ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಚೇರಿ ಹಾಗೂ ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಲಾದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ನಾಗ್ಪುರ(Nagpura) ವಿಭಾಗದ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್(Congress) ಸತತ ಎರಡನೇ ಬಾರಿಗೆ ಜಯ ದಾಖಲಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಸುದೀರ್ಘ ಮತ ಎಣಿಕೆ ಪ್ರಕ್ರಿಯೆಯ ನಂತರ, ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಗೋವಿಂದರಾವ್ ವಂಜಾರಿ(Abhijit Govindrao Wanjarri) ಅವರು ಬಿಜೆಪಿಯ ಸುಧಾಕರ್ ಕೊಹ್ಲೆ ಅವರನ್ನು 3,271 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ತವರು ನಗರ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಲೋಕಸಭಾ ಕ್ಷೇತ್ರವಾಗಿರುವ ನಾಗ್ಪುರದಲ್ಲಿ ಕಾಂಗ್ರೆಸ್ ಸಾಧಿಸಿರುವ ಈ ಗೆಲುವು ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡಿದೆ. ಆರ್ಎಸ್ಎಸ್ ಕೇಂದ್ರ ಕಚೇರಿಯಿರುವ ಈ ನೆಲದಲ್ಲಿ ಬಿಜೆಪಿ ಪ್ರಬಲ ರಾಜಕೀಯ ಹಿಡಿತ ಹೊಂದಿದ್ದರೂ, ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ 4 ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ದೊರೆತ ಮೊದಲ ಗೆಲುವು ಇದಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಅಧಿಕಾರದಲ್ಲಿರೂ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿಲ್ಲ – ನಿತಿನ್ ನಬಿನ್ ಟೀಕೆ
ವಕೀಲ ಹಾಗೂ ಶಿಕ್ಷಣತಜ್ಞರಾಗಿರುವ ಅಭಿಜಿತ್ ವಂಜಾರಿ ಅವರು 2020ರಲ್ಲೂ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ಒಳಗೊಂಡ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಎರಡನೇ ಬಾರಿಗೆ ಪರಿಷತ್ ಪ್ರವೇಶಿಸಿದ್ದಾರೆ. ಕಣದಲ್ಲಿದ್ದ ಒಟ್ಟು 38 ಅಭ್ಯರ್ಥಿಗಳಲ್ಲಿ ವಂಜಾರಿ ಹಾಗೂ ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.
ಗೆಲುವಿನ ನಂತರ ಮಾತನಾಡಿದ ವಂಜಾರಿ, ಬಿಜೆಪಿಯು ತನ್ನ ಸಂಪೂರ್ಣ ಶಕ್ತಿ ಹಾಗೂ ಪ್ರಮುಖ ನಾಯಕರನ್ನು ನಾಗ್ಪುರದಲ್ಲಿ ನಿಯೋಜಿಸಿದ್ದರೂ ಮತದಾರರು ನಮ್ಮ ಕೈಹಿಡಿದಿದ್ದಾರೆ. ಎಂವಿಎ ಮೈತ್ರಿಕೂಟದ ಒಗ್ಗಟ್ಟು ಮತ್ತು ಪ್ರಚಾರಕ್ಕೆ ಕೈಜೋಡಿಸಿದ 48 ಸಂಘಟನೆಗಳ ಕಾರ್ಯಕರ್ತರಿಗೆ ಈ ಗೆಲುವು ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮತ ಎಣಿಕೆ ನಡೆದ ಮಾಂಕಾಪುರ ಒಳಾಂಗಣ ಕ್ರೀಡಾಂಗಣದ ಹೊರಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಾತಾವರಣ ಉದ್ವಿಗ್ನಗೊಂಡಿತ್ತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಮಹಾರಾಷ್ಟ್ರ ವಿಧಾನ ಪರಿಷತ್ತಿನ 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ‘ಮಹಾ ವಿಕಾಸ್ ಅಘಾಡಿ’ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಮತ್ತು ಶಿವಸೇನೆ ತಲಾ ಒಂದು ಸ್ಥಾನ ಪಡೆದುಕೊಂಡಿವೆ. ಕರ್ನಾಟಕದ ಪರಿಷತ್ ಚುನಾವಣೆಯಲ್ಲಿ ಆಡಳಿತದಲ್ಲಿದ್ದರೂ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ಗೆ, ನಾಗ್ಪುರದ ಈ ಜಯ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಚೈತನ್ಯ ತಂದಿದೆ.
