ಬೆಂಗಳೂರು: ಮಾರತ್ತಹಳ್ಳಿಯಲ್ಲಿ (Marathahalli Kidnap Case) ಯುವತಿ ವಿಚಾರಕ್ಕೆ ಇಬ್ಬರು ಟೆಕ್ಕಿಗಳ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಟೆಕ್ಕಿಗಳಾದ ತರುಣ್ ಮತ್ತು ಮಹೇಂದ್ರ ಎಂಬವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಪಹರಣ ಸಂಬಂಧ 11 ಮಂದಿ ಬಂಧನಕ್ಕೊಳಗಾಗಿದ್ದಾರೆ. ಆಂಧ್ರದ ಮದನಪಲ್ಲಿ ಮೂಲದ ತರುಣ್, ಮಹೇಂದ್ರ, ಮಂಜುನಾಥ್ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದನ್ನೂ ಓದಿ: ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ಸಾವು
ಸ್ನೇಹಿತನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಟೆಕ್ಕಿ ಮಹೇಂದ್ರ ಮತ್ತು ತರುಣ್ ಮೇಲೆ ಹೊರಿಸಲಾಗಿತ್ತು. ಯುವತಿಗೆ ನ್ಯಾಯ ಕೊಡಿಸಲು ಅಪಹರಣಕ್ಕೆ ಸಂಚು ರೂಪಿಸಲಾಗಿತ್ತು. ಮಹೇಂದ್ರ, ತರುಣ್ ಇಬ್ಬರನ್ನು ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು.
ಮದನಪಲ್ಲಿಯ ಕೆಲವು ಯುವಕರನ್ನ ಸೇರಿಸಿ ಐದು ಬೈಕ್ಗಳಲ್ಲಿ ಬಂದು ಅಪಹರಣ ಮಾಡಲಾಗಿತ್ತು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ನಂತರ ಮಹೇಂದ್ರ ತಂದೆಗೆ ಕರೆ ಮಾಡಿ 10 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ತರುಣ್ ಎಂಬಾತನ ಮೊಬೈಲ್ನಿಂದ ಕರೆ ಮಾಡಿ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಗ್ಯಾಂಗ್ ಬೆದರಿಕೆ ಹಾಕಿತ್ತು.
ಮಹೇಂದ್ರನ ತಂದೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಾಗರಭಾವಿ ಮನೆ ಮೇಲೆ ಪೊಲೀಸರು ದಾಳಿ ಮಾಡಿದರು. ಇಬ್ಬರನ್ನು ಕೂಡಿಟ್ಟು ಹಲ್ಲೆ ನಡೆಸುತ್ತಿದ್ದ ಗ್ಯಾಂಗ್ನ ಆರು ಮಂದಿಯನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದರು. ನಂತರ ಉಳಿದ ಐವರನ್ನು ಬಂಧಿಸಿದರು. ಇದನ್ನೂ ಓದಿ: ಇಸ್ರೇಲ್ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಾಪತ್ತೆ
ಗಾಲೆಟಿ ರಾಜಕುಮಾರ್, 21 ವರ್ಷದ ಮಹಿಳೆ, ಮರಿಪಾಟಿ ಮಂಜುನಾಥ್, ಚಿನಿಗೆಪಲ್ಲಿ ಲೋಕನಾಥ್, ಬಂಡ್ಲಪಲ್ಲಿ ಸುಹೇಲ್, ಗಂಗಾರೆಡ್ಡಿ ಗಾರಿ ನರೇಂದ್ರ ರೆಡ್ಡಿ, ಶಿವಂ ಸುಬ್ರಹ್ಮಣ್ಯಂ, ಸಲೀಂ ಪಾಷಾ, ನಯಿಂಪಾಷ, ಶಬಾಜ್, ಗಾಲಿರಾಜೇಶ್ ಬಂಧಿತ ಆರೋಪಿಗಳು. ಮನ್ಸೂರು ಹಾಗೂ ತಬ್ರೀಜ್ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಅಪಹರಣ, ಸುಲಿಗೆ ಪ್ರಕರಣಗಳ ತನಿಖೆ ನಡೆಯುತ್ತಿದೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
