ನವದೆಹಲಿ: ಈಶಾನ್ಯ ದೆಹಲಿಯಲ್ಲಿ (Delhi) ಕಟ್ಟಡವೊಂದರ ಮೇಲ್ಛಾವಣಿ ಕುಸಿದು (Building Collapses) ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. 60 ಮತ್ತು 36 ವರ್ಷ ವಯಸ್ಸಿನ ಇಬ್ಬರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಇವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಹರ್ಷ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲನ್ ಗಾರ್ಡನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ದೆಹಲಿ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ ಪ್ರಕರಣ; ಮಗು, ಗರ್ಭಿಣಿ ಸೇರಿ ಮೂವರು ದುರ್ಮರಣ
ಸಂಜೆ 6:46ಕ್ಕೆ ಕಟ್ಟಡ ಕುಸಿದು ಬಿದ್ದಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ದೆಹಲಿ ಸಚಿವ ಕಪಿಲ್ ಮಿಶ್ರಾ ಮತ್ತು ಆಶಿಶ್ ಸೂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಕಪಿಲ್ ಮಿಶ್ರಾ, ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಎಫ್ (NDRF) ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಇಬ್ಬರು ವ್ಯಕ್ತಿಗಳು ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದೊಂದು ದುರದೃಷ್ಟಕರ ಘಟನೆ ಎಂದಿದ್ದಾರೆ.
ಮೇಲ್ನೋಟಕ್ಕೆ ಕಂಡುಬರುವಂತೆ ಹೊಸದಾಗಿ ಲಿಂಟೆಲ್ ಅಳವಡಿಸುವಾಗ ಅದು ಕುಸಿದು ಬಿದ್ದಿದೆ. ಇದರಿಂದ ಕೆಳಗಿನ ಮಹಡಿಯ ಮೇಲ್ಛಾವಣಿಯೂ ಕುಸಿದು ಬಿದ್ದಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡವೊಂದು ಕುಸಿದುಬಿದ್ದು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು. ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ (South Campus) ಬಳಿ ಇದ್ದ ಆ ಕಟ್ಟಡವನ್ನು ಹುಡುಗರಿಗಾಗಿ ‘ಪೇಯಿಂಗ್ ಗೆಸ್ಟ್’ (PG) ವಸತಿ ಗೃಹವಾಗಿ ಬಳಸಲಾಗುತ್ತಿತ್ತು. ಆ ಕಟ್ಟಡವು ಒಂದು ಬೇಸ್ಮೆಂಟ್ (ನೆಲಮಹಡಿಯ ಕೆಳಗಿನ ಭಾಗ) ಮತ್ತು ಐದು ಮೇಲಿನ ಮಹಡಿಗಳನ್ನು ಹೊಂದಿತ್ತು. ಬೇಸ್ಮೆಂಟ್ನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಕಟ್ಟಡ ಕುಸಿದು ಬಿದ್ದಿತ್ತು. ಇದನ್ನೂ ಓದಿ: ದೆಹಲಿಯಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ

