ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗಲೋ ಅಥವಾ ಇತರೆ ಗಣ್ಯರನ್ನು ಭೇಟಿಯಾದಾಗಲೋ ಕೈಯಲ್ಲಿ ಹಿಡಿದ ಐಫೋನ್ (iPhone) ಕ್ಯಾಮೆರಾ ಕಣ್ಣುಗಳಿಗೆ ಬಿದ್ದಿರಬಹುದು. ಆದರೆ, ಅದು ಕೇವಲ ಹೊರಜಗತ್ತಿನ ನೋಟವಷ್ಟೇ. ದೇಶದ ಭದ್ರತೆ, ರಕ್ಷಣಾ ತಂತ್ರಗಳು ಹಾಗೂ ಅತ್ಯಂತ ಗೌಪ್ಯ ರಾಜತಾಂತ್ರಿಕ ವಿಷಯಗಳ ಚರ್ಚೆಗೆ ಬಂದಾಗ ಆ ಐಫೋನ್ ಕೇವಲ ಮೂಕಪ್ರೇಕ್ಷಕ. ಏಕೆಂದರೆ, ಭಾರತದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿಯವರ ಪ್ರತಿಯೊಂದು ರಹಸ್ಯ ಸಂಭಾಷಣೆಗೆ ರಕ್ಷಣಾ ಕವಚವಾಗಿ ನಿಂತಿರುವುದು ಜಗತ್ತಿನ ಯಾವುದೇ ಹ್ಯಾಕರ್ ಮುಟ್ಟಲಾಗದ ಭಾರತದ ಸ್ವದೇಶಿ ಕಮಾಂಡ್ ನೆಟ್ವರ್ಕ್—ʻRAX’ (Restricted Access Exchange) ಫೋನ್!
ಇಂದಿನ ಡಿಜಿಟಲ್(Digital) ಯುಗದಲ್ಲಿ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳ ರಕ್ಷಣೆ ಅತ್ಯಂತ ನಿರ್ಣಾಯಕ. ವಿಶೇಷವಾಗಿ ದೇಶದ ಪ್ರಮುಖ ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಉನ್ನತ ಸರ್ಕಾರಿ ಅಧಿಕಾರಿಗಳಿಗೆ ಸುರಕ್ಷಿತ ಸಂವಹನ ವ್ಯವಸ್ಥೆ ಅನಿವಾರ್ಯ. ಈ ನಿಟ್ಟಿನಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಅತ್ಯಾಧುನಿಕ, ಅತ್ಯುನ್ನತ ಭದ್ರತೆಯ ಸಾಧನವೇ ‘RAX ಫೋನ್’. ಹೀಗಾಗಿ ಇಲ್ಲಿ ಈ ಫೋನಿನ ವಿಶೇಷತೆ? ಇತ್ಯಾದಿ ವಿವರಗಳನ್ನು ನೀಡಲಾಗಿದೆ.
ಏನಿದು RAX ಫೋನ್?
RAX ಎಂದರೆ ರೆಸ್ಟ್ರಿಕ್ಟೆಡ್ ಆಕ್ಸೆಸ್ ಎಕ್ಸ್ಚೇಂಜ್ (Restricted Access Exchange). ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಡಿ ಕಾರ್ಯನಿರ್ವಹಿಸುವ ಸಿ-ಡಾಟ್ (C-DoT – Centre for Development of Telematics) ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ವರ್ಗೀಕೃತ (Classified) ಹಾಗೂ ರಹಸ್ಯ ಸರ್ಕಾರಿ ಮಾಹಿತಿಗಳು ಸೋರಿಕೆಯಾಗದಂತೆ, ಟ್ರ್ಯಾಕಿಂಗ್ ಅಥವಾ ಹ್ಯಾಕಿಂಗ್ಗೆ ಒಳಗಾಗದಂತೆ ತಡೆಯುವುದು ಇದರ ಪ್ರಮುಖ ಉದ್ದೇಶ.
1980 ರ ದಶಕದಲ್ಲಿ C-DOT ಸಂಸ್ಥೆಯು ಭಾರತದ ದೂರದ ಹಳ್ಳಿಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಲು `Rural Automatic Exchange’ (RAX) ಎಂಬ ಡಿಜಿಟಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತ್ತು. ಇದೇ ಸುರಕ್ಷಿತ ತಂತ್ರಜ್ಞಾನವನ್ನು ಕಾಲಾನಂತರದಲ್ಲಿ ದೇಶದ ಉನ್ನತ ಅಧಿಕಾರಿಗಳ ಗುಪ್ತ ಸಂವಹನಕ್ಕಾಗಿ Restricted Access Exchange (RAX) ಆಗಿ ಮಾರ್ಪಡಿಸಲಾಯಿತು. ಇದು ಆರಂಭದಲ್ಲಿ ಲ್ಯಾಂಡ್ಲೈನ್ ನೆಟ್ವರ್ಕ್ ಆಗಿತ್ತು, ಈಗ ಇದನ್ನು ಅತ್ಯಾಧುನಿಕ ಮೊಬೈಲ್ ಸಾಧನಗಳಿಗೂ ವಿಸ್ತರಿಸಲಾಗಿದೆ.
ಫೋನ್ನ ಪ್ರಮುಖ ವೈಶಿಷ್ಟ್ಯಗಳು:
ಸಂವಹನವು ಡಿವೈಸ್ನ ಹಂತದಲ್ಲೇ ಸಂಪೂರ್ಣ ಎನ್ಕ್ರಿಪ್ಟ್ ಆಗುವುದರಿಂದ, ಕರೆಗಳನ್ನು ಟ್ಯಾಪ್ ಮಾಡಲು ಅಥವಾ ನಡುವೆ ಕದಿಯಲು ಸಾಧ್ಯವೇ ಇಲ್ಲ. ಅಧಿಕೃತ ವ್ಯಕ್ತಿಯ ಬೆರಳಚ್ಚು ಸ್ಕ್ಯಾನ್ ಇಲ್ಲದೆ ಫೋನ್ ತೆರೆಯಲು ಅಥವಾ ಕರೆ ಮಾಡಲು ಸಾಧ್ಯವಿಲ್ಲ.ಸೆಕ್ಯೂರ್ ಕರೆ ನಡೆಯುತ್ತಿರುವಾಗ ಎದುರು ಭಾಗದಲ್ಲಿರುವ ವ್ಯಕ್ತಿಯ ನೈಜ ಚಿತ್ರ (Live Picture) ಪರದೆಯ ಮೇಲೆ ಮೂಡುತ್ತದೆ. ಇದರಿಂದ ಬೇರೆ ಯಾರೂ ಆ ಜಾಗದಲ್ಲಿ ಕುಳಿತು ಮಾತನಾಡಲು ಸಾಧ್ಯವಿಲ್ಲ.
ಈ ಫೋನ್ಗಳು ಕಾರ್ಯನಿರ್ವಹಿಸಲು ದೆಹಲಿಯಲ್ಲಿ ಪ್ರತ್ಯೇಕವಾದ, ಅತ್ಯಂತ ಸುರಕ್ಷಿತವಾದ ಕೇಂದ್ರೀಯ ಎಕ್ಸ್ಚೇಂಜ್ (ಸರ್ವರ್) ವ್ಯವಸ್ಥೆ ಇದೆ. ಈ ಜಾಲವನ್ನು ಭಾರತದ ಪ್ರಮುಖ ತಾಂತ್ರಿಕ ಇಂಟೆಲಿಜೆನ್ಸ್ ಸಂಸ್ಥೆಯಾದ NTRO (National Technical Research Organisation) ಮತ್ತು ಐಟಿ ಸಚಿವಾಲಯಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ. ಈ ಸಂವಹನಕ್ಕೆ ಸರ್ಕಾರವೇ ಪ್ರತ್ಯೇಕವಾಗಿ ಕಾಯ್ದಿರಿಸಿರುವ ಉಪಗ್ರಹ ತರಂಗಾಂತರಗಳು (Military Satellites) ಮತ್ತು ಭೂಗತವಾಗಿ ಹರಡಿರುವ ಅತ್ಯಂತ ಸುರಕ್ಷಿತ ‘ಡಾರ್ಕ್ ಫೈಬರ್’ ಒಬ್ಟಿಕಲ್ ಕೇಬಲ್ ಲೈನ್ಗಳನ್ನು ಬಳಸಲಾಗುತ್ತದೆ. ಹಾಗಾಗಿ ಸಾರ್ವಜನಿಕ ಇಂಟರ್ನೆಟ್ ಅಥವಾ ಮೊಬೈಲ್ ಟವರ್ಗಳ ಮೂಲಕ ಈ ಡೇಟಾ ಹಾದುಹೋಗುವುದಿಲ್ಲ.
ಈ ಫೋನ್ಗಳಲ್ಲಿ ಯಾವುದೇ ಸಾಮಾನ್ಯ ಆ್ಯಪ್ಗಳಿರುವುದಿಲ್ಲ. ಇದರಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಿಲ್ಲ. ಕೇವಲ ಧ್ವನಿ ಕರೆ (Voice Call) ಮತ್ತು ಸುರಕ್ಷಿತ ಸಂದೇಶಗಳಿಗೆ (Encrypted Messages) ಮಾತ್ರ ಇದನ್ನು ವಿನ್ಯಾಸಗೊಳಿಸಲಾಗಿದೆ.
ಸಾಮಾನ್ಯ ಫೋನ್ಗಳನ್ನು ಜಿಪಿಎಸ್ ಅಥವಾ ಟವರ್ ಸಿಗ್ನಲ್ ಮೂಲಕ ಟ್ರ್ಯಾಕ್ ಮಾಡಬಹುದು. ಆದರೆ RAX ಸಾಧನಗಳಲ್ಲಿ ಲೊಕೇಶನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿರುತ್ತದೆ. ಇದರಿಂದಾಗಿ ದೇಶದ ಪ್ರಧಾನಿ ಅಥವಾ ಸೇನಾ ಮುಖ್ಯಸ್ಥರು ಎಲ್ಲಿದ್ದಾರೆ ಎಂಬುದನ್ನು ಉಪಗ್ರಹಗಳ ಮೂಲಕವೂ ಪತ್ತೆಹಚ್ಚಲು ವಿದೇಶಿ ಗೂಢಚಾರ ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ
RAX ಫೋನ್ ಮಿಲಿಟರಿ ತರಂಗಾಂತರಗಳಲ್ಲಿ (Military Frequency Bands) ಕಾರ್ಯನಿರ್ವಹಿಸುತ್ತದೆ. ಈ ಫೋನ್ನಿಂದ ಮಾಡುವ ಕರೆಗಳನ್ನು ಮೊದಲು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ (Principal Secretary) ಅವರೇ ಸ್ವತಃ ಆರಂಭಿಸುತ್ತಾರೆ. ಸಂಪರ್ಕ ಖಚಿತವಾದ ಬಳಿಕವಷ್ಟೇ ಪ್ರಧಾನಿಯವರಿಗೆ ಹಸ್ತಾಂತರಿಸಲಾಗುತ್ತದೆ. ಈ ಹೆಚ್ಚುವರಿ ಭದ್ರತಾ ಹಂತವು ಅತ್ಯುನ್ನತ ಮಟ್ಟದ ಗೌಪ್ಯತೆಯನ್ನು ಖಾತರಿಪಡಿಸುತ್ತದೆ.
ಫೋನ್ನ ಬೆಲೆ ಮತ್ತು ನಿರ್ವಹಣಾ ವೆಚ್ಚ:
ರಾಷ್ಟ್ರೀಯ ಭದ್ರತೆಯ ಕಾರಣದಿಂದ ಅಧಿಕೃತ RAX ಫೋನ್ನ ನಿಖರ ಸಾಧನ ಬೆಲೆಯನ್ನು ಬಹಿರಂಗಪಡಿಸಲಾಗಿಲ್ಲ. ಸರ್ಕಾರವು ಪ್ರತಿಯೊಬ್ಬ ಬಳಕೆದಾರನಿಗೆ ಮಾಸಿಕ ಸುಮಾರು 2500 ರೂ. ನಿರ್ವಹಣಾ ಶುಲ್ಕವನ್ನು ಭರಿಸುತ್ತದೆ.ಇದು ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಸ್ಮಾರ್ಟ್ಫೋನ್ ಅಲ್ಲ. ಅಧಿಕೃತ ಗಣ್ಯರು ಹಾಗೂ ಗೊತ್ತುಪಡಿಸಿದ ಹಿರಿಯ ಅಧಿಕಾರಿಗಳಿಗೆ ಮಾತ್ರ ಇದನ್ನು ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ನೀಡಲಾಗುತ್ತದೆ.
5,000 ಅಧಿಕಾರಿಗಳಿಗೆ ವಿಸ್ತರಣೆ:
ಸರ್ಕಾರಿ ವ್ಯವಹಾರಗಳ ಗೌಪ್ಯತೆ ಕಾಪಾಡಲು ಪ್ರಧಾನಿ ಮೋದಿ ಅವರು RAX ಫೋನ್ ಬಳಕೆದಾರರ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸಲು ಸೂಚಿಸಿದ್ದಾರೆ. ಸಿ-ಡಾಟ್ ಅಭಿವೃದ್ಧಿಪಡಿಸಿರುವ ಹೊಸ ಪೀಳಿಗೆಯ RAX ಫೋನ್ಗಳನ್ನು ನಿರ್ದೇಶಕ (Director) ಮಟ್ಟದ ಅಧಿಕಾರಿಗಳವರೆಗೆ ವಿಸ್ತರಿಸಲಾಗುತ್ತಿದ್ದು, ಶೀಘ್ರದಲ್ಲೇ ಸುಮಾರು 5,000ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಈ ಜಾಲದ ವ್ಯಾಪ್ತಿಗೆ ಬರಲಿದ್ದಾರೆ. ದೇಶದ ಆಂತರಿಕ ಭದ್ರತೆ ಮತ್ತು ಡಿಜಿಟಲ್ ಸಾರ್ವಭೌಮತೆಯನ್ನು ಕಾಪಾಡುವಲ್ಲಿ ‘ಮೇಡ್ ಇನ್ ಇಂಡಿಯಾ’ ತಂತ್ರಜ್ಞಾನದ RAX ಫೋನ್ಗಳು ಅತ್ಯಂತ ವಿಶ್ವಾಸಾರ್ಹ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತಿವೆ.
ಭಾರತದಲ್ಲಿ RAX ಹೆಸರಿನಲ್ಲಿ ಸಾಮಾನ್ಯ ಜನರಿಗಾಗಿ ಕೆಲವು ಬಜೆಟ್ ಸ್ಮಾರ್ಟ್ಫೋನ್ಗಳು ಸಹ ಮಾರುಕಟ್ಟೆಯಲ್ಲಿವೆ (ಉದಾಹರಣೆಗೆ RAX A1 Pro, RAX PM1). ಆದರೆ ಸರ್ಕಾರಿ ಅಧಿಕಾರಿಗಳು ಬಳಸುವ ರಹಸ್ಯ RAX ಸಾಧನಕ್ಕೂ ಮತ್ತು ಈ ಸಾಮಾನ್ಯ ಮೊಬೈಲ್ಗಳಿಗೂ ಯಾವುದೇ ಸಂಬಂಧವಿರುವುದಿಲ್ಲ.
ಫೋನ್ ಕಳೆದುಹೋದರೆ ಏನಾಗುತ್ತದೆ?
ಒಂದೊಮ್ಮೆ ಈ RAX ಫೋನ್ ಕಳೆದುಹೋದರೆ ಅಥವಾ ಯಾರಾದರೂ ಕದ್ದರೆ, ಅದನ್ನು ಬೇರೆಯವರು ಅನ್ಲಾಕ್ ಮಾಡಲು ಸಾಧ್ಯವೇ ಇಲ್ಲ. ಮೂರು ಬಾರಿ ತಪ್ಪು ಬಯೋಮೆಟ್ರಿಕ್ ಅಥವಾ ಪಾಸ್ವರ್ಡ್ ನೀಡಿದರೆ, ಫೋನ್ನಲ್ಲಿರುವ ಸಂಪೂರ್ಣ ಡೇಟಾ ಸ್ವಯಂಚಾಲಿತವಾಗಿ ನಾಶವಾಗುತ್ತದೆ (Remote Wipe out). ಅಲ್ಲದೆ, ಕೇಂದ್ರೀಯ ಸರ್ವರ್ನಿಂದ ಆ ನಿರ್ದಿಷ್ಟ ಹ್ಯಾಂಡ್ಸೆಟ್ನ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗುತ್ತದೆ. ಇದು ಕೇವಲ ಒಂದು ಫೋನ್ ಅಲ್ಲ. ಇದು ಭಾರತ ಸರ್ಕಾರದ ಅತ್ಯಂತ ರಹಸ್ಯ ನಿರ್ಧಾರಗಳು ಮತ್ತು ಸೇನಾ ಯೋಜನೆಗಳನ್ನು ಚರ್ಚಿಸಲು ಬಳಸುವ ಒಂದು ಸುರಕ್ಷಿತ ಡಿಜಿಟಲ್ ಕವಚ.
ಡಿಜಿಟಲ್ ಯುಗದಲ್ಲಿ ಡೇಟಾ ಕಳ್ಳತನ ಮತ್ತು ಸೈಬರ್ ಗೂಢಚರ್ಯೆ ದೇಶದ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವಾಗ, RAX ಫೋನ್ಗಳು ಭಾರತದ ಆಡಳಿತ ಯಂತ್ರಕ್ಕೆ ಅಭೇದ್ಯ ರಕ್ಷಣಾ ಕೋಟೆಯಾಗಿ ನಿಂತಿವೆ. ಮಾರುಕಟ್ಟೆಯಲ್ಲಿ ಎಷ್ಟೇ ಐಷಾರಾಮಿ ಹಾಗೂ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳು ಲಗ್ಗೆಯಿಟ್ಟರೂ, ದೇಶದ ಸಾರ್ವಭೌಮತೆ ಮತ್ತು ಗೌಪ್ಯತೆಯನ್ನು ಕಾಪಾಡುವಲ್ಲಿ ನಮ್ಮದೇ ತಂತ್ರಜ್ಞಾನದ ಸ್ವದೇಶಿ ಸಾಧನವೇ ಸರ್ವಶ್ರೇಷ್ಠ ಎಂಬುದಕ್ಕೆ ಪ್ರಧಾನಿ ಮೋದಿಯವರೇ ಬಳಸುವ ಈ ಭದ್ರತಾ ಜಾಲವೇ ಜ್ವಲಂತ ಸಾಕ್ಷಿ. ಕೇವಲ ಉನ್ನತ ಹುದ್ದೆಗಳಿಗಷ್ಟೇ ಸೀಮಿತವಾಗದೆ ಸಾವಿರಾರು ಪ್ರಮುಖ ಅಧಿಕಾರಿಗಳಿಗೂ ಈ ಭದ್ರತಾ ಕವಚ ವಿಸ್ತರಣೆಯಾಗುತ್ತಿರುವುದು ಭಾರತದ ರಹಸ್ಯ ಸಂವಹನ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲೇ ಬಲಿಷ್ಠ ಹಾಗೂ ಹ್ಯಾಕ್-ಮುಕ್ತವಾಗಿಸಿದೆ.

