ನವದೆಹಲಿ: ಕೇಂದ್ರ ಸರ್ಕಾರದ(Union Govt) ಪ್ರಮುಖ ಆಡಳಿತ ಕೇಂದ್ರವಾಗಿರುವ ನವದೆಹಲಿಯ ಸೆಂಟ್ರಲ್ ವಿಸ್ಟಾ ವ್ಯಾಪ್ತಿಯ ಐತಿಹಾಸಿಕ ನಾರ್ತ್ ಬ್ಲಾಕ್ (North Block) ಕಟ್ಟಡದಿಂದ ಸೋಮವಾರ ಬೆಳಿಗ್ಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಳಿಗ್ಗೆ 11:10ರ ಸುಮಾರಿಗೆ ನಾರ್ತ್ ಬ್ಲಾಕ್ನಲ್ಲಿ ಹೊಗೆ ಬರುತ್ತಿರುವ ಬಗ್ಗೆ ದೆಹಲಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ತಕ್ಷಣವೇ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಕಟ್ಟಡದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ದೃಢಪಟ್ಟಿದೆ.
ಸಂಸತ್ತಿಗೆ ತೆರಳುತ್ತಿದ್ದ ಶಿವಸೇನಾ ಸಂಸದ ಮಿಲಿಂದ್ ದೇವ್ರಾ ಅವರು ಬೆಳಿಗ್ಗೆ 11:12ಕ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ದಟ್ಟ ಕಪ್ಪು ಹೊಗೆ ಆವರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸಂಸತ್ತಿಗೆ ತೆರಳುತ್ತಿದ್ದ ವೇಳೆ ನಾರ್ತ್ ಬ್ಲಾಕ್ ಹಿಂಬಾಗದಿಂದ ದಟ್ಟ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಅಲ್ಲಿ ಬೆಂಕಿ ಕಾಣಿಸಿಕೊಂಡಂತೆ ತೋರುತ್ತಿದೆ. ಎಲ್ಲರೂ ಸುರಕ್ಷಿತವಾಗಿರಲಿ ಮತ್ತು ತುರ್ತು ರಕ್ಷಣಾ ತಂಡಗಳು ಶೀಘ್ರವಾಗಿ ಸ್ಪಂದಿಸಲಿ ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಂಸತ್ ಭವನದ ಸನಿಹದಲ್ಲೇ ಇರುವ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಸಾಂಪ್ರದಾಯಿಕವಾಗಿ ಕೇಂದ್ರ ಗೃಹ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯದ (ಆರ್ಥಿಕ ವ್ಯವಹಾರಗಳು ಮತ್ತು ಕಂದಾಯ ಇಲಾಖೆಗಳು) ಕಚೇರಿಗಳು ಕಾರ್ಯಾಚರಿಸುತ್ತಿದ್ದವು. ಆದರೆ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಸರ್ಕಾರಿ ಕಚೇರಿಗಳು ಸೇವಾ ತೀರ್ಥ ಮತ್ತು ಕರ್ತವ್ಯ ಭವನ ಸಂಕೀರ್ಣಗಳಿಗೆ ಸ್ಥಳಾಂತರಗೊಂಡ ನಂತರ, ಈ ಪಾರಂಪರಿಕ ಕಟ್ಟಡವನ್ನು ‘ಯುಗೇ ಯುಗೀನ್ ಭಾರತ ರಾಷ್ಟ್ರೀಯ ವಸ್ತುಸಂಗ್ರಹಾಲಯ’ವಾಗಿ (Yuge Yugeen Bharat National Museum) ಪರಿವರ್ತಿಸುವ ನವೀಕರಣ ಕಾರ್ಯಗಳು ನಡೆಯುತ್ತಿವೆ.
