ಚಂಡೀಗಢ: ಮದುವೆಯಾದ ಬಳಿಕ ಮಹೀಂದ್ರಾ ಥಾರ್ (Mahindra Thar) ಕಾರು ಹಾಗೂ ಬೈಕ್ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರಸ್ತೆಯಲ್ಲೇ ಥಳಿಸಿರುವ ಘಟನೆ ಪಂಜಾಬ್ನ (Punjab) ಲೂಧಿಯಾನಾದಲ್ಲಿ (Ludhiana) ನಡೆದಿದೆ. ಅಕ್ಟೋಬರ್ 21ರ ರಾತ್ರಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ರಿತೀಶ್ ಶರ್ಮಾ ಎಂಬಾತ ತನ್ನ ಪತ್ನಿ ಟ್ವಿಂಕಲ್ಳನ್ನು ಮನೆಯ ಹೊರಗೆ ಕಪಾಳಮೋಕ್ಷ ಮಾಡಿ, ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕಿರುಚಾಟ ಕೇಳಿ ಹೊರಬಂದ ಅಕ್ಕಪಕ್ಕದ ಮನೆಯವರು ತಕ್ಷಣ ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಟ್ವಿಂಕಲ್ ಪೊಲೀಸರಿಗೆ ದೂರು ನೀಡಿದ್ದು, ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಯನ್ನೂ ಸಲ್ಲಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾದಲ್ಲಿ ಅಂಬಾರಿ ಆನೆ ರಂಪಾಟ – ಅಧಿಕಾರಿಗಳಿಗೆ ಕ್ಲೀನ್ಚಿಟ್
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ರಿತೀಶ್ ಶರ್ಮಾ ಹಾಗೂ ಸಲೂನ್ ನಡೆಸುತ್ತಿದ್ದ ಟ್ವಿಂಕಲ್ ಕಳೆದ ವರ್ಷ ನವೆಂಬರ್ನಲ್ಲಿ ವಿವಾಹವಾಗಿದ್ದರು. ರಿತೀಶ್ಗೆ ಇದು ಮೊದಲ ಮದುವೆಯಾಗಿದ್ದರೆ, ಟ್ವಿಂಕಲ್ಗೆ ಇದು ಎರಡನೇ ಮದುವೆಯಾಗಿತ್ತು. ಇದನ್ನೂ ಓದಿ: ಸೇಡಂ | ಕಮಲಾವತಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ
ಸುಮಾರು ಎರಡು ವರ್ಷಗಳ ಹಿಂದೆ ಟ್ವಿಂಕಲ್ ವಿಚ್ಛೇದನ ಪ್ರಕ್ರಿಯೆಯಲ್ಲಿದ್ದಾಗ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಮದುವೆಯಾದ ಮೂರು ತಿಂಗಳ ಬಳಿಕ ರಿತೀಶ್ ಮಹೀಂದ್ರಾ ಥಾರ್ ಕಾರು ನೀಡುವಂತೆ ಬೇಡಿಕೆಯಿಟ್ಟಿದ್ದಾನೆ ಎಂದು ಟ್ವಿಂಕಲ್ ಆರೋಪಿಸಿದ್ದಾರೆ. ಈ ವಿಚಾರವಾಗಿ ದಂಪತಿ ನಡುವೆ ಬಹುತೇಕ ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಧ್ಯಸ್ಥಿಕೆದಾರರೊಬ್ಬರು ಮಧ್ಯಪ್ರವೇಶಿಸಿ ಇಬ್ಬರ ನಡುವೆ ರಾಜಿ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ಬಳಿಕ ರಿತೀಶ್ ಬೈಕ್ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ ಎಂದು ಟ್ವಿಂಕಲ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಮಳೆ ಆರ್ಭಟ – ಕುಶಾಲನಗರ ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಹಾನಿ
ಘಟನೆಯ ದಿನ ಬೈಕ್ ವಿಚಾರವಾಗಿ ಮತ್ತೆ ಜಗಳ ನಡೆದಿದೆ. ಇದರಿಂದ ಭಯಭೀತರಾದ ಟ್ವಿಂಕಲ್ ತನ್ನನ್ನು ರಕ್ಷಿಸಿಕೊಳ್ಳಲು ಪಕ್ಕದ ಮನೆಯೊಂದಕ್ಕೆ ಓಡಿ ಹೋಗಿದ್ದಾರೆ. ಆದರೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ರಿತೀಶ್ ಅಲ್ಲಿಯೂ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯನ್ನು ರಸ್ತೆಯ ಮೇಲೆ ಎಳೆದಾಡಿ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಟ್ವಿಂಕಲ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ರಿತೀಶ್ ಶರ್ಮಾ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ – ಕೆಆರ್ಎಸ್ ಡ್ಯಾಮ್ ಒಳಹರಿವು ಹೆಚ್ಚಳ
