ಟೆಲ್ ಅವೀವ್: ಇಸ್ರೇಲ್ನಲ್ಲಿ(Isreal Election) ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯು ದೇಶವನ್ನು ತೀವ್ರ ರಾಜಕೀಯ ಅನಿಶ್ಚಿತತೆಗೆ ತಳ್ಳಿದೆ. ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ಯಾರೊಬ್ಬರಿಗೂ ದಕ್ಕದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಹಾಗೂ ಅವರ ಮುಖ್ಯ ಪ್ರತಿಸ್ಪರ್ಧಿ, ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸನ್ಕೋಟ್ ಇಬ್ಬರೂ ಬೆಂಬಲಿಗರ ಎದುರು ನಿಂತು ಆರಂಭದಲ್ಲಿ ವಿಜಯದ ಘೋಷಣೆ ಮಾಡಿದ್ದರೂ, ಮತ ಎಣಿಕೆ ಮುಂದುವರಿದಂತೆ ಚಿತ್ರಣ ಸಂಪೂರ್ಣ ಬದಲಾಗಿದೆ.
ಪ್ರಾಥಮಿಕ ಫಲಿತಾಂಶಗಳ ಪ್ರಕಾರ, 120 ಸದಸ್ಯ ಬಲದ ನೆಸ್ಸೆಟ್ನಲ್ಲಿ (ಇಸ್ರೇಲ್ ಸಂಸತ್ತು) ಸರ್ಕಾರ ರಚಿಸಲು 61 ಸ್ಥಾನಗಳ ಅಗತ್ಯವಿದೆ. ಆದರೆ ನೆತನ್ಯಾಹು ನೇತೃತ್ವದ ಲಿಕುಡ್ ಬಣ 53 ಸ್ಥಾನಗಳನ್ನು ಗಳಿಸಿದ್ದರೆ, ಐಸನ್ಕೋಟ್ ನೇತೃತ್ವದ ‘ಯಶಾರ್’ ಪಕ್ಷದ ವಿರೋಧ ಪಕ್ಷಗಳ ಮೈತ್ರಿಕೂಟ 48 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಅರಬ್ ನೇತೃತ್ವದ ಪಕ್ಷಗಳು ದಾಖಲೆಯ 19 ಸ್ಥಾನಗಳನ್ನು ಬಾಚಿಕೊಂಡಿವೆ.
ಈ ಫಲಿತಾಂಶ ಕೇವಲ ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನಷ್ಟೇ ಅಲ್ಲದೆ ಇಸ್ರೇಲ್ನಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆಯೇ ಅಥವಾ ದೇಶ ಮತ್ತೊಂದು ಚುನಾವಣೆಯನ್ನು ಎದುರಿಸಬೇಕಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮತ ಎಣಿಕೆ ಪೂರ್ಣಗೊಳ್ಳುವ ಮೊದಲೇ ಇಬ್ಬರೂ ನಾಯಕರು ಭಾಷಣ ಮಾಡಿದ್ದು ಅನಿಶ್ಚಿತತೆಗೆ ಕನ್ನಡಿ ಹಿಡಿದಿದೆ. ಐಸನ್ಕೋಟ್ ಈ ಫಲಿತಾಂಶವನ್ನು ನೆತನ್ಯಾಹು ನಾಯಕತ್ವದ ವಿರುದ್ಧ ಮತದಾರರು ನೀಡಿದ ತೀರ್ಪು ಎಂದು ಬಣ್ಣಿಸಿದ್ದಾರೆ. ಇತ್ತ ನೆತನ್ಯಾಹು ತಮ್ಮ ಮಿತ್ರಪಕ್ಷಗಳ ಬೆಂಬಲಕ್ಕೆ ನಿಂತು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಲಪಂಥೀಯ ರಾಷ್ಟ್ರೀಯತಾವಾದಿ ಸರ್ಕಾರ ರಚಿಸುವುದಾಗಿ ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಇರಾನ್ ಮೇಲೆ ಜಂಟಿ ದಾಳಿಗೆ ಒಪ್ಪಿಗೆ ಕೇಳಿದ ನೆತನ್ಯಾಹು – ಬೇಡವೇ ಬೇಡ ಎಂದ ಟ್ರಂಪ್!
ಈಗ ಎಲ್ಲರ ಕಣ್ಣು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರ ಮೇಲಿದೆ. ಅಂತಿಮ ಫಲಿತಾಂಶ ಪ್ರಮಾಣೀಕೃತಗೊಂಡ ಬಳಿಕ, ಅವರು ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರ ರಚಿಸಲು ಯಾರಿಗೆ ಅರ್ಹತೆಯಿದೆ ಎಂಬುದನ್ನು ತೀರ್ಮಾನಿಸಲಿದ್ದಾರೆ. ಅತಿ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೇ ಅವಕಾಶ ನೀಡಬೇಕು ಎಂಬ ನಿಯಮವಿಲ್ಲದ ಕಾರಣ ರಾಜಕೀಯ ನಾಯಕರು ಹೊಂದಾಣಿಕೆ ಪ್ರದರ್ಶಿಸಿ ಮರುಚುನಾವಣೆಯನ್ನು ತಪ್ಪಿಸಬೇಕು ಎಂದು ಅಧ್ಯಕ್ಷರು ಈಗಾಗಲೇ ಸಲಹೆ ನೀಡಿದ್ದಾರೆ.
ಅರಬ್ ಪಕ್ಷಗಳ ಸಾಧನೆ
ಈ ಚುನಾವಣೆಯ ಪ್ರಮುಖ ತಿರುವು ಎಂದರೆ ಅರಬ್ ನೇತೃತ್ವದ ಪಕ್ಷಗಳ ಐತಿಹಾಸಿಕ ಸಾಧನೆ. ಜಾಯಿಂಟ್ ಲಿಸ್ಟ್ ಮತ್ತು ರಾ’ಅಮ್ ಒಟ್ಟಾಗಿ 19 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ಲಭಿಸಿದೆ.
ಇಸ್ರೇಲ್ನ ಒಟ್ಟು ಜನಸಂಖ್ಯೆಯಲ್ಲಿ ಅರಬ್ ನಾಗರಿಕರು ಸುಮಾರು ಶೇ.20 ರಷ್ಟಿದ್ದಾರೆ. ಸೈದ್ಧಾಂತಿಕವಾಗಿ ನೆತನ್ಯಾಹು ಅವರನ್ನು ಅಧಿಕಾರದಿಂದ ದೂರವಿಡಲು ಐಸನ್ಕೋಟ್ಗೆ ಈ ಸಂಖ್ಯೆ ನೆರವಾಗಬಹುದಾದರೂ, ಪ್ರಾಯೋಗಿಕವಾಗಿ ಇದು ಅತ್ಯಂತ ಕಠಿಣ. ಝಿಯೋನಿಸ್ಟ್ ವಿರೋಧ ಪಕ್ಷದ ಮುಖ್ಯಸ್ಥನಾಗಿ ಗುರುತಿಸಿಕೊಂಡಿರುವ ಐಸನ್ಕೋಟ್ ಅರಬ್ ಪಕ್ಷಗಳ ಜೊತೆ ಕೈಜೋಡಿಸಲು ಮುಂದಾಗುತ್ತಾರೆಯೇ ಎಂಬ ಕುತೂಹಲ ಮೂಡಿಸಿದೆ.
ಮತ ಅಕ್ರಮ
ಫಲಿತಾಂಶ ಅತಂತ್ರವಾಗುತ್ತಿದ್ದಂತೆ, ಲಿಕುಡ್ ಪಕ್ಷವು ಚುನಾವಣಾ ಅಕ್ರಮದ ಆರೋಪ ಹೊರಿಸಿದೆ. ಅರಬ್ ಪ್ರಾಬಲ್ಯದ ಮತಗಟ್ಟೆಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಚುನಾವಣೆಯನ್ನು ಕದಿಯಲಾಗಿದೆ ಎಂದು ಆರೋಪಿಸಿದೆ. ಪೊಲೀಸ್, ಶಿನ್ ಬೆಟ್ ಹಾಗೂ ಕೇಂದ್ರ ಚುನಾವಣಾ ಸಮಿತಿಯಿಂದ ತನಿಖೆಗೆ ಒತ್ತಾಯಿಸಿದೆ. ಹಣ ಹಂಚಿಕೆ, ನಕಲಿ ಮತದಾನ, ಸಿಬ್ಬಂದಿಗೆ ಬೆದರಿಕೆ ಮುಂತಾದ ನೂರಾರು ಪುರಾವೆಗಳನ್ನು ಸಲ್ಲಿಸಿರುವುದಾಗಿ ಪಕ್ಷ ಹೇಳಿಕೊಂಡಿದೆ. ಆದರೆ, ಕೇಂದ್ರ ಚುನಾವಣಾ ಸಮಿತಿಯು ಈ ಆರೋಪಗಳಲ್ಲಿ ವ್ಯಾಪಕ ಅಕ್ರಮದ ಯಾವುದೇ ನೈಜ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದು, ನಿಯಮಾನುಸಾರ ದೂರುಗಳ ಪರಿಶೀಲನೆ ನಡೆಸುತ್ತಿದೆ.
ಮುಂದೇನು?
ಸೈನಿಕರು ಮತ್ತು ರಾಜತಾಂತ್ರಿಕರನ್ನು ಒಳಗೊಂಡ ಅಂಚೆ ಮತಗಳ ಎಣಿಕೆ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಅಧಿಕೃತ ಮತ್ತು ಅಂತಿಮ ಫಲಿತಾಂಶ ಹೊರಬರಲು ಮತ್ತಷ್ಟು ಸಮಯ ಹಿಡಿಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅಲ್ಲಿಯವರೆಗೆ ಇಸ್ರೇಲ್ ರಾಜಕೀಯದ ಈ ಜಿದ್ದಾಜಿದ್ದಿ ಮುಂದುವರಿಯಲಿದೆ.
