ವಾಷಿಂಗ್ಟನ್: ಅಮೆರಿಕದ ಗುಪ್ತಚರ ಸಂಸ್ಥೆಗಳು ಎನ್ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರನ್ನ ಗುರಿಯಾಗಿಸಿಕೊಂಡ ಚೀನಾ ಗೂಢಚಾರಿಕೆ ಸಂಚಿನ ಬಗ್ಗೆ ಮಾಹಿತಿ ನೀಡಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸಿಂಗಾಪುರ ಮೂಲದ ಡೇಟಾ ಸೆಂಟರ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಚೀನಾದ ಗುಪ್ತಚರ ಇಲಾಖೆಗೆ ಮಾಹಿತಿ ಸಂಗ್ರಹಿಸಿ ನೀಡುತ್ತಿದ್ದಾರೆ ಅಂತಾ ಅಮೆರಿಕದ ಗುಪ್ತಚರ ಸಂಸ್ಥೆಗಳು ಕಳೆದ ವರ್ಷವೇ ಮಾಹಿತಿ ನೀಡಿದ್ದವು. ಈ ಅಧಿಕಾರಿ ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರೊಂದಿಗಿನ ಸಂಪರ್ಕದ ಮೂಲಕವೂ ಮಾಹಿತಿ ಪಡೆಯುತ್ತಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು ಎಂದಿದೆ ವರದಿ
ಯಾರು ಈ ಆಲಿಸ್ ಹುವಾಂಗ್?
ಚೀನಾ ಪ್ರಜೆಯಾಗಿರುವ ಆಲಿಸ್ ಹುವಾಂಗ್ (ಹುವಾಂಗ್ ಲೆ ಎಂದೂ ಪರಿಚಿತ) ಸಿಂಗಾಪುರ ಮೂಲದ ಮೆಗಾಸ್ಪೀಡ್ (Megaspeed) ಕಂಪನಿಯ ಹಿರಿಯ ಅಧಿಕಾರಿಯಾಗಿದ್ದಾರೆ. ಎನ್ವಿಡಿಯಾ ತಯಾರಿಸುವ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಚಿಪ್ಗಳನ್ನ ಚೀನಾದ ಕಂಪನಿಗಳು ಪಡೆದುಕೊಳ್ಳಲು ಮೆಗಾಸ್ಪೀಡ್ ನೆರವು ನೀಡುತ್ತಿದೆಯೇ ಎಂಬ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿದ್ದವು.
ಈ ತನಿಖೆಯ ವೇಳೆ ಆಲಿಸ್ ಹುವಾಂಗ್ ಚೀನಾ ಸರ್ಕಾರಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಬಂದಿದ್ದವು. ಜಾಗತಿಕ ಎಐ ಉದ್ಯಮದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಜೆನ್ಸನ್ ಹುವಾಂಗ್ ಅವರೊಂದಿಗಿನ ಆಲಿಸ್ ಹುವಾಂಗ್ ಅವರ ಸಂಪರ್ಕವೂ ಅಮೆರಿಕದ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು.
ಎಐ ಕ್ಷೇತ್ರದಲ್ಲಿ ಚೀನಾಕ್ಕಿಂತ ಮುಂದಿರುವ ಅಮೆರಿಕದ ಪ್ರಯತ್ನದಲ್ಲಿ ಎನ್ವಿಡಿಯಾ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ, ಕಂಪನಿಯ ಮುಖ್ಯಸ್ಥರ ಸಂಪರ್ಕದ ಮೂಲಕ ಆಲಿಸ್ ಹುವಾಂಗ್ ಅವರು ಎನ್ವಿಡಿಯಾದ ಆಂತರಿಕ ಮಾಹಿತಿ ಅಥವಾ ಚೀನಾಕ್ಕೆ ಚಿಪ್ಗಳ ರಫ್ತು ಕುರಿತು ಟ್ರಂಪ್ ಅವರ ನಿಲುವಿನ ಬಗ್ಗೆ ಮಾಹಿತಿ ಪಡೆದಿರಬಹುದೇ ಎಂಬ ಪ್ರಶ್ನೆಗಳು ಎದ್ದಿದ್ದವು.
ಈ ಕುರಿತು ಕಳೆದ ವರ್ಷವೇ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೂಲಗಳನ್ನ ಉಲ್ಲೇಖಿಸಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
