ನವದೆಹಲಿ: ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ, ಗರ್ಭಿಣಿ, ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮೂರು ವರ್ಷದ ಮಗುವೂ ಸೇರಿದಂತೆ ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.
ಅವಶೇಷಗಳಡಿ ಸಿಲುಕಿದ್ದ ಎಂಟು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವಶೇಷಗಳ ನಡುವೆ ತಲೆ ತುಂಡಾದ ಸ್ಥಿತಿಯಲ್ಲಿದ್ದ ಸುಮಾರು ಒಂದೂವರೆ ವರ್ಷದ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಉತ್ತರಾಖಂಡದಲ್ಲಿ ಸಂಭವಿಸಿದ ಭೂಕಂಪ ಸಂಭವಿಸಿತ್ತು. ದೆಹಲಿಯಲ್ಲೂ ಕಂಪನದ ಅನುಭವವಾಗಿತ್ತು. ಪರಿಣಾಮ ಕಟ್ಟಡದಲ್ಲಿ ಉಂಟಾದ ಬಿರುಕುಗಳು, ಅದು ಕುಸಿದು ಬೀಳಲು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಈ ಘಟನೆಗೆ ನಿಖರವಾದ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾಗ, ಅವಶೇಷಗಳಡಿ ಸಿಲುಕಿದ್ದವರ ಧ್ವನಿ ಕೇಳಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಪ್ರಕಾರ, ಭೂಕಂಪದ ನಂತರ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಕಟ್ಟಡದ ಮಾಲೀಕರು ಅದನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

