ಬೆಂಗಳೂರು: ಡಿಆರ್ಡಿಒ (DRDO) ಇಲಾಖೆಯ ಹಿರಿಯ ವಿಜ್ಞಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ನಗರದ ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಘಟನೆ ನಡೆದಿದ್ದು, ಎಡಿಎ ಗ್ರೇಡ್ ಎಫ್ನ ವಿಜ್ಞಾನಿ ಶರದ್ ಕಟಿಯಾರ್ (47) ಆತ್ಮಹತ್ಯೆ ಮಾಡಿಕೊಂಡವರು.
ಶರದ್ ಅವರು ವಾಸವಾಗಿದ್ದ ನಾಲ್ಕನೇ ಅಂತಸ್ತಿನ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿಜ್ಞಾನಿ ಶರದ್ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆತ್ಮಹತ್ಯೆ ದಿನವೂ ಕೂಡ ಚಿಕಿತ್ಸೆ ಪಡೆದು ಬಂದಿದ್ದರು. 21ರ ಸಂಜೆ 7:30ರ ಸುಮಾರಿಗೆ ಅಪಾರ್ಟ್ಮೆಂಟ್ನ ಮೆಟ್ಟಿಲಿಂದ ಜಿಗಿದಿದ್ದರು.
ಗಂಭೀರ ಗಾಯಗೊಂಡಿದ್ದ ಶರದ್ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ವೈಟ್ಫೀಲ್ಡ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
