– ಮೂಸೆವಾಲಾ, ಟೈಗರ್ ಶ್ರಾಫ್ ಪ್ರಕರಣಗಳಿಂದ ಬಯಲಾದ ಲೋಕಲ್ಶೂಟರ್ಸ್ ದಂಧೆ!
ಇತ್ತೀಚೆಗೆ ದೇಶಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು ಲಾರೆನ್ಸ್ ಬಿಷ್ಣೋಯ್. ಗುಜರಾತ್ನ ಸಾಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ನ ಗ್ಯಾಂಗ್ (Lawrence Bishnoi Gang), ಜೈಲಿನ ಹೊರಗಡೆಯೂ ತನ್ನ ಜಾಲವನ್ನು ಸಕ್ರಿಯವಾಗಿಟ್ಟುಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಲೇ ಇದೆ. ಇತ್ತೀಚೆಗೆ ನಟ ಟೈಗರ್ ಶ್ರಾಫ್ಗೆ ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣವೂ ಇದೇ ಚರ್ಚೆಗೆ ಕಾರಣವಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಕಾರ್ಯವೈಖರಿಯನ್ನು ತನಿಖಾ ಸಂಸ್ಥೆಗಳು ‘ಲೋ ಕಾಸ್ಟ್, ಡಿಸ್ಪೋಸಬಲ್ ಶೂಟರ್’ (ಕಡಿಮೆ ವೆಚ್ಚದ, ಅಗತ್ಯ ಮುಗಿದ ಬಳಿಕ ಕೈಬಿಡಬಹುದಾದ ಶೂಟರ್ಗಳು) ಎಂಬ ಮಾದರಿಯೊಂದಿಗೆ ಹೋಲಿಸಿವೆ.
ಈ ಮಾದರಿಯಲ್ಲಿ ಕಡಿಮೆ ವಯಸ್ಸಿನ, ಅಪರಾಧ ಜಗತ್ತಿನಲ್ಲಿ ಹೆಚ್ಚು ಅನುಭವವಿಲ್ಲದ ಯುವಕರಿಗೆ ಹಣದ ಆಮಿಷವೊಡ್ಡಿ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂಬುದು ತನಿಖೆಯಲ್ಲಿನ ಪ್ರಮುಖ ಅಂಶ. ಕೆಲವೇ ಸಾವಿರ ರೂಪಾಯಿಗಳಿಂದ ಹಿಡಿದು ದೊಡ್ಡ ಮೊತ್ತದ ಹಣ, ಐಷಾರಾಮಿ ಜೀವನ ಮತ್ತು ವಿದೇಶದಲ್ಲಿ ನೆಲೆಸುವ ಅವಕಾಶಗಳ ಆಮಿಷವನ್ನೂ ಒಡ್ಡಲಾಗುತ್ತದೆ ಎನ್ನಲಾಗಿದೆ.
ಅಂದರೆ, ಗ್ಯಾಂಗ್ನ ಪ್ರಮುಖ ವ್ಯಕ್ತಿಗಳು ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಲು ಸುಲಭವಾಗಿ ಬಳಸಿಕೊಳ್ಳಬಹುದಾದ ಯುವಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಗತ್ಯ ಮುಗಿದ ಬಳಿಕ ಅವರಿಂದ ದೂರ ಉಳಿಯುವ ಮೂಲಕ ತಮ್ಮ ಸಂಪರ್ಕದ ಕೊಂಡಿಗಳನ್ನು ಮರೆಮಾಚಲು ಪ್ರಯತ್ನಿಸುತ್ತಾರೆ ಎಂಬುದು ತನಿಖಾ ಸಂಸ್ಥೆಗಳ ಅನುಮಾನ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಮತ್ತು ನಟ ಟೈಗರ್ ಶ್ರಾಫ್ಗೆ ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣಗಳನ್ನು ಈ ಕಾರ್ಯವೈಖರಿಗೆ ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತಿದೆ.
ಆದರೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಈ ‘ಲೋ ಕಾಸ್ಟ್, ಡಿಸ್ಪೋಸಬಲ್ ಶೂಟರ್’ ಮಾದರಿ ಹೇಗೆ ಕಾರ್ಯನಿರ್ವಹಿಸುತ್ತದೆ? ಯುವಕರನ್ನು ಈ ಜಾಲಕ್ಕೆ ಸೇರಿಸಿಕೊಳ್ಳುವುದು ಹೇಗೆ? ಪ್ರಮುಖ ಆರೋಪಿಗಳು ಮತ್ತು ಸ್ಥಳೀಯ ಶೂಟರ್ಗಳ ನಡುವೆ ಸಂಪರ್ಕ ಏರ್ಪಡುವುದು ಹೇಗೆ? ಅನ್ನೋದೇ ಸಸ್ಪೆನ್ಸ್ ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೇ ಮುಂದೆ ಓದಿ…
ಟೈಗರ್ ಶ್ರಾಫ್ ಪ್ರಕರಣದಲ್ಲಿ ಬೆಳಕಿಗೆ ಬಂದ ಅಂಶಗಳೇನು?
ಟೈಗರ್ ಶ್ರಾಫ್ಗೆ (Tiger Shroff) ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣದ ಜವಾಬ್ದಾರಿಯನ್ನು ಅಮೆರಿಕದಲ್ಲಿರುವ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಹೊತ್ತುಕೊಂಡಿದ್ದಾನೆ. ಹರಿಯಾಣ ಮೂಲದ ಅನಿಲ್ ಪಂಡಿತ್ ಪ್ರಸ್ತುತ ಅಮೆರಿಕದಲ್ಲಿದ್ದಾನೆ.
ಈ ಪ್ರಕರಣದಲ್ಲಿ ಅನಿಲ್ ಪಂಡಿತ್ ಯುವ ಶೂಟರ್ಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಹರಿಯಾಣದ ರೇಹಾನ್, ಬಿಹಾರದ ಬೇಗುಸರಾಯ್ನ ಹೃತಿಕ್ ಮತ್ತು ಸೋನಿಪತ್ನ ಫೂಲ್ ಸಿಂಗ್ ಎಂಬ ಮೂವರು ಯುವಕರನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಟೈಗರ್ ಶ್ರಾಫ್ ಹತ್ಯೆಗೆ ಸಂಬಂಧಿಸಿದ ವಾಯ್ಸ್ನೋಟ್ ಕೂಡ ಪತ್ತೆಯಾಗಿದೆ ತನಿಖೆ ವೇಳೆ.
ಇವರಲ್ಲಿ ಕೆಲವರು ಈ ಹಿಂದೆ ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದ್ದವರು. ಇಂತಹ ಯುವಕರಿಗೆ ಸುಮಾರು 35 ಸಾವಿರ ರೂಪಾಯಿ ನೀಡುವ ಆಮಿಷವೊಡ್ಡಲಾಗಿತ್ತು. ಅಲ್ಲದೆ, ಅಮೆರಿಕ ಮತ್ತು ಕೆನಡಾದಲ್ಲಿರುವ ಪ್ರಭಾವಿ ಗ್ಯಾಂಗ್ಸ್ಟರ್ಗಳ ಸಂಪರ್ಕ ಹಾಗೂ ಪ್ರಭಾವದ ಬಗ್ಗೆ ಹೇಳಿ ಅವರನ್ನು ಅಪರಾಧ ಕೃತ್ಯಕ್ಕೆ ಸಿದ್ಧಗೊಳಿಸಲಾಗಿತ್ತು ಅನ್ನೋದು ತನಿಖೆ ವೇಳೆ ಬಯಲಿಗೆ ಬಂದಿತು.
ವರದಿಗಳ ಪ್ರಕಾರ, ಈ ಯುವಕರು ಸುಮಾರು 15 ದಿನಗಳ ಕಾಲ ಮುಂಬೈನಲ್ಲಿ ಬಾಲಿವುಡ್ನ ಪ್ರಮುಖ ನಟರ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ಈ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರಂತಹ ಖ್ಯಾತ ನಟರ ಹೆಸರುಗಳೂ ಇದ್ದವು. ಆದರೆ, ಈ ನಟರಿಗೆ ಬಿಗಿ ಭದ್ರತೆ ಇರುವುದನ್ನು ಗಮನಿಸಿದ ಬಳಿಕ ಅವರು ಬೇರೊಬ್ಬ ನಟನನ್ನ ಗುರಿಯಾಗಿಸಿಕೊಳ್ಳಲು ಮುಂದಾದರು.
ನಂತರ ಸಿನಿಮಾ ಉದ್ಯಮದವರೊಂದಿಗೆ ಸಂಪರ್ಕ ಹೊಂದಿರುವವರಿಂದ ಮಾಹಿತಿ ಸಂಗ್ರಹಿಸಿ, ಯಾರನ್ನು ಸುಲಭವಾಗಿ ಭೇಟಿಯಾಗಬಹುದು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ನಟ ಟೈಗರ್ ಶ್ರಾಫ್ ಅಭಿಮಾನಿಗಳೊಂದಿಗೆ ಸುಲಭವಾಗಿ ಫೋಟೋ ತೆಗೆಸಿಕೊಳ್ಳುತ್ತಾರೆ ಎಂಬ ಮಾಹಿತಿ ಅವರಿಗೆ ದೊರಕಿತ್ತು.
ಇದಲ್ಲದೆ, ಸೆಲೆಬ್ರಿಟಿ ಪಾಪರಾಜಿಗಳ ವಿಡಿಯೊಗಳ ಮೂಲಕ ಟೈಗರ್ ಶ್ರಾಫ್ ಪ್ರತಿದಿನ ಸಂಜೆ ಪುಷ್ಪಾ ಪಾರ್ಕ್ಗೆ ಫುಟ್ಬಾಲ್ ಆಡಲು ತೆರಳುವ ವಿಷಯ ತಿಳಿದುಕೊಂಡಿದ್ದರು.
ನಂತರ ಅವರ ದಿನಚರಿ ಮತ್ತು ಸಂಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ, ಫುಟ್ಬಾಲ್ ಆಡಿ ಹಿಂದಿರುಗುವಾಗ ಅವರೊಂದಿಗೆ ಚಾಲಕ ಮಾತ್ರ ಇರುತ್ತಾನೆ ಎಂಬುದನ್ನು ಗಮನಿಸಿದ ಬಳಿಕ ಗುಂಡಿನ ದಾಳಿ ನಡೆಸಲಾಗಿದೆ.
ಮೂಸೆವಾಲಾ ಹತ್ಯೆ ಪ್ರಕರಣದೊಂದಿಗೆ ಸಾಮ್ಯತೆ
ಟೈಗರ್ ಶ್ರಾಫ್ ಪ್ರಕರಣದಲ್ಲಿ ಆರೋಪಿಸಲಾಗಿರುವ ಕಾರ್ಯವೈಖರಿಗೂ ಸಿಧು ಮೂಸೆವಾಲಾ ಹತ್ಯೆ ಮತ್ತು ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಗಳಲ್ಲಿನ ಕೆಲವು ಅಂಶಗಳಿಗೂ ಸಾಮ್ಯತೆ ಇದೆ.
ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಕೆನಡಾದಲ್ಲಿದ್ದ ಗೋಲ್ಡಿ ಬ್ರಾರ್ ಆರು ಶೂಟರ್ಗಳನ್ನು ಕಳುಹಿಸಿ ಹತ್ಯೆಯ ಹೊಣೆಗಾರಿಕೆ ನೀಡಿದ್ದ ಎಂಬ ಆರೋಪ ಕೇಳಿಬಂದಿತ್ತು.
ಇನ್ನು ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ನ ಸಹೋದರ ಅನ್ಮೋಲ್ ಬಿಷ್ಣೋಯ್ ಸಂಚು ರೂಪಿಸಿದ್ದಾನೆ ಎಂಬ ಆರೋಪವಿತ್ತು. ಶೂಟರ್ಗಳನ್ನು ಆಯ್ಕೆ ಮಾಡಿಕೊಂಡು ಹತ್ಯೆಗೆ ಬಳಸಿಕೊಳ್ಳಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಟೈಗರ್ ಶ್ರಾಫ್ ಪ್ರಕರಣದಲ್ಲಿ ಅಮೆರಿಕದಲ್ಲಿರುವ ಅನಿಲ್ ಪಂಡಿತ್ ಯುವಕರನ್ನು ಬಳಸಿಕೊಂಡಿದ್ದಾನೆ . ಈ ಪ್ರಕರಣಗಳಲ್ಲಿ ಕಂಡುಬರುವ ಸಾಮಾನ್ಯ ಅಂಶವೆಂದರೆ, ಅಪರಾಧ ಕೃತ್ಯವನ್ನು ಒಬ್ಬನೇ ವ್ಯಕ್ತಿಯ ಮೂಲಕ ನಡೆಸುವುದಕ್ಕಿಂತ, ವಿವಿಧ ಹಂತಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಬಳಸಿಕೊಳ್ಳುವ ಜಾಲವೊಂದು ಕಾರ್ಯ ನಿರ್ವಹಿಸುತ್ತಿದೆ ಎಂಬ ತನಿಖಾ ಸಂಸ್ಥೆಗಳ ಅನುಮಾನ.
ವರದಿಗಳ ಪ್ರಕಾರ, ವಿದೇಶದಲ್ಲಿರುವ ಪ್ರಮುಖ ಗ್ಯಾಂಗ್ಸ್ಟರ್ಗಳು ಸಂಚು ರೂಪಿಸುತ್ತಾರೆ. ನಂತರ ಸ್ಥಳೀಯ ಸಂಪರ್ಕಗಳ ಮೂಲಕ ಯುವಕರನ್ನು ಆಯ್ಕೆ ಮಾಡಲಾಗುತ್ತದೆ. ಅವರ ಮೂಲಕ ಗುರಿಯಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಸೂಕ್ತ ಸಮಯದಲ್ಲಿ ದಾಳಿ ನಡೆಸಲು ಪ್ರಯತ್ನಿಸಲಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಸಂಚು ರೂಪಿಸುವವರು, ಹಣಕಾಸು ವ್ಯವಸ್ಥೆ ಮಾಡುವವರು ಮತ್ತು ನೇರವಾಗಿ ಅಪರಾಧದಲ್ಲಿ ಭಾಗವಹಿಸುವವರ ನಡುವೆ ಹಲವು ಹಂತಗಳ ಸಂಪರ್ಕವಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಯುವಕರನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತಾರೆ?
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಕಾರ್ಯವೈಖರಿಯಲ್ಲಿ ಯುವಕರನ್ನು ಬಳಸಿಕೊಳ್ಳುವ ತಂತ್ರ ಪ್ರಮುಖವಾಗಿದೆ. ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಸುಮಾರು ಒಂದು ವರ್ಷದ ಸಿದ್ಧತೆ ನಡೆದಿತ್ತು. ಈ ಪ್ರಕರಣದಲ್ಲಿ ಅಂಕಿತ್ ಸಿರ್ಸಾ ಸೇರಿದಂತೆ ಹಲವು ಶೂಟರ್ಗಳ ಹೆಸರು ಕೇಳಿಬಂದಿತ್ತು. ಟೈಗರ್ ಶ್ರಾಫ್ ಪ್ರಕರಣದಲ್ಲಿಯೂ 18ರಿಂದ 21 ವರ್ಷದೊಳಗಿನ ಯುವಕರನ್ನು ಬಳಸಿಕೊಳ್ಳಲಾಗಿದೆ.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿರುವ ಕಡಿಮೆ ವಯಸ್ಸಿನ ಹಾಗೂ ಅಪರಾಧ ಜಗತ್ತಿನಲ್ಲಿ ಹೆಚ್ಚಿನ ಅನುಭವವಿಲ್ಲದ ಯುವಕರನ್ನು ಇಂತಹ ಗ್ಯಾಂಗ್ಗಳು ಗುರಿಯಾಗಿಸಿಕೊಳ್ಳುತ್ತವೆ. ಆರಂಭದಲ್ಲಿ ಯುವಕರಿಗೆ ಸಣ್ಣಪುಟ್ಟ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಬೆದರಿಕೆ ಸಂದೇಶಗಳನ್ನು ಕಳುಹಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯ ಪೋಸ್ಟ್ಗಳನ್ನು ಪ್ರಕಟಿಸುವುದು ಅಥವಾ ಇತರರಿಗೆ ವಸ್ತುಗಳನ್ನು ತಲುಪಿಸುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಕ್ರಮೇಣ ಗ್ಯಾಂಗ್ನೊಂದಿಗೆ ಅವರ ಸಂಪರ್ಕ ಹೆಚ್ಚಾದಂತೆ, ದೊಡ್ಡ ಅಪರಾಧ ಕೃತ್ಯಗಳಲ್ಲಿಯೂ ಅವರನ್ನು ಬಳಸಿಕೊಳ್ಳುತ್ತದೆ.
ಕೆಲವು ಪ್ರಕರಣಗಳಲ್ಲಿ 30ರಿಂದ 50 ಸಾವಿರ ರೂಪಾಯಿಗಳಂತಹ ಮೊತ್ತದ ಆಮಿಷವೊಡ್ಡಿ ಗಂಭೀರ ಅಪರಾಧಗಳಿಗೆ ಯುವಕರನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಆರೋಪಗಳಿವೆ. ಅಂದರೆ, ಅಪರಾಧದ ಗಂಭೀರತೆಗೂ ಶೂಟರ್ಗೆ ನೀಡಲಾಗುವ ಹಣಕ್ಕೂ ನೇರ ಸಂಬಂಧವಿರಬೇಕೆಂದಿಲ್ಲ ಎಂಬುದು ಆತಂಕವಾಗಿದೆ. ಯುವಕರನ್ನು ಸೆಳೆಯಲು ಹಣದ ಜೊತೆಗೆ ಗ್ಯಾಂಗ್ನ ಭಾಗವಾಗುವ ಅವಕಾಶ, ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಗಳಿಸುವ ಆಸೆ, ಅಪರಾಧ ಜಗತ್ತಿನಲ್ಲಿ ಪ್ರಭಾವ ಬೆಳೆಸಿಕೊಳ್ಳುವ ಹಂಬಲ ಮತ್ತು ಜೈಲಿನಲ್ಲಿರುವ ಗ್ಯಾಂಗ್ಸ್ಟರ್ಗಳ ನಿಷ್ಠಾವಂತ ಅನುಯಾಯಿಯಾಗುವ ಆಮಿಷವನ್ನೂ ಬಳಸಿಕೊಳ್ಳಲಾಗುತ್ತದೆ .
ಶೂಟರ್ಗಳಿಗೆ ಹಣ ತಲುಪುವುದು ಹೇಗೆ?
ಇಂತಹ ಪ್ರಕರಣಗಳಲ್ಲಿ ಹಣಕಾಸಿನ ವಹಿವಾಟು ತನಿಖೆಯ ಪ್ರಮುಖ ಭಾಗವಾಗಿದೆ. ಶೂಟರ್ಗಳಿಗೆ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳ ಮೂಲಕವೇ ನೀಡಲಾಗುತ್ತದೆ ಎಂಬುದಿಲ್ಲ. ಹವಾಲಾ ಜಾಲ, ನಗದು ಸಾಗಣೆ ಮತ್ತು ಸಣ್ಣ ಮೊತ್ತಗಳ ಹಲವು ವಹಿವಾಟುಗಳ ಮೂಲಕ ಹಣ ತಲುಪಿಸಲಾಗುತ್ತದೆ. ಕೆಲವೊಮ್ಮೆ ಸ್ಥಳೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳ ಮೂಲಕವೂ ಹಣವನ್ನು ತಲುಪಿಸಲಾಗುತ್ತದೆ.
ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿಯೂ ಹವಾಲಾ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ತನಿಖೆ ನಡೆದಿತ್ತು.ಇಂತಹ ವಹಿವಾಟುಗಳಲ್ಲಿ ಹಣ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ನೇರ ಸಂಪರ್ಕ ಕಡಿಮೆ ಮಾಡುವ ಮೂಲಕ ತನಿಖಾಧಿಕಾರಿಗಳಿಗೆ ಹಣದ ಮೂಲವನ್ನು ಪತ್ತೆಹಚ್ಚುವುದು ಕಷ್ಟವಾಗುವ ಸಾಧ್ಯತೆಯಿದೆ. ಆದರೆ, ಪ್ರತಿಯೊಂದು ಪ್ರಕರಣದಲ್ಲಿಯೂ ಒಂದೇ ರೀತಿಯ ಹಣಕಾಸು ವ್ಯವಸ್ಥೆ ಬಳಕೆಯಾಗುತ್ತದೆ ಎಂದು ಹೇಳಲಾಗದು. ನಿರ್ದಿಷ್ಟ ಪ್ರಕರಣಗಳಲ್ಲಿ ತನಿಖೆಯಿಂದ ದೃಢಪಟ್ಟ ಮಾಹಿತಿಯ ಆಧಾರದ ಮೇಲೆಯೇ ಅಂತಿಮ ನಿರ್ಧಾರಕ್ಕೆ ಬರಬೇಕಾಗುತ್ತದೆ.
‘ಡಿಸ್ಪೋಸಬಲ್ ಶೂಟರ್’ ಮಾದರಿ: ಗ್ಯಾಂಗ್ಸ್ಟರ್ಗಳಿಗೆ ಹೇಗೆ ಅನುಕೂಲ?
‘ಲೋ ಕಾಸ್ಟ್, ಡಿಸ್ಪೋಸಬಲ್ ಶೂಟರ್’ ಎಂಬ ಪದವನ್ನು ಇಲ್ಲಿ ಕಡಿಮೆ ವೆಚ್ಚದಲ್ಲಿ ನೇಮಿಸಿಕೊಳ್ಳುವ ಮತ್ತು ಅಪರಾಧದ ಬಳಿಕ ಸುಲಭವಾಗಿ ಕೈಬಿಡಬಹುದಾದ ಶೂಟರ್ಗಳ ಮಾದರಿಯನ್ನು ವಿವರಿಸಲು ಬಳಸಲಾಗಿದೆ. ಈ ಮಾದರಿಯಲ್ಲಿ ನೇರವಾಗಿ ಅಪರಾಧದಲ್ಲಿ ಭಾಗಿಯಾಗುವ ಯುವಕರೇ ಪೊಲೀಸರ ಕೈಗೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು. ಆದರೆ, ಅವರ ಹಿಂದೆ ಇರುವ ಸಂಚುಕೋರರು, ಹಣಕಾಸಿನ ವ್ಯವಸ್ಥೆ ಮಾಡುವವರು ಮತ್ತು ಇತರ ಸಂಪರ್ಕಗಳವರೆಗೆ ತನಿಖೆ ತಲುಪುವುದು ಕಷ್ಟವಾಗಬಹುದು ಎಂಬುದು ತನಿಖಾ ಸಂಸ್ಥೆಗಳ ಆತಂಕವಾಗಿದೆ. ಯುವಕರನ್ನು ಬಳಸಿಕೊಳ್ಳುವ ಮೂಲಕ ತಮ್ಮ ಗುರುತನ್ನು ಮರೆಮಾಚುವುದು, ನೇರ ಸಂಪರ್ಕವನ್ನು ಕಡಿಮೆ ಮಾಡುವುದು ಮತ್ತು ಅಪರಾಧದ ಹೊಣೆಯನ್ನು ಕೆಳಹಂತದ ವ್ಯಕ್ತಿಗಳ ಮೇಲೆ ಉಳಿಸುವ ಪ್ರಯತ್ನ ನಡೆಯಬಹುದು ಎಂಬ ಅನುಮಾನವೂ ಇದೆ.
ಆದರೆ, ಇಂತಹ ಜಾಲಗಳ ನಿಖರ ಕಾರ್ಯವೈಖರಿ ಮತ್ತು ನಿರ್ದಿಷ್ಟ ವ್ಯಕ್ತಿಗಳ ಪಾತ್ರವನ್ನು ನ್ಯಾಯಾಲಯದಲ್ಲಿ ಸಾಬೀತಾಗುವ ಸಾಕ್ಷ್ಯಗಳ ಆಧಾರದ ಮೇಲೆಯೇ ನಿರ್ಧರಿಸಬೇಕಾಗುತ್ತದೆ.
ಒಟ್ಟಿನಲ್ಲಿ, ಈ ಪ್ರಕರಣಗಳಲ್ಲಿ ತನಿಖೆಯಿಂದ ಹೊರಬರುವ ಅಂಶಗಳು ಸಂಘಟಿತ ಅಪರಾಧ ಜಾಲಗಳ ವಿರುದ್ಧ ಹೋರಾಡಲು ಹಣಕಾಸಿನ ವಹಿವಾಟು, ಡಿಜಿಟಲ್ ಸಂಪರ್ಕಗಳು ಮತ್ತು ಸ್ಥಳೀಯ ಜಾಲಗಳ ಕುರಿತು ಆಳವಾದ ತನಿಖೆ ಅಗತ್ಯವಿದೆ ಎಂಬುದನ್ನು ಸೂಚಿಸುತ್ತವೆ.
