಾಗಿ ದೂರು ನೀಡಿದ್ದಾರೆ. ಕುಸುಮಾವತಿ ಅವರ ವಿರುದ್ಧ ವ್ಯಕ್ತಿ ಗುರುತಿನ ವಂಚನೆ, ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಹಾಗೂ ಸರ್ಕಾರಿ ಜಮೀನು ಪಡೆದುಕೊಂಡಿರುವ ಗಂಭೀರ ಆರೋಪಗಳಡಿ ದೂರು ಸಲ್ಲಿಕೆಯಾಗಿದೆ.
ದೂರಿನಲ್ಲಿ ಏನಿದೆ?
ಧರ್ಮಸ್ಥಳ(Dharmasthala) ಗ್ರಾಮದ ಪಾಂಗಳ ನಿವಾಸಿ ಕುಸುಮಾವತಿ ಅವರು “ಕುಸುಮಾವತಿ ಯಾನೆ ಇಂದಿರಾವತಿ” ಎಂದು ಚಂದಪ್ಪ ಗೌಡ ಅವರ ಪತ್ನಿ ಶ್ರೀಮತಿ ಇಂದಿರಾವತಿ ಅವರ ಹೆಸರು ಹಾಗೂ ಗುರುತನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಅಲ್ಲದೆ ಸುಳ್ಳು ಪ್ರಮಾಣಪತ್ರವನ್ನು ಸಲ್ಲಿಸಿ ವ್ಯಕ್ತಿ ಗುರುತಿನ ವಂಚನೆ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 171/1ಪಿ1 (0.40 ಎಕರೆ), 175/ಪಿ1 (0.25 ಎಕರೆ) ಮತ್ತು 171/ಪಿ1 (1.97 ಎಕರೆ) ಮೂಲತಃ ಸರ್ಕಾರಿ ಜಮೀನುಗಳಾಗಿವೆ. ಪ್ರಕರಣ ಸಂಖ್ಯೆ ಎನ್.ಸಿ.ಆರ್.ಸಿ.ಆರ್. 535/1998-99 ರ ಅಡಿಯಲ್ಲಿ ಅಕ್ರಮ-ಸಕ್ರಮ ಯೋಜನೆಯ ಮೂಲಕ ಈ ಜಮೀನುಗಳನ್ನು 2015 ರಲ್ಲಿ “ಶ್ರೀಮತಿ ಇಂದಿರಾವತಿ ಕೋಂ ಚಂದಪ್ಪ ಗೌಡ” ಎಂಬುವವರಿಗೆ ಮಂಜೂರಾಗಿದೆ.
ದಾಖಲೆಗಳಲ್ಲಿ ಇಂದಿರಾವತಿ ಹೆಸರಿನಲ್ಲಿ ಭೂಮಿ ಮಂಜೂರಾಗಿದ್ದರೂ, ವಾಸ್ತವದಲ್ಲಿ ಆ ಜಮೀನುಗಳು ಕುಸುಮಾವತಿ ಅವರ ಸ್ವಾಧೀನದಲ್ಲಿವೆ. ಪ್ರಸ್ತುತ ಪಾಂಗಳ ಪರಿಸರದಲ್ಲಿ ಇಂದಿರಾವತಿ ಎಂಬ ಹೆಸರಿನ ಯಾವುದೇ ಮಹಿಳೆ ವಾಸವಾಗಿಲ್ಲದಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿದೆ.ಇಂದಿರಾವತಿ ಎಲ್ಲಿದ್ದಾರೆ? ಅವರು ಜೀವಂತವಿದ್ದಾರಾ?ಕಾಣೆಯಾಗಿದ್ದಾರಾ? ಕಾಣೆಯಾಗಿದ್ದರೆ ದೂರು ದಾಖಲಾಗಿದ್ಯಾ ಎಂಬ ಪ್ರಶ್ನೆ ಮೂಡುತ್ತದೆ. ವಾಸ್ತವವಾಗಿ ಸೌಜನ್ಯಳು ಕುಸುಮಾವತಿ ಅವರ ಹೆತ್ತ ಮಗಳೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇಂದಿರಾವತಿ ಹೆಸರಿನಲ್ಲಿ 1999 ರಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಯಾರು? 2015 ರಲ್ಲಿ ಮಂಜೂರಾತಿ ಪಡೆದ ವ್ಯಕ್ತಿ ಯಾರು? ಕುಸುಮಾವತಿ ಅವರು ಕೇವಲ ಆಸ್ತಿ ಪಡೆಯುವ ಉದ್ದೇಶದಿಂದಲೇ ಇಂದಿರಾವತಿ ಹೆಸರನ್ನು “ಯಾನೆ” ಎಂದು ಸೇರಿಸಿಕೊಂಡಿದ್ದಾರಾ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ.
ಸೌಜನ್ಯ ಪ್ರಕರಣದ ಮರು ತನಿಖೆಗೆ ಸರ್ಕಾರವು 2026ರ ಸೆಪ್ಟೆಂಬರ್ 24ರಂದು ವಿಶೇಷ ತನಿಖಾ ತಂಡವನ್ನು ರಚಿಸುವ ಮುನ್ನವೇ, ಅಂದರೆ 2026ರ ಏಪ್ರಿಲ್ 10ರಂದೇ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ಇದೀಗ ದಾಖಲೆಗಳ ಪರಿಶೀಲನೆ ವೇಳೆ ಗಂಭೀರ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ಇದು ಕೇವಲ ಕಂದಾಯ ವಿಷಯವಾಗಿರದೆ ಮಹಿಳೆಯೊಬ್ಬರ ನಾಪತ್ತೆ ಮತ್ತು ಗುರುತಿನ ವಂಚನೆಗೆ ಸಂಬಂಧಿಸಿರುವುದರಿಂದ ಎಸ್ಐಟಿ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಸೌಜನ್ಯ ಕೇಸ್| ಎಸ್ಐಟಿ ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ
ನಮೂನೆ 53ರ ಪ್ರಕಾರ ಇಂದಿರಾವತಿ ಅವರ ಜನ್ಮ ವರ್ಷ ಸುಮಾರು 1967 ಆಗಿದ್ದು, ಆಧಾರ್ ಪ್ರಕಾರ ಕುಸುಮಾವತಿ ಅವರ ಜನ್ಮ ವರ್ಷ 1978 ಆಗಿದೆ. ಇಬ್ಬರ ನಡುವೆ ಸುಮಾರು 11 ವರ್ಷಗಳ ವ್ಯತ್ಯಾಸವಿದ್ದು, ಇಬ್ಬರೂ ಒಬ್ಬರೇ ವ್ಯಕ್ತಿಯಾಗಿರಲು ಸಾಧ್ಯವಿಲ್ಲ. ಅಲ್ಲದೆ, ಪಡಿತರ ಚೀಟಿಯಲ್ಲಿ ಕುಸುಮಾವತಿ ಅವರ ಜನ್ಮ ವರ್ಷ 1981 ಎಂದು ದಾಖಲಾಗಿದ್ದು, ಆಧಾರ್ ದಾಖಲೆಗೂ ಇದಕ್ಕೂ ತಾಳೆಯಾಗುತ್ತಿಲ್ಲ. ಇಬ್ಬರ ವಿವರಗಳು ಪ್ರತ್ಯೇಕವಾಗಿದ್ದರೂ, ಕುಸುಮಾವತಿ ಅವರು “ಕುಸುಮಾವತಿ ಯಾನೆ ಇಂದಿರಾವತಿ” ಎಂದು ತಾನು ಮತ್ತು ಇಂದಿರಾವತಿ ಒಬ್ಬರೇ ಎಂಬುದಾಗಿ ಸುಳ್ಳು ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
2008ರ ಪಡಿತರ ಚೀಟಿಯ ಪ್ರಕಾರ ಕುಸುಮಾವತಿ ಅವರ ವಯಸ್ಸು 27 ವರ್ಷವಾಗಿದ್ದು, ಅವರ ಮಕ್ಕಳಾದ ಸೌಜನ್ಯ ಮತ್ತು ಸೌಮ್ಯ ಇಬ್ಬರಿಗೂ 13 ವರ್ಷ ಎಂದು ನಮೂದಾಗಿದೆ. ಇದರ ಪ್ರಕಾರ ಕುಸುಮಾವತಿ ಅವರಿಗೆ ಸುಮಾರು 14 ವರ್ಷವಿದ್ದಾಗಲೇ ಈ ಮಕ್ಕಳು ಜನಿಸಿರಬೇಕಾಗುತ್ತದೆ. ಆದ್ದರಿಂದ ಸೌಜನ್ಯ ಮತ್ತು ಸೌಮ್ಯ ಇವರು ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಬಗ್ಗೆ ಬಲವಾದ ಸಂಶಯ ವ್ಯಕ್ತಪಡಿಸಲಾಗಿದೆ.
ಕೇವಲ ಜಮೀನು ಹಾಗೂ ಆಸ್ತಿಯನ್ನು ಪಡೆಯುವ ಉದ್ದೇಶದಿಂದಲೇ ಇಂದಿರಾವತಿ ಅವರ ಹೆಸರನ್ನು ತಮ್ಮ ಹೆಸರಿಗೆ ಬಳಸಿಕೊಂಡಿದ್ದಾರೆಯೇ, ಈ ಜಮೀನಿನ ವಿವಾದಕ್ಕಾಗಿ ಸೌಜನ್ಯಳ ಕೊಲೆಯಾಯಿತೇ ಹಾಗೂ ಈ ಎಲ್ಲಾ ಬೆಳವಣಿಗೆಗಳಲ್ಲಿ ತಂದೆ ಚಂದಪ್ಪ ಗೌಡ ಮತ್ತು ವಿಠಲ ಗೌಡರ ಪಾತ್ರವೇನು ಎಂಬುದರ ಬಗ್ಗೆ ಕೂಲಂಕಷ ತನಿಖೆಯಾಗಬೇಕಿದೆ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ. ಕುಸುಮಾವತಿಯವರು ಜನರ ಸಹಾನುಭೂತಿ ಪಡೆಯುವ ಸಲುವಾಗಿಯೇ ತಾಯಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿದೆ.
ಚಂದಪ್ಪ ಗೌಡರ ಪತ್ನಿ ಇಂದಿರಾವತಿ ಅವರು ಸದ್ಯ ಎಲ್ಲಿದ್ದಾರೆ, ಅವರು ಜೀವಂತವಾಗಿದ್ದಾರೆಯೇ ಅಥವಾ ಮರಣ ಹೊಂದಿದ್ದಾರೆಯೇ? ಸೌಜನ್ಯ ವಾಸ್ತವವಾಗಿ ಯಾರ ಮಗಳು ಎಂಬುದನ್ನು ಆಸ್ಪತ್ರೆ, ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಹಾಗೂ ಅಗತ್ಯಬಿದ್ದರೆ ವೈಜ್ಞಾನಿಕ (ಡಿಎನ್ಎ) ಪರೀಕ್ಷೆಯ ಮೂಲಕ ಪತ್ತೆಹಚ್ಚಬೇಕು. ಹಾಗೆಯೇ ಸುಳ್ಳು ದಾಖಲೆ ಸೃಷ್ಟಿ, ಗುರುತಿನ ವಂಚನೆ ಹಾಗೂ ಫೋರ್ಜರಿ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಕಿಶೋರ್ ಅವರು ಎಸ್ಐಟಿಗೆ ಒತ್ತಾಯಿಸಿದ್ದಾರೆ.
